ತಾಯಿ ಮತ್ತು ತಾಯಿ ನಾಡು ಸ್ವರ್ಗಕ್ಕಿಂತಲು ಮಿಗಿಲು ಎಂಬುದು ಎಂದೆಂದಿಗೂ ಸತ್ಯ. ಮಾತೃಭಾಷೆಯೂ ನಮ್ಮ ಜೀವನದ ಅವಿಭಾಜ್ಯ ಅಂಗ. ಕರ್ನಾಟಕವೂ ಹಲವಾರು ಸಂಸ್ಕೃತಿ, ಆಚಾರ-ವಿಚಾರಗಳ ತವರೂರಾಗಿದೆ. ಕರ್ನಾಟಕದ ಆಡು ಭಾಷೆ ಕನ್ನಡ, ಜಿಲ್ಲೆಯಿಂದ ಜಿಲ್ಲೆಗೆ ಸ್ಥಳೀಯವಾಗಿ ಭಿನ್ನ ಭಿನ್ನವಾಗಿದೆ.
ಭಾಷಾ ಸೊಗಡು ಎಂದಾಗ ನಮ್ಮ ಕುಂದಾಪ್ರ ಕನ್ನಡ ಕೇಂಬುಕೆ ಬಾರಿ ಚೆಂದ ಅಂದ್ರು ತಪ್ಪಾತಿಲ್ಲ ಕಾಣಿ. ನಾವು ಕುಂದಾಪ್ರ ಕನ್ನಡದಲ್ಲಿ ಹೋಯ್ಕ್ ಬರ್ ಕ್ ಅಂಬುದ್ ಇತ್ತೀಚೆಗೆ ನಮ್ಗೆ ಅಷ್ಟೇ ಅಲ್ಲ, ಇಡೀ ರಾಜ್ಯದ ಯಾವುದೇ ಮೂಲೆಯಲ್ಲಿ ಕೇಳಿದರೂ ಎಂಥವರ ಕಿವಿ ಕೂಡ ನಿಮಿರುವುದು ಸಹಜ.
ಈ ಹಿಂದೆ ಕುಂದಾಪುರ ಕನ್ನಡ ಮಾತಾಡುಕು ಮುಜುಗರ ಪಡುವ ಕಾಲ ಇತ್ತು. ಇವತ್ತು ಕುಂದಾಪ್ರ ಕನ್ನಡವನ್ನು ನಮ್ಮ ಮನೆಯ ಸಹೋದರರಂತೆ ಕನ್ನಡಿ ಗರು ಸ್ವೀಕರಿಸಿದ ಪರಿ ನಮಗೆ ಖುಷಿ ನೀಡುವಂತದ್ದು. ಆರೆ ನಮ್ ಭಾಷೆ ನಮ್ ಊರ್ ಈ ಮಣ್ಣಿನ ಸೊಗಡನ್ನು ಕಂಡರ್ ಇದೊಂತರ ಸ್ವರ್ಗ ಅನ್ನದೆ ಇರಲ್ಲ. ಇದು ನಮ್ಮ ಅಬ್ಬಿ ಭಾಷಿ ಅಂತ ಹೇಳುಕ್ ಒಂತರ ಹೆಮ್ಮೆ. ಕುಂದಾಪ್ರ ಕನ್ನಡ ಭಾಷೆ ಉಡುಪಿ ಜಿಲ್ಲೆ ಯ ಹೆಬ್ರಿ, ಬ್ರಹ್ಮಾವರ, ಕುಂದಾಪುರ, ಬೈಂದೂರು ಹೀಗೆ ನಾಲ್ಕು ತಾಲೂಕುಗಳಲ್ಲಿ ವಿಸ್ತರಿಸಿಕೊಂಡಿದೆ.
ನಮ್ ಕುಂದಾಪ್ರದರ್ ಎಲ್ ಹೋರು ಬದ್ಕತ್ರ ಅಂಬು ಮಾತಿತ್! ಇದ್ ಮಾತ್ರ ಸತ್ಯ. ಎಲ್ ಹೋರು ಪಟ ಪಟ ಅಂದ್ ಮಾತಾಡು ಜನ ನಮ್ಮವ್ರ್. ಯಾವ್ದಕ್ಕೂ ದಾಕ್ಷಿಣಿ ಮಾಡ್ಕಂತಿಲ್ಲ ಕಾಣಿ!
ಇಂತಹ ಕುಂದಾಪುರ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸ್ಥಳೀ ಯವಾಗಿ ಒಂದಷ್ಟು ಸಂಘಟಿತ ಪ್ರಯತ್ನವೆ “ವಿಶ್ವ ಕುಂದಾಪ್ರ ಕನ್ನಡ ದಿನ’ ಒಂದು ಭಾಷೆಗೆ ಇಂತದ್ದೇ ದಿನ ಹುಟ್ಟು ಅನ್ನುವಂಥದ್ದೇನಿಲ್ಲ. ಅಲ್ಲಲ್ಲಿ ಪ್ರಾದೇ ಶಿಕತೆ, ಸಂಸ್ಕೃತಿ,ಆಚಾರ-ವಿಚಾರಗಳಿಗನುಗುಣವಾಗಿ ಭಾಷೆ ಬೆಳವಣಿಗೆ ಕಂಡಿದೆ. ಅದ್ಕೆ “ಕುಂದಾಪ್ರ ಕನ್ನಡ ಭಾಷಿ ಅಲ್ಲ ಇದ್ ಬದ್ಕ್’ ಅಂದ್ ಹೇಳುದ್ ಇಲ್ಲಿನ್ ಜನ! ಅಂತ ಅಬ್ಬಿ ಭಾಷಿ ಕೊಂಡಾಡಿ ಮುದ್ದಾಡುಕು ಒಂದು ವಿಶೇಷ ವೇದಿಕೆ ಬೇಕಲ್ದೆ. ಅದ್ಕೆ ಪ್ರತೀ ವರ್ಷ ಆಷಾಡಿ ಅಮಾಸಿ ದಿನ ಇಲ್ಲಿನ ಜನ “ವಿಶ್ವ ಕುಂದಾಪ್ರ ಕನ್ನಡ ದಿನ’ ಅಂತ ಅಚರ್ಸ್ ಕಂಡ್ ಬತ್ತಾ ಎದ್ರ್. ಇದಲ್ಲ ಸುರುವಾಯ್ ನಾಕೈದ್ ವರ್ಷ ಆಯ್ತ…. ನಮ್ ಊರ್ ಬದಿಯಗ್ ಮೊದಲ ಹಬ್ಬುವೆ ಆಷಾಡಿ ಅಮಾಸಿ. ಕಡಿಕೆ ನಾಗರ ಪಂಚಮಿ, ಚೌತಿ ಅದ್ ಇದ್ ಎಲ್ಲ ಹಬ್ಬು ಶುರು ಆಪುದ್. ಆ ಮೊದಲ ಹಬ್ಬದ ದಿನವೇ ವಿಶ್ವ ಕುಂದಾಪ್ರ ಕನ್ನಡ ದಿನ ಆಚರಣೆಗ್ ಬಂತ್. ಈ ದಿನ ವಿಶ್ವದೆಲ್ಲೆಡೆ ಇರುವ ಕುಂದಗನ್ನಡಿಗರೆಲ್ಲ ಸೇರಿ ದೊಡ್ಡ ಹಬ್ಬುವೆ ಮಾಡ್ತ್ರ್! ಆ ದಿನ ಎಲ್ಲೆಲ್ಲೂ ಕುಂದಾಪ್ರ ಕನ್ನಡದ ವಿಚಾರ ಮಂಥನ ಕಾರ್ಯಕ್ರಮ ನಡಿತ್. ಹಾಂಗಂದೆಳಿ ಇದ್ ಒಂದ್ ದಿನದಲ್ ಮುಗ್ದ್ ಹೋಪು ಕೆಲ್ಸು ಅಲ್ಲ… ನಾವ್ ಎಲ್ ಹೋರು ಎಲ್ ಇದ್ರು ಹ್ಯಾಂಗ್ ಇದ್ರು ಅಬ್ಬಿ ಭಾಷಿ ಮಾತ್ರ ಮರುಕಾಗ… ಅದ್ ನಮ್ ಉಸ್ರ್ ಆಯ್ಕ ನಮ್ ಬದ್ಕಿನ್ ಭಾಷಿ ಆಯ್ಕ….
-ರವಿರಾಜ್, ಬೈಂದೂರು