Advertisement

World Shooting Championship: ಬಂಗಾರ ಗೆದ್ದ ಅಮನ್‌ಪ್ರೀತ್‌ ಸಿಂಗ್‌

11:00 PM Aug 23, 2023 | Team Udayavani |

ಬಾಕು (ಅಜರ್‌ಬೈಜಾನ್‌): ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಬುಧವಾರ ಚಿನ್ನ ಹಾಗೂ ಕಂಚಿನ ಪದಕಕ್ಕೆ ಗುರಿ ಇರಿಸಿದೆ. ಪುರುಷರ 25 ಮೀ. ಸ್ಟಾಂಡರ್ಡ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಅಮನ್‌ಪ್ರೀತ್‌ ಸಿಂಗ್‌ ಬಂಗಾರದ ಪದಕ ಗೆದ್ದರೆ, ವನಿತೆಯರ ತಂಡ ಸ್ಟಾಂಡರ್ಡ್‌ ಪಿಸ್ತೂಲ್‌ ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿತು.

Advertisement

ಇದರೊಂದಿಗೆ ಭಾರತ ಈ ಕೂಟದಲ್ಲಿ 5 ಚಿನ್ನ ಮತ್ತು 4 ಕಂಚಿನ ಪದಕಗಳನ್ನು ಜಯಿಸಿ ದಂತಾಯಿತು. ಪದಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿತು. ಚೀನ ಅಗ್ರಸ್ಥಾನದಲ್ಲಿದೆ. ಚೀನ ಒಟ್ಟು 24 ಪದಕ ಜಯಿಸಿದ್ದು, ಇದರಲ್ಲಿ 13 ಬಂಗಾರ ಸೇರಿದೆ.

ಪುರುಷರ ಸ್ಟಾಂಡರ್ಡ್‌ ಪಿಸ್ತೂಲ್‌ ಸ್ಪರ್ಧೆಯ ಫೈನಲ್‌ನಲ್ಲಿ ಅಮನ್‌ದೀಪ್‌ 577 ಅಂಕ ಗಳಿಸಿದರು. ಕೊರಿಯಾದ ಲೀ ಗುನ್ಯೋಕ್‌ ಬೆಳ್ಳಿ (574) ಮತ್ತು ಫ್ರಾನ್ಸ್‌ನ ಕೆವಿನ್‌ ಕ್ಯಾಪೋನ್‌ (574) ಕಂಚು ಗೆದ್ದರು. ಕೊರಿಯನ್‌ ಸ್ಪರ್ಧಿಗಿಂತ ಕಡಿಮೆ “ಇನ್ನರ್‌ ಟೆನ್ಸ್‌’ಗೆ ಗುರಿ ಇರಿಸಿದ ಕಾರಣ ಕ್ಯಾಪೋನ್‌ ತೃತೀಯ ಸ್ಥಾನಿಯಾಗಬೇಕಾಯಿತು.
ಆದರೆ ಪುರುಷರ ತಂಡ ವಿಭಾಗದಲ್ಲಿ ಭಾರತ ಸ್ವಲ್ಪದರಲ್ಲೇ ಕಂಚಿನಿಂದ ವಂಚಿತವಾಯಿತು. ಹರ್ಷ ಗುಪ್ತ, ಅಕ್ಷಯ್‌ ಜೈನ್‌ ಮತ್ತು ಅಮನ್‌ಪ್ರೀತ್‌ ಸಿಂಗ್‌ ಈ ತಂಡದಲ್ಲಿದ್ದರು.

ವನಿತೆಯರಿಗೆ ಕಂಚು
ವನಿತೆಯರ 25 ಮೀ. ಸ್ಟಾಂಡರ್ಡ್‌ ಪಿಸ್ತೂಲ್‌ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ಒಲಿಯಿತು. ತಿಯಾನಾ, ಯಾಶಿತಾ ಮತ್ತು ಕೃತಿಕಾ ಶರ್ಮ ಸೇರಿಕೊಂಡು 1,601 ಅಂಕಗಳನ್ನು ಕಲೆಹಾಕಿದರು. ಚೀನ ಚಿನ್ನ
ಗೆದ್ದರೆ, ಅಜರ್‌ಬೈಜಾನ್‌ ಬೆಳ್ಳಿ ಜಯಿಸಿತು.

Advertisement

Udayavani is now on Telegram. Click here to join our channel and stay updated with the latest news.

Next