Advertisement

ದೇಶಪ್ರೇಮವೆಂಬುದೀಗ ಇನ್ವೆಸ್ಟ್‌ ಮೆಂಟ್‌

08:46 AM Dec 30, 2018 | Team Udayavani |

ದಾವಣಗೆರೆ: ಪ್ರಸ್ತುತ ಮಹನೀಯರ ಜಯಂತಿ ಆಚರಣೆ ಜಾತಿ, ಧರ್ಮ ಜನಾಂಗಗಳ ಸ್ವತ್ತಾಗುತ್ತಿವೆ. ಆದರೆ, ಕುವೆಂಪು ವಿಶ್ವಮಾನವರಾಗಿ ಮಾನವ ಹಾಗೂ ಮಕ್ಕಳ ಜಾತಿಗೆ ಸೇರಿದ್ದವರಾಗಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ| ದಾದಾಪೀರ್‌ ನವಿಲೇ ಹಾಳ್‌ ಬಣ್ಣಿಸಿದ್ದಾರೆ.

Advertisement

ಶನಿವಾರ, ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್‌ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಾನವ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಇಂದು ದೇಶ ಪ್ರೇಮ ಎಂಬುವುದು ಒಂದು ರೀತಿಯ ಇನ್ವೆಸ್ಟೆಮೆಂಟ್‌ ಆಗಿದೆ. ತನ್ನ ದೇಶಪ್ರೇಮವನ್ನು ಬೇರೆಯವರ ಮುಂದೆ ಪ್ರದರ್ಶಿಸಿದರಷ್ಟೇ ಉಳಿವು ಎಂಬಂಥ ಮನೋಸ್ಥಿತಿ ಕೆಲವರಲ್ಲಿ ಇವೆ. ಆದರೆ, ನೂರು ದೇವರುಗಳ ನೂಕಾಚೆ ದೂರ, ತಾಯಿ ಭಾರತಾಂಬೆಯ ಪೂಜಿಸೋಣ ಬಾರ ಎಂಬುದಾಗಿ ಬಹಳ ದಿನಗಳ ಹಿಂದೆಯೇ ಹೇಳಿದ ಕುವೆಂಪು ದೇಶಪ್ರೇಮಿಗಳಾಗಿದ್ದಾರೆ ಎಂದರು.

ಯಾವುದೇ ಪ್ರಭುತ್ವ ದಬ್ಟಾಳಿಕೆಗೆ ಕುವೆಂಪು ಅಂಜಲಿಲ್ಲ. ಅದಕ್ಕೆ ಉದಾಹರಣೆ ಎಂದರೆ ಮೈಸೂರು ಕಾಲೇಜಿನಲ್ಲಿ ತನ್ನ ವಿದ್ಯಾರ್ಥಿಯಾಗಿದ್ದ ಯುವರಾಜನನ್ನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿದ್ದು. ಆ ಕಾಲೇಜಿನ ಪ್ರಾಂಶುಪಾಲರು ಯುವರಾಜನನ್ನೇ ಫೇಲ್‌ ಮಾಡೀದ್ದಿರಲ್ಲ  ಅಂದಾಗ ರಾಜಕುಮಾರನಾದರೇನಂತೆ. ಅವನು ಉತ್ತೀರ್ಣನಾಗಲು ಅರ್ಹನಲ್ಲ ಹಾಗಾಗಿ ಅನುತ್ತೀರ್ಣನಾಗಿದ್ದಾನೆ ಎಂದಿದ್ದರು. ಹೀಗೆ ಅವರ ಸಾಹಿತ್ಯ, ಬದುಕಿದ ಪರಿಸರ, ಬೆಳೆದ ರೀತಿ ವ್ಯಕ್ತಿತ್ವಕ್ಕೆ ಗಟ್ಟಿ ನೆಲೆಯನ್ನು ಒದಗಿಸಿತ್ತು ಎಂದು ಹೇಳಿದರು.

ಮನುಜ ಮತ ವಿಶ್ವಪಥ ಎಂದು ಧರ್ಮ, ಜಾತಿಗಳ ಗೋಡೆ ದಾಟಿ ನಿರುಕುಂಶ ಮತಿಗಳಾಗಿ ಎಂದು ಕರೆ ನೀಡಿದವರು ಕುವೆಂಪು. ಸಮಾಜದಲ್ಲಿ ಜಡ್ಡುಗಟ್ಟಿದ ವರ್ಣಾಶ್ರಮ ತಿದ್ದುವುದಲ್ಲ ಅದನ್ನು ತೊಲಗಿಸಬೇಕು. ಚಾತುರ್ವಣ್ಯ ಪದ್ಧತಿ ಭಾರತದ ಶಾಪ. ಅತ್ಯಂತ ಕೆಟ್ಟ ಪದ್ಧತಿ. ಇದರಿಂದ ಆರೋಗ್ಯಪೂರ್ಣ ಸಮಾಜ ಸಾಧ್ಯವಿಲ್ಲ. ಎಲ್ಲ ಜಾತಿ ನಾಶಪಡಿಸಬೇಕು. ವಿಶ್ವಕ್ಕೆ ಮಾನವತೆ ಒಂದೇ ಜಾತಿಯಾಗಬೇಕೆಂದರು ಕುವೆಂಪು ಎಂದು ಸ್ಮರಿಸಿದರು.

ಓದಿದ ಕಾಲೇಜಿನಲ್ಲೆಯೇ ಪ್ರಾಂಶುಪಾಲರಾದ ಕೀರ್ತಿ ಕುವೆಂಪುರದ್ದು. ಕುವೆಂಪು ರಚಿಸಿದ ರಾಮಾಯಣ ದರ್ಶನಂ, ಶೂದ್ರತಪಸ್ವಿ, ಬೆರಳ್ಗೆ ಕೊರಳ್‌, ಪಕ್ಷಿಕಾಶಿ, ಮುಂತಾದ ಶ್ರೇಷ್ಠ ಕೃತಿಗಳನ್ನು ಓದುವ ಮೂಲಕ ಮಕ್ಕಳು ಜ್ಞಾನ ವೃದ್ಧಿಸಿಕೊಳ್ಳಬೇಕಿದೆ ಎಂದು ಹೇಳಿದರು.

Advertisement

ಕರ್ನಾಟಕ ಏಕೀಕರಣ ಚಳವಳಿ ಸಂದರ್ಭದಲ್ಲಿ ಕುವೆಂಪು ಗುರುಗಳಾದ ಬಿ.ಎಂ.ಶ್ರೀ ಅವರು ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಪ್ರವಾಸ ಮಾಡಿ ಜಾಗೃತಿ ಮೂಡಿಸೋಣ ಎಂದಾಗ ನಾನು ಬರುವುದಿಲ್ಲ. ಕಾವ್ಯದ ಮೂಲಕವೇ ಜಾಗೃತಿ ಮೂಡಿಸಲು ಸಾಧ್ಯ ಎಂದು ತೋರಿಸಿಕೊಟ್ಟವರು ಕುವೆಂಪುರವರು ಎಂದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಕೆ.ಆರ್‌.ಜಯಶೀಲ ಮಾತನಾಡಿ, ಇಂದು ಸರ್ಕಾರ ಆಯೋಜಿಸುವ ಜಯಂತಿಗಳು ಜನಪ್ರತಿನಿಧಿಗಳ ಕಡೆಗಣನೆಗೆ ಒಳಗಾಗಿವೆ. ಮಕ್ಕಳಿಗಾದರೂ ಮಹಾನ್‌ ವ್ಯಕ್ತಿಗಳ ಬಗ್ಗೆ ವåನವರಿಕೆಯಾಗಲಿ. ರಾಮಾಯಣ ದರ್ಶನಂ ನಂತಹ ಶ್ರೇಷ್ಠ ಕೃತಿ ರಚಿಸಿ, ಜ್ಞಾನಪೀಠ ಪ್ರಶ್ರಸ್ತಿಗೆ ಭಾಜನರಾದ ಕುವೆಂಪು, ಪ್ರತೀ ಮಗು ವಿಶ್ವಮಾನವನಾಗಿಯೇ ಹುಟ್ಟುತ್ತದೆ. ಆದರೆ ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ. ಆದರೆ ಶಿಕ್ಷಣದ ಮೂಲಕ ಅವರನ್ನು ಮತ್ತೆ ವಿಶ್ವಮಾನವರನ್ನಾಗಿ ಮಾಡಬಹುದೆಂದು ನಂಬಿದ್ದರು ಎಂದರು.

ಕುವೆಂಪು ಕುರಿತು ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಪ್ರಶಸ್ತಿ ಪತ್ರ ವಿತರಿಸಿದರು. ವಾರ್ತಾ ಇಲಾಖೆಯಿಂದ ಹೊರತಂದಿರುವ ವಿಶ್ವಮಾನವ ಕುವೆಂಪು ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಜಿ.ಪಂ.ಸದಸ್ಯ ಕೆ.ಎಸ್‌. ಬಸವಂತಪ್ಪ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ| ಮಂಜುನಾಥ ಕುರ್ಕಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪರಮೇಶ್ವರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀಮತಿ ವೀಣಾ ಹೆಗಡೆ ಮತ್ತು ವೃಂದದವರು ವಿಶ್ವಮಾನವ ಗೀತೆಗಳ ಪ್ರಸ್ತುತ್ತ ಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next