Advertisement

Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್‌’

12:50 PM Nov 01, 2024 | Team Udayavani |

ಬೆಂಗಳೂರು: ನವೆಂಬರ್‌ ತಿಂಗಳು ಬಂತೆಂದರೆ ಸಾಕು ರಾಜ್ಯದೆಲ್ಲೆಡೆ ಕನ್ನಡದ್ದೇ ಕಲರವ. ಎಲ್ಲೆಲ್ಲೂ ಕನ್ನಡದ ಬಗೆಗಿನ ಕಾರ್ಯಕ್ರಮಗಳು, ಸಾಲು ಸಾಲು ಕನ್ನಡ ಪುಸ್ತಕ ಬಿಡುಗಡೆಗಳು ಹೀಗೆ ನೂರಾರು ಸಂಭ್ರಮ. ಆದರೆ, ಪ್ರತಿ ಬಾರಿ ನವೆಂಬರ್‌ ತಿಂಗಳು ಮುಗಿಯುತ್ತಿದ್ದಂತೆ ಕನ್ನಡದ ಕಂಪು ಕಡಿಮೆಯಾಗ ತೊಡಗುತ್ತದೆ. ಮತ್ತೆ ಇದನ್ನು ನೆನಪಿಸಲು ರಾಜ್ಯೋತ್ಸವವೇ ಬರಬೇಕು. ಆದರೆ, ಇಲ್ಲೊಬ್ಬ ಕನ್ನಡಿಗ ನವೆಂಬರ್‌ ತಿಂಗಳಿಗಾಗಿ ಕಾಯದೆ ನಿತ್ಯ ತನ್ನ ಆಟೋದಲ್ಲಿ ಸಂಚರಿಸುವ ಪರಭಾಷಿಗರಿಗೆ ಕನ್ನಡ ಕಲಿಸುತ್ತಿದ್ದಾರೆ.

Advertisement

ಇವರು ಅಜ್ಮಲ್‌ ಸುಲ್ತಾನ್‌. ಮೂಲತಃ ಬಾಗಲ ಕೋಟೆಯ ಇಳಕಲ್‌ನವರಾದ ಇವರು 10 ವರ್ಷ ಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಮ್ಮ ಆಟೋದಲ್ಲಿ ಪ್ರಯಾಣಿಸುವಾಗ ಅಗತ್ಯವಿರುವ ಕನ್ನಡದ ಕೆಲ ವಾಕ್ಯಗಳನ್ನು ಇಂಗ್ಲಿಷ್‌ ಹಾಗೂ ಕನ್ನಡ ಭಾಷೆಯಲ್ಲಿ ಬರೆದ ಫ‌ಲಕ ಒಂದನ್ನು ಹಾಕಿದ್ದಾರೆ. ಇಲ್ಲಿ ಕನ್ನಡ ಭಾಷೆಯೂ ಇಂಗ್ಲಿಷ್‌ ಪದದಲ್ಲಿ ಇರುವುದರಿಂದ ಪರಭಾಷಿಗರು ಸರಳವಾಗಿ ಓದಿ ಅರ್ಥೈಸಿಕೊಂಡು ಬಳಸಬಹುದು. ಆಟೋದಲ್ಲಿ ಪ್ರಯಾಣಿಸುವ ಕೆಲವೇ ಸಮಯದಲ್ಲಿ ಸುಲಭವಾಗಿ ಭಾಷೆ ಕಲಿಯುವ ವಿಧಾನವಿದು ಎನ್ನುತ್ತಾರೆ ಅಜ್ಮಲ್‌.

ಅವರು ಈವರೆಗೆ 1 ಸಾವಿರ ಫ‌ಲಕಗಳನ್ನು ಮುದ್ರಿಸಿ ವಿವಿಧ ಆಟೋಗಳಿಗೆ ಹಂಚಲಾಗಿದ್ದು, ಈ ಪ್ರಕ್ರಿಯೆ ಯಲ್ಲಿ ಬೆಂಗಳೂರು ಆಟೋ ಸೇನೆ, ಸ್ನೇಹ ಜೀವಿ ಆಟೋ ಚಾಲಕರ ಟ್ರೆಡ್‌ ಯೂನಿಯನ್‌ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ ಆಟೋ ಚಾಲಕರ ಸಂಘ ಕೂಡ ಸಾಥ್‌ ನೀಡಿದೆ. ಇದರ ಜತೆಗೆ ಅಜ್ಮಲ್‌ ಸಾಮಾಜಿಕ ಜಾಲತಾಣಗಳಲ್ಲಿ “ಆಟೋ ಕನ್ನಡಿಗ’ ಹೆಸರಿನ ಖಾತೆಯ ಮೂಲಕ ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಒಂದು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಕನ್ನಡ ಫ‌ಲಕಗಳನ್ನು ಪ್ರತಿ ವ್ಯಾಪಾರ ಸ್ಥಳದಲ್ಲಿ ಅಳವಡಿಸುವುದರಿಂದ ಅತ್ಯಂತ ಕಡಿಮೆ ಸಮಯದಲ್ಲಿ ದೈನಂದಿನ ಜೀವನಕ್ಕೆ ಅಗತ್ಯವಿರುವ ಕನ್ನಡವನ್ನು ಸುಲಭವಾಗಿ ಕಲಿಸಬಹುದು ಹಾಗೂ ಕಲಿಯಬಹುದು. 1 ಫ‌ಲಕಕ್ಕೆ 30 ರಿಂದ 50 ರೂ. ಮಾತ್ರ ತಗುಲುವುದರಿಂದ ಆರ್ಥಿಕವಾಗಿಯೂ ಹೊರೆಯಾಗುವುದಿಲ್ಲ. ಬೀದಿ ಬದಿಯ ವ್ಯಾಪಾರಿಯಿಂದ ಮಾಲ್‌ ವ್ಯಾಪಾರಿಗಳೂ ಈ ವಿಧಾನಕ್ಕೆ ಒಗ್ಗಿಕೊಳ್ಳಹುದು ಎನ್ನುವುದು ಅಜ್ಮಲ್‌.

ಈ ಫ‌ಲಕದಿಂದಲೇ ಅದೇಷ್ಟೋ ಜನ ಆಟೋದಿಂದ ಇಳಿಯುವಾಗ ಚಿಕ್ಕ ಚಿಕ್ಕ ಕನ್ನಡ ಪದಗಳಾದ “ಇಲ್ಲೇ ನಿಲ್ಸಿ’, “ಎಷ್ಟಾಯ್ತು’ ಎಂದು ಬಳಸುತ್ತಾರೆ. ಒಮ್ಮೆ ಆಟೋ ದಲ್ಲಿ ಪ್ರಯಾಣಿಸಿದ ಮಲಯಾಳಿ ಪ್ರಯಾಣಿ ಕನೊಬ್ಬನಿಗೆ ಈ ಮೊದಲೇ ಕನ್ನಡ ಕಲಿಯುವ ಆಸಕ್ತಿಯಿತ್ತು. ಆದರೆ ಕಲಿಕಾ ವಿಧಾನದಿಂದ ಕನ್ನಡ ಭಾಷೆಯ ಕಲಿಕೆ ಸುಲಭ ಎನಿಸಿದೆ. ಈ ಪ್ರಯತ್ನದಿಂದ, ಆನ್‌ಲೈನ್‌ ವಿಡಿಯೋ ಮೂಲಕ ಕನ್ನಡ ಕಲಿಯಲು ಮುಂದಾಗಿದ್ದಾರೆ.

ಹೆಚ್ಚು ಬಾರಿ ಕನ್ನಡೇತರರಿಗೆ ಕನ್ನಡ ಕಲಿಯಲು ಅವಕಾಶ ಹಾಗೂ ಸಮಯದ ಕೊರತೆಯಿರುತ್ತದೆ. ಇಂತಹ ಪ್ರಯಾಣಿಕರಿಗೆ ಆಟೋದಲ್ಲಿ ಪ್ರಯಾಣಿಸುವಾಗಲೇ ಕನ್ನಡ ಪದಗಳನ್ನು ಹೇಳಿಕೊಟ್ಟರೆ ಒಪ್ಪಿಕೊಂಡು, ಬಳಸಿದ ಉದಾಹರಣೆಗಳು ಇವೆ. ಜಾಲತಾಣದಲ್ಲಿಯೂ ಈ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಇದರಿಂದ ಅಜ್ಮಲ್‌ಗೆ ಮತ್ತಷ್ಟು ಕೆಲಸ ಮಾಡಲುಪ್ರೋತ್ಸಾಹ ದೊರಕಿದಂತಾಗಿದೆ.

Advertisement

ಟ್ರಾಫಿಕ್‌ ಪೊಲೀಸರ ಸಾಥ್‌

ಅಜ್ಮಲ್‌ ಅವರ ಈ ಕೆಲಸಕ್ಕೆ ಬೆಂಗಳೂರು ಟ್ರಾಫಿಕ್‌ ಪೊಲೀಸರ ಬೆಂಬಲ ದೊರಕಿದೆ. ಈ ರೀತಿ ಕನ್ನಡ ಇಂಗ್ಲಿಷ್‌ ವಾಕ್ಯಗಳನ್ನು ಹೊಂದಿದ 1 ಲಕ್ಷ ಫ‌ಲಕಗಳನ್ನು ನಗರದ ಎಲ್ಲಾ ಆಟೋ ಚಾಲಕರಿಗೆ ಉಚಿತವಾಗಿ ನೀಡಲು ಮುಂದಾಗಿದೆ. ಈ ಮೊದಲು ಇದ್ದ ಫ‌ಲಕಗಳಲ್ಲಿ ಕೇವಲ ಪ್ರಯಾಣಿಕರಿಗೆ ಅನುಕೂಲವಾಗುವ ಸಾಲುಗಳನ್ನು ಮಾತ್ರ ಅಳವಡಿಸಲಾಗಿತ್ತು. ಆದರೆ ಈ ಫ‌ಲಕಗಳು ಸ್ವಲ್ಪ ಬದಲಾವಣೆಯಾಗಿದ್ದು, ಪ್ರಯಾಣಿಕರ ಪ್ರಶ್ನೆಯೊಂದಿಗೆ ಚಾಲಕರ ಉತ್ತರದ ಮಾದರಿಯೂ ಒಳಗೊಂಡಿರುತ್ತದೆ.

ಪರಭಾಷಿಕರನ್ನು ಕನ್ನಡ ಕಲಿಯಲಿಲ್ಲ ಎಂದು ದೂರುವುದರ ಬದಲು, ಸರಳವಾಗಿ ಕನ್ನಡ ಕಲಿಸಲು ಮುಂದಾಗಬೇಕು. ಚಿಕ್ಕ ಪುಟ್ಟ ವ್ಯವಹಾರಗಳಲ್ಲಿ ಕನ್ನಡ ಅಳವಡಿಸಿಕೊಂಡರೆ ಸುಲಭವಾಗಿ ಕನ್ನಡ ಭಾಷೆಯ ಬಳಕೆ ಹೆಚ್ಚಾಗುತ್ತದೆ. ●ಅಜ್ಮಲ್‌ ಸುಲ್ತಾನ್‌, ಆಟೋ ಚಾಲಕ

-ಉದಯವಾಣಿ ಸಮಾಚಾರ

Advertisement

Udayavani is now on Telegram. Click here to join our channel and stay updated with the latest news.

Next