Advertisement

ವಿಶ್ವ ಕನ್ನಡ ಸಮ್ಮೇಳನ ರೂಪುರೇಷೆ ಸ್ಥಳೀಯರದ್ದಾಗಿರಲಿ: ಕಪ್ಪಣ್ಣ

12:38 PM Jun 18, 2017 | Team Udayavani |

ದಾವಣಗೆರೆ: ವಿಶ್ವ ಕನ್ನಡ ಸಮ್ಮೇಳನ ಹೇಗೆ ಇರಬೇಕು ಎಂಬುದನ್ನು ಸ್ಥಳೀಯರೇ ನಿರ್ಧರಿಸುವಂತೆ ಆಗಬೇಕು ಎಂದು ರಂಗಕರ್ಮಿ ಕಪ್ಪಣ್ಣ ಅಭಿಪ್ರಾಯಪಟ್ಟರು. ಶನಿವಾರ ಕುವೆಂಪು ಕನ್ನಡ ಭವನದಲ್ಲಿ ಶ್ರೀಗುರು ವಾದ್ಯ ವೃಂದ ಹಮ್ಮಿಕೊಂಡಿದ್ದ ನಾನು ಮತ್ತು ಸಂಸ್ಕೃತಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ವಿಶ್ವ ಕನ್ನಡ ಸಮ್ಮೇಳನದ ಕುರಿತು ಸ್ಥಳೀಯರ ಅಭಿಪ್ರಾಯ ಮುಖ್ಯವಾಗುತ್ತದೆ. ಸಮ್ಮೇಳನ ನಡೆಯುವ ಮುನ್ನವೇ ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದರು. ನಾನು ಈವರೆಗೆ 2 ವಿಶ್ವ ಕನ್ನಡ ಸಮ್ಮೇಳನ ಆಯೋಜನೆಯಲ್ಲಿ ಭಾಗಿಯಾಗಿದ್ದೇನೆ. ನನ್ನ ಅನುಭವಕ್ಕೆ ಬಂದಂತೆ ಜನರು ಹೆಚ್ಚಿನ ಆಸಕ್ತಿ ತೋರಿಸಬೇಕು.

ಸ್ಥಳೀಯರು ಇರಬೇಕೋ? ಬೇಡವೋ?, ಇದ್ದರೆ ಎಷ್ಟಮಟ್ಟಿಗೆ ಎಂಬುದರ ಕುರಿತು ಮೊದಲೇ ನಿರ್ಧರಿಸಬೇಕು. ಅದರ ಬದಲು ಸಮ್ಮೇಳನ ಮುಗಿದ ನಂತರ ದೂರುವುದು ಸರಿಯಲ್ಲ. ಆದರೆ, ದಾವಣಗೆರೆ ವಿಶ್ವ ಕನ್ನಡ ಸಮ್ಮೇಳನಕ್ಕೆ ಆಯ್ಕೆಯಾಗಿ ದಿನಗಳು ಕಳೆದರೂ ಇದುವರೆಗೂ ಯಾರೂ ಸಹ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ ಎಂದರು. 

ಇದಕ್ಕೂ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಕ ಕುಮಾರ್‌ ಬೆಕ್ಕೇರಿ ವಿಶ್ವ ಕನ್ನಡ ಸಮ್ಮೇಳನದ ಕುರಿತು ಕಪ್ಪಣ್ಣರನ್ನು ಪ್ರಶ್ನಿಸಿದ್ದರು. ವೃತ್ತಿ ರಂಗಭೂಮಿ ಕಲಾವಿದರಿಗೆ ರಂಗಾಯಣ ಮಾದರಿಯ ಶಾಲೆ ತೆರೆಯಲು ಸರ್ಕಾರ ಮುಂದಾಗಿದ್ದು, ಇದನ್ನು ದಾವಣಗೆರೆಯಲ್ಲಿ ಮಾಡಿದರೆ ಅಡ್ಡಿಯಿಲ್ಲ. 

ಹಾಲಿ ಬಿಜಾಪುರದಲ್ಲಿ ಆರಂಭಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಚಿಂದೋಡಿ ಶಂಭುಲಿಂಗಪ್ಪನವರ ಪ್ರಶ್ನೆಗೆ ಕಪ್ಪಣ್ಣ ಉತ್ತರಿಸಿದರು. ಎಲ್ಲಾ ಕಲೆಗಳ ಅಕಾಡೆಮಿ ಕಚೇರಿಗಳು ಬೆಂಗಳೂರಿನಲ್ಲಿಯೇ ಕೇಂದೀಕೃತ ಆಗಿರುವ ಕುರಿತು ಕೇಳಿದ ರಂಗಕರ್ಮಿ ಐರಣಿ ಬಸವರಾಜ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಪ್ಪಣ್ಣ, ಎಲ್ಲಾ ಕಚೇರಿಗಳು ಬೆಂಗಳೂರಿನಲ್ಲಿಯೇ ಇವೆ ಎಂಬುದು ನಿಜ.

Advertisement

ಹಾಗೆ ಇರಬಾರದು. ರಾಜ್ಯದ ಇತರೆ ಭಾಗಗಳಲ್ಲೂ ಸಹ ವಿವಿಧ ಅಕಾಡೆಮಿ ಕೆಲಸ ಮಾಡಬೇಕು. ಆದರೆ, ಒಂದು ವಿಷಯವನ್ನು ಇಲ್ಲಿ ನಾವು ಗಮನಿಸಬೇಕು. ಈಗಿನ ಸರ್ಕಾರ ಈ ಅಕಾಡೆಮಿಗೆ ನೇಮಕ ವಿಷಯದಲ್ಲಿ ಬೆಂಗಳೂರಿಗೆ ಮಾತ್ರ ಪ್ರಾಮುಖ್ಯತೆ ನೀಡಿಲ್ಲ. ಬದಲಿಗೆ ಎಲ್ಲಾ ಭಾಗದ ಜನರಿಗೆ ಅವಕಾಶ ನೀಡಿದೆ.

ಆದರೆ, ಅವರೆಲ್ಲಾ ರಾಜ್ಯದ ಬೇರೆ ಬೇರೆ ಭಾಗದವರೇ ಆದರೂ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಇದರಿಂದ ಬಹುತೇಕರಿಗೆ ಬೆಂಗಳೂರಿನವರಿಗೇ ಅವಕಾಶ ಹೆಚ್ಚು ನೀಡಲಾಗುತ್ತದೆ ಎಂಬ ಭಾವನೆ ಮೂಡುವಂತೆ ಆಗಿದೆ ಎಂದು ಅವರು ತಿಳಿಸಿದರು. ಸಂವಾದಕ್ಕೂ ಮುನ್ನ ಮಾತನಾಡಿದ ಅವರು ತಮ್ಮ ಮತ್ತು ಬಿ.ವಿ. ಕಾರಂತರ ನಡುವಿನ ಒಡನಾಟ, ರಂಗ ಸಾಧನೆ ಕುರಿತು ತಿಳಿಸಿದರು.

ಬಿ.ವಿ. ಕಾರಂತರನ್ನು ಯಾವುದೇ ರಂಗಾಸಕ್ತರು ಇದುವರೆಗೆ ಸ್ಮರಣೆ ಮಾಡಿಲ್ಲ. ಉಳಿದವರಿಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಆದರೆ, ಕಾರಂತರನ್ನು ದೂರ ಇಟ್ಟಿದ್ದಾರೆ. ನಾನು ಮತ್ತು ನಾಗಾಭರಣ ಸೇರಿದಂತೆ ಇತರರು ಸೇರಿ ಬಿ.ವಿ. ಕಾರಂತರ ಸ್ಮರಣೋತ್ಸವ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಕೆಲವೇ ತಿಂಗಳಲ್ಲಿ ದೊಡ್ಡಮಟ್ಟದಲ್ಲಿ ಈ ಕಾರ್ಯಕ್ರಮ ಏರ್ಪಾಡಲಾಗಲಿದೆ.

ದೇಶದ ವಿವಿಧ ಭಾಷೆಗಳಲ್ಲಿ ನಾಟಕ ಸಂಯೋಜಿಸಿದ ಅವರನ್ನು ಸ್ಮರಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು. ಪಾಲಿಕೆ ಸದಸ್ಯ ದಿನೇಶ್‌ ಶೆಟ್ಟಿ, ಹಿರಿಯ ರಂಗಕರ್ಮಿ ಎಸ್‌. ಹಾಲಪ್ಪ, ಚಿಂದೋಡಿ ಶ್ರೀಕಂಠೇಶ್‌ ಇತರರು ವೇದಿಕೆಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next