Advertisement

ವಿಶ್ವಮಟ್ಟದಲ್ಲಿ ಭಾರತವನ್ನು ಏಕಾಂಗಿಯಾಗಿಸುವ ಪಾಕ್ ನ ಎಲ್ಲಾ ಪ್ರಯತ್ನ ವಿಫಲ

10:01 AM Aug 14, 2019 | Hari Prasad |

ಲಾಹೊರ್: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತೀಯ ಸರಕಾರದ ವಿರುದ್ಧ ವಿಶ್ವದ ಅಗ್ರ ದೇಶಗಳ ಮುಂದೆ ದೂರು ಒಯ್ದಿದ್ದ ಭಾರತದ ನೆರೆ ರಾಷ್ಟ್ರ ಪಾಕಿಸ್ಥಾನಕ್ಕೆ ಎಲ್ಲೆಡೆಯೂ ಮುಖಭಂಗವಾಗಿದೆ.

Advertisement

ಈ ಮೂಲಕ 370ನೇ ವಿಧಿ ರದ್ದತಿಯನ್ನೇ ನೆಪವಾಗಿರಿಸಿಕೊಂಡು ಭಾರತವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯನ್ನಾಗಿಸುವ ಇಮ್ರಾನ್ ಖಾನ್ ಸರಕಾರದ ಪ್ರಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ. ಮತ್ತು ಈ ವಿಚಾರವನ್ನು ಸ್ವತಃ ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿಯೇ ಒಪ್ಪಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ಪಾಕಿಸ್ಥಾನ ಪದೇ ಪದೇ ಮಾಡಿದ ಎಲ್ಲಾ ಪ್ರಯತ್ನಗಳಿಗೆ ಜಗತ್ತಿನ ಯಾವ ದೇಶಗಳೂ ಸೊಪ್ಪು ಹಾಕಿಲ್ಲ ಎಂಬುದನ್ನು ಆ ದೇಶದ ವಿದೇಶಾಂಗ ಸಚಿವರೇ ಖುದ್ದು ಒಪ್ಪಿಕೊಂಡಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ನಾವು ಎಣಿಸಿದಷ್ಟು ಬೆಂಬಲ ನಮಗೆ ಸಿಗಲಿಲ್ಲ ಎಂದು ಖುರೇಷಿ ಖೇದದಿಂದ ಹೇಳಿಕೊಂಡಿದ್ದಾರೆ.

ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳಾಗಿರುವ ಅಮೆರಿಕಾ ಹಾಗೂ ರಷ್ಯಾ ದೇಶಗಳು 370ನೇ ರದ್ದತಿ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ಈಗಾಗಲೇ ಹೇಳಿವೆ. ಇನ್ನು 370ನೇ ರದ್ದುಗೊಳಿಸುವ ವಿಚಾರದಲ್ಲಿ ಭಾರತ ಸರಕಾರವು ಶ್ವೇತ ಭವನಕ್ಕೆ ಮುಂಚಿತವಾಗಿ ಮಾಹಿತಿ ನೀಡಿತ್ತು ಎಂಬ ವಿಷಯವನ್ನೂ ಸಹ ಡೊನಾಲ್ಡ್ ಟ್ರಂಪ್ ಸರಕಾರವು ಅಲ್ಲಗಳೆದಿದೆ. ಮತ್ತು ಕಾಶ್ಮೀರ ವಿಷಯದಲ್ಲಿ ತೃತೀಯ ರಾಷ್ಟ್ರದ ಮಧ್ಯಸ್ಥಿಕೆಯನ್ನು ಭಾರತವು ಈಗಾಗಲೇ ತಿರಸ್ಕರಿಸಿರುವುದರಿಂದ ಈ ವಿಚಾರ ಈಗ ಮುಗಿದ ಅಧ್ಯಾಯ ಎಂದೂ ಸಹ ಶ್ವೇತ ಭವನದ ಮೂಲಗಳು ಸ್ಪಷ್ಟಪಡಿಸಿವೆ.

ಇನ್ನು ಯ.ಎ.ಇ. ಸಹ ಈ ವಿಚಾರದಲ್ಲಿ ಭಾರತ ಬೆಂಬಲಕ್ಕೆ ನಿಂತಿರುವುದು ಪಾಕಿಸ್ಥಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದು ಭಾರತದ ಆಂತರಿಕ ವಿಚಾರವಾಗಿದೆ ಎಂಬ ಅಭಿಪ್ರಾಯವನ್ನು ಈ ಇಸ್ಲಾಂ ರಾಷ್ಟ್ರ ವ್ಯಕ್ತಪಡಿಸಿದೆ. ಮತ್ತಿದು ಜಮ್ಮು ಕಾಶ್ಮೀರ ಭಾಗದಲ್ಲಿ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯವನ್ನೂ ಸಹ ಭಾರತದಲ್ಲಿರುವ ಯ.ಎ.ಇ. ಕಛೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Advertisement

ಇನ್ನುಳಿದಂತೆ ಮಧ್ಯಪ್ರಾಚ್ಯದ ಪ್ರಮುಖ ರಾಷ್ಟ್ರಗಳಾಗಿರುವ ಸೌದಿ ಅರೇಬಿಯಾ, ಇರಾನ್ ಮತ್ತು ಟರ್ಕಿ ದೇಶಗಳು ಈ ಬೆಳವಣಿಗೆಗೆ ಸಂಬಂಧಿಸಿದಂತೆ ಮೌನಕ್ಕೆ ಶರಣಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next