Advertisement

ಹಿರಿಯರನ್ನು ಮಕ್ಕಳಂತೆ ಆರೈಕೆ ಮಾಡಿ

03:21 PM Oct 02, 2022 | Team Udayavani |

ದೇವನಹಳ್ಳಿ: ಹಿರಿಯ ನಾಗರಿಕರನ್ನು ಗೌರವಯುತವಾಗಿ ಕಾಣುವ ಮೂಲಕ ಅವರಲ್ಲಿರುವ ಜ್ಞಾನ ಮತ್ತು ಅನುಭವಗಳನ್ನು ಇಂದಿನ ಯುವಕರು ಬಳಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಜಿಲ್ಲಾಧಿಕಾರಿ ಆರ್‌. ಲತಾ ತಿಳಿಸಿದರು.

Advertisement

ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮಾತ ನಾಡಿದ ಅವರು, ದೇಹಕ್ಕೆ ವಯಸ್ಸಾಗಿದ್ದರೂ ಸಹ ಯುವಕರಂತೆ ಹಿರಿಯರು ಲವಲವಿಕೆಯಿಂದ, ಕ್ರಿಯಾಶೀಲತೆಯಿಂದ ಹಾಡುಗಾರಿಕೆ ಪ್ರತಿಯೊಂದರಲ್ಲೂ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು.

ಆರೋಗ್ಯದ ಕಡೆ ಗಮನಹರಿಸಿ: ಮನೆಯಲ್ಲಿ ಹಿರಿಯರು ಇದ್ದರೆ ನಮಗೆ ಖುಷಿ ತರುತ್ತದೆ. ಹಿರಿಯರು ಮನೆಯಲ್ಲಿದ್ದರೆ ಆರೋಗ್ಯಕರ ವಾತಾವರಣ ಇರುತ್ತದೆ. ಅಜ್ಜ-ಅಜ್ಜಿ ಮನೆಯಲ್ಲಿದ್ದರೆ ಮಕ್ಕಳಿಗೆ ಯಾವುದೇ ತರಹದ ಹೊಟ್ಟೆನೋವು ಇತರೆ ಸಮಸ್ಯೆ ಬಂದಾಗ ಅದಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಹಿರಿ ಯರು ಮನೆಯಲ್ಲಿದ್ದರೆ ಆರೋಗ್ಯದ ಕಡೆ ಹೋಗಲು ಅನುಕೂಲ ಆಗುತ್ತದೆ. ಹಿರಿಯರು ಮನೆ ಯಲ್ಲಿದ್ದರೆ ನಮ್ಮ ಪೂರ್ವಜನ್ಮದ ಪುಣ್ಯವಾಗಿದೆ. ಹಿರಿಯ ನಾಗರಿಕರನ್ನು ಮಕ್ಕಳಂತೆ ಆರೈಕೆ ಮಾಡಬೇಕು. ಹಿರಿಯರು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು. ಆರೋಗ್ಯ ಕ್ಷೇತ್ರ ಸಾಕಷ್ಟು ಬೆಳೆಯುತ್ತಿದೆ ಎಂದು ಹೇಳಿದರು.

ಜಿಪಂ ಸಿಇಒ ರೇವಣಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿಗಳನ್ನು ಬಿಟ್ಟು ಜಪಾನ್‌, ಅಮೆರಿಕಾ, ಯೂರೋಪ್‌, ಇತರೆ ದೇಶಗಳ ಕಡೆ ನೌಕರಿಗೆ ಹೋಗುತ್ತಾರೆ. ವಯಸ್ಸಾದ ತಂದೆ-ತಾಯಿ ಇಲ್ಲೇ ಇದ್ದು ತಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ. ಹಿರಿಯ ನಾಗರಿಕರು ತಮ್ಮ ಮಕ್ಕಳು ಮತ್ತು ಸೊಸೆಯಂದಿರಿಗೆ ಮಕ್ಕಳಾಗಿ ಮೊಮ್ಮಕ್ಕಳಾಗಿ ಆಟವಾಡುತ್ತಾ ಸಂತೋಷದಿಂದ ಸಮಯ ಕಳೆಯಬೇಕು ಎಂದರು.

ಪೋಷಕರಿಗೆ ಉತ್ತಮ ಸೌಲಭ್ಯ ಒದಗಿಸಿ: ಹಿರಿಯರ ನಾಗರಿಕರಲ್ಲಿ ಸ್ಪೂರ್ತಿ ತುಂಬುವ ಕೆಲಸ ಮಾಡಬೇಕು. ಯುವಜನತೆ ನಾವು ಸಹ ಮುಂದೆ ಹಿರಿಯ ನಾಗರಿಕರಾಗುತ್ತೇವೆ ಎಂಬುವುದನ್ನು ನೆನಪಿಟ್ಟು ಕೊಳ್ಳಬೇಕು. ಹಿರಿಯರು ಒಳ್ಳೆಯ ನಾಲ್ಕು ಮಾತು ನಿರೀಕ್ಷಿ ಸು ತ್ತಾರೆ. ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರಿನ್ನು ವೃದ್ಧಾಶ್ರಮಗಳಿಗೆ ಬಿಡುವ ಪದ್ಧತಿ ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿಯಾದ ಸಂಗತಿಯಾಗಿದ್ದು, ಮಕ್ಕಳು ತಮ್ಮ ಪೋಷಕರಿಗೆ ಉತ್ತಮ ಸೌಲಭ್ಯ ಒದಗಿಸಿ ಆರೈಕೆ ಮಾಡಬೇಕು ಎಂದರು.

Advertisement

ಅವಿಭಕ್ತ ಕುಟುಂಬ ಹೆಚ್ಚಾಗಲಿ: ಯುವಕರು ನಗರ ಜೀವನಕ್ಕೆ ಮಾರುಹೋಗಿ ತಮ್ಮ ಸಂಬಂಧಗಳನ್ನು ಕಡಿತಗೊಳಿಸುತ್ತಿದ್ದಾರೆ. ವಿಭಕ್ತ ಕುಟುಂಬದಿಂದ ಹಿರಿಯ ನಾಗರಿಕರು ಹೆಚ್ಚು ಸಮಸ್ಯೆ ಅನುಭವಿ ಸುತ್ತಿ ರುವುದರಿಂದ ಅವಿಭಕ್ತ ಕುಟುಂಬ ಹೆಚ್ಚಾಗಬೇಕು. ಮಕ್ಕಳು ಹಿರಿಯರಿಗೆ ಹೆಚ್ಚಿನ ಪ್ರೀತಿ ಮತ್ತು ಗೌರವ ನೀಡುವ ಮೂಲಕ ಆಸರೆಯಾಗಿರಬೇಕು. ಯುವಜನತೆ ಆಧುನಿಕತೆಯ ಗೀಳಿಗೆ ಬೀಳದೆ ಹಿರಿ ಯರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್‌. ನಟರಾಜ್‌, ಜಿಲ್ಲಾ ದಿವ್ಯಾಂಗರ ಕಲ್ಯಾಣಾಧಿಕಾರಿ ಎನ್‌.ಎಂ. ಜಗದೀಶ್‌, ನಿವೃತ್ತ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಭಾಕರ್‌, ನಿವೃತ್ತ ತಹಶೀಲ್ದಾರ್‌ ಸಿದ್ದಲಿಂಗಯ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಪೋಷಕರನ್ನು ವೃದ್ಧಾ ಶ್ರಮಕ್ಕೆ ಕಳಿಸಬೇಡಿ: ಡೀಸಿ : ಹಿರಿಯರ ಆಶೀರ್ವಾದದಿಂದ ಇಂದು ನಾವು ಬದುಕುತ್ತಿದ್ದೇವೆ. ಪೋಷಕರನ್ನು ಯಾವುದೇ ವೃದ್ಧಾಶ್ರಮಗಳಿಗೆ ಕಳುಹಿಸದೆ ಹೆತ್ತವರನ್ನು ನೋಡಿಕೊಳ್ಳುವುದು ಎಲ್ಲಾ ಮಕ್ಕಳ ಕರ್ತವ್ಯವಾಗಿದೆ. ಹಿರಿಯರನ್ನು ಗೌರವಿಸುವವರು ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಹಿರಿಯರನ್ನು ಸದಾಕಾಲ ಗೌರವದಿಂದ ಕಾಣಬೇಕು. ಪ್ರತಿಯೊಬ್ಬರೂ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮನೆಯಲ್ಲಿ ಹಿರಿಯರನ್ನು ಕೀಳಾಗಿ ಕಾಣದೆ ಅವರನ್ನು ಪ್ರೀತಿಯಿಂದ ಆರೈಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್‌.ಲತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next