Advertisement
ತಾಯಿ ಎಂದೊಡನೆ ಮನದಲ್ಲಿ ಮೂಡುವ ಭಾವನೆ ಮಕ್ಕಳಿಗೆ ಮಮತೆ ತೋರುವ, ಧೈರ್ಯ ತುಂಬುವ, ಸಹನೆ ತುಂಬಿರುವ ತ್ಯಾಗಮಯಿ ಜೀವ. ತಾಯಿಯ ಬಗ್ಗೆ ಬರೆಯಬೇಕೆಂದುಕೊಂಡಾಗ ಅಂತರ್ಜಾಲದಲ್ಲಿ ಸಿಕ್ಕಿತ್ತೂಂದು ಸುಂದರ ಸಂದೇಶ! ಜನ್ಮತಾಳಲಿರುವ ಮಗು ಮತ್ತು ಸೃಷ್ಟಿಕರ್ತನ ನಡುವಿನ ಸಂಭಾಷಣೆಯ ಕುರಿತಾದ ಸಂದೇಶದಲ್ಲಿ ಮಗು ಕೇಳುವ ಪ್ರಶ್ನೆಗಳು ಹಲವಾರು. ಆದರೆ ಎಲ್ಲ ಪ್ರಶ್ನೆಗಳಿಗೆ ಒಂದೇ ಉತ್ತರ! ನಾನೊಂದು ಪುಟ್ಟ ಜೀವ, ನನ್ನನ್ನು ನೋಡಿಕೊಳ್ಳುವವರಾರು? ಮಾತನಾಡಲೂ ಬಾರದ ನನ್ನನ್ನು ಅರ್ಥಮಾಡಿಕೊಂಡು ರಕ್ಷಿಸುವ, ಸಂತೋಷಪಡಿಸುವ ವ್ಯಕ್ತಿಯಾರು? ಎಂಬ ಮಗುವಿನ ಪ್ರಶ್ನೆಗಳಿಗೆ ಉತ್ತರವಾಗಿ ಇವೆಲ್ಲಕ್ಕೂ “ದೇವತೆ’ಯೊಬ್ಬಳಿ¨ªಾಳೆ ಎನ್ನುತ್ತಾನೆ ಆ ಸೃಷ್ಟಿಕರ್ತ. ಮಾತು ಮುಂದುವರೆಸಿದ ಮಗು ಆ ದೇವತೆ ಯಾರೆಂದು ಕೇಳಿದಾಗ, ಅವಳನ್ನು “ಅಮ್ಮ’ ಎಂದು ಕರೆಯುತ್ತಾರೆ ಎಂಬ ಉತ್ತರ ಸಿಗುತ್ತದೆ. ನಿಜ ಅಮ್ಮ ಎಂದರೆ “ಅಭಯ’, “ಆತ್ಮವಿಶ್ವಾಸ’, “ಮಮತೆ’!
Related Articles
Advertisement
ಹೀಗೆ ಸಹನಾಮಯಿಯಾಗಿ, ತ್ಯಾಗಮಯಿಯಾಗಿ ತನ್ನ ಜೀವನದ ಸಾರ್ಥಕ್ಯವನ್ನು ಇನ್ನೊಂದು ಜೀವಕ್ಕೆ “ಜೀವನ’ ಕೊಡುವಲ್ಲಿ ಕಂಡುಕೊಳ್ಳುವಂತಾದಾಗ ತನ್ನ ಅಮ್ಮನ ಪ್ರತಿಬಿಂಬವಾಗುತ್ತಾಳಲ್ಲವೇ ಈ ಅಮ್ಮ? ಅಮ್ಮನಾಗಿ ಅಮ್ಮನನ್ನು ಅರಿತಾಗ, ಮಾತೃತ್ವದ ಆಳದ ಅರಿವು ಮೂಡಿದಾಗ, ಆಗೊಮ್ಮೆ- ಈಗೊಮ್ಮೆ ಕಂಡುಬರುವ ಅಭಿಪ್ರಾಯಭೇದ, ಮನಸ್ತಾಪ, ಬದಲಾದ ಕಾಲದಲ್ಲಿ ಬದುಕಿನ ಪರಿಸ್ಥಿತಿಗಳನ್ನು ನೋಡುವಲ್ಲಿನ ವ್ಯತ್ಯಾಸಗಳು ಮುಖ್ಯವೆನಿಸದೆ ಅಮ್ಮನ ಕುರಿತು ಗೌರವ, ಪ್ರೀತಿ, ಕಾಳಜಿ, ಅಭಿಮಾನ ಇನ್ನೂ ಹೆಚ್ಚುವವು. ಅಲ್ಲದೇ ಅಭಯ, ಆತ್ಮವಿಶ್ವಾಸ, ಮಮತೆಯ ಕಡಲು ಎನ್ನಿಸಿಕೊಳ್ಳುವ ಅಮ್ಮ ದುರ್ಬಲಳೂ ಅಲ್ಲ, ಅಸಹಾಯಕಳೂ ಅಲ್ಲ ಎನ್ನುವುದು ಮನವರಿಕೆಯಾಗುವುದು.
ಇಂದಿನ ಪೀಳಿಗೆಯ ಮಹಿಳೆ ಬಹಳಷ್ಟು ಕ್ಷೇತ್ರಗಳಲ್ಲಿ ಸಶಕ್ತಳಾಗಿದ್ದು, ತಾನೂ ಅಮ್ಮನಾಗಿ ತನ್ನ ಅಮ್ಮನನ್ನು ಅರಿತಾಗ, ಹಿಂದಿನ ಪೀಳಿಗೆಯ, ಹೆಚ್ಚಿನ ವಿದ್ಯೆ ಸಿಕ್ಕದಿದ್ದರೂ ಅನುಭವದ ಜ್ಞಾನ ಪಡೆದು ಜೀವನವನ್ನೆಲ್ಲ ಮಕ್ಕಳ ಹಿತಕ್ಕೋಸ್ಕರ ಮುಡಿಪಾಗಿಟ್ಟ ಇಳಿವಯಸ್ಸಿನ ಅಮ್ಮನ ಬಗ್ಗೆ ಜವಾಬ್ದಾರಿಗಳು ಹೆಚ್ಚುವುದಿಲ್ಲವೇ? ಮನೋಬಲದಲ್ಲಿ, ಮಾತೃತ್ವದಲ್ಲಿ ಕಡಿಮೆಯೆನಿಸದ ಅಮ್ಮ, ಪರಿಸ್ಥಿತಿಗಳ ಅಸಹಾಯಕತೆಯಿಂದ ಒಂಟಿಯಾಗಿ, ಮುಪ್ಪಿನಿಂದ ತನ್ನ ಬಗ್ಗೆ ತನಗೇ ಇದ್ದ ವಿಶ್ವಾಸವನ್ನು ಕಳೆದುಕೊಂಡು ನೋವಿನಲ್ಲಿ ಕೊರಗುವಂತಾಗಬೇಕೆ? ತನ್ನ ಮಕ್ಕಳ ಬಾಳಿನ ದೀಪ ಬೆಳಗಿಸುವ ಅಮ್ಮ, ವೃದ್ಧಾಶ್ರಮದ ಕೋಣೆಯ ಕತ್ತಲಿನಲ್ಲಿ ಬೆಳಕಿನ ಕಿರಣಗಳನ್ನು ಹುಡುಕುತ್ತ ತನ್ನ ಬದುಕಿನ ಅಂತ್ಯವನ್ನು ಎದುರು ನೋಡುವಂತಾಗಬೇಕೆ? ಅಮ್ಮನಾಗಿ ಅಮ್ಮನನ್ನು ಅರಿಯುವ ಮಹಿಳೆ ತನ್ನ ಬದುಕಿನಲ್ಲಿ ಎದುರಾಗುವ ಪರಿಸ್ಥಿತಿಗಳನ್ನು ಜಯಿಸುವಲ್ಲಿ ಯಶಸ್ವಿಯಾಗಬೇಕು.
ತನ್ನಲ್ಲಿರುವ ನ್ಯೂನತೆಗಳನ್ನು ಮೆಟ್ಟಿ ನಿಂತು, ತನ್ನ ಜವಾಬ್ದಾರಿಗಳನ್ನು ನಿಭಾಯಿಸುವ ಜಾಣ್ಮೆಯನ್ನು ರೂಢಿಸಿಕೊಳ್ಳಬೇಕು. ತನ್ನ ಕುಟುಂಬಕ್ಕೂ ಆದರ್ಶಪ್ರಾಯಳಾಗಿ ಶಕ್ತಿಗುಂದಿದ, ಆತ್ಮವಿಶ್ವಾಸವನ್ನು ಕಳೆದುಕೊಂಡ ಇಳಿವಯಸ್ಸಿನ ಅಮ್ಮನಿಗೆ ಅಮ್ಮನಾಗಬೇಕು. ಅಲ್ಲದೇ ತನ್ನ ಮಕ್ಕಳಿಗೆ ಮಾದರಿಯಾಗಬೇಕು. ಏಕೆಂದರೆ ಅಮ್ಮನೇ ಕಲಿಸಿಕೊಡುವ ಪಾಠ, ಇನ್ನೊಂದು ಜೀವಕ್ಕೆ “ಜೀವನ’ ಕೊಡುವುದೇ ಬದುಕಿನ ಸಾರ್ಥಕತೆ !