ಮಣಿಪಾಲ: ವಿಶ್ವ ಹೃದಯ ದಿನದ ಅಂಗವಾಗಿ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಾಹೆ ಮಣಿಪಾಲವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ ಇವರ ಸಹಯೋಗದಲ್ಲಿ ಮಣಿಪಾಲದ ರಜತಾದ್ರಿಯ ಡಿ ಸಿ ಕಚೇರಿ ಮತ್ತು ಇತರ ಕಚೇರಿಗಳ ಸರಕಾರಿ ನೌಕರರಿಗೆ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರವನ್ನು ಸೆ. 29(ಶುಕ್ರವಾರ) ಆಯೋಜಿಸಲಾಯಿತು.
ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಕಾರ್ಯಕ್ರಮ ಉದ್ಘಾಟಿಸಿ , ಆರೋಗ್ಯದ ಕುರಿತು ಯಾರೂ ಕೂಡ ಅಸಡ್ಡೆ ಅಥವಾ ನಿರ್ಲಕ್ಷ್ಯ ತೋರಬಾರದು. ನಿತ್ಯವೂ ಕನಿಷ್ಠ ವ್ಯಾಯಾಮ ಮಾಡಬೇಕು . ಸಮತೋಲಿತ ಆಹಾರ ಸೇವಿಸಬೇಕು, ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಅರಿವು ಜಾಗೃತಿ ಅಗತ್ಯ. ಬದಲಾದ ಜೀವನ ಶೈಲಿಯಿಂದ ಹಲವಾರು ಆರೋಗ್ಯ ಸಮಸ್ಯೆ ಬರುವ ಸಾಧ್ಯತೆ ಇರುವುದರಿಂದ ಮಣಿಪಾಲ ಸಂಸ್ಥೆಯವರು ಆಯೋಜಿಸಿರುವ ಈ ಉಚಿತ ಹೃದಯ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ ಎಸ್ ಅವರು ಮಾತನಾಡಿ, ವರ್ಷಕೊಮ್ಮೆ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರ ಮೂಲಕ ತಾವು ಆರೋಗ್ಯವಂತರಾಗಿದ್ದೇವೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದರು.
ಉಡುಪಿ ಜಿಲ್ಲಾ ಆರೋಗ್ಯ, ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಡಾ.ನಾಗಭೂಷಣ ಉಡುಪ, ಜಿಲ್ಲಾ ಪಂಚಾಯತ್ ಸಿ ಪಿ ಓ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು. ಕೆಎಂಸಿ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಸ್ವಾಗತಿಸಿ, ಇಂದಿನ ಈ ಹೃದಯ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ರಕ್ತದೊತ್ತಡ, ಮಧುಮೇಹ , ಇಸಿಜಿ, ಟೋಟಲ್ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ಗಳು ಮತ್ತು ಹೃದ್ರೋಗ ತಜ್ಞರ ಸಮಾಲೋಚನೆಯನ್ನು ಉಚಿತವಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು. ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ವಂದಿಸಿದರು. ವಿಭಾಗದ ಡಾ ಆಫ್ರೋಜ್ ಕಾರ್ಯಕ್ರಮ ನಿರೂಪಿಸಿದರು.
ಸೆ. 29 ಅನ್ನು ಪ್ರತಿ ವರ್ಷ ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ. ಹೃದಯ ರಕ್ತನಾಳದ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ, ಇದು ಪ್ರಪಂಚದ ಎಲ್ಲಾ ಸಾಂಕ್ರಾಮಿಕವಲ್ಲದ ರೋಗಗಳ ಪಾಲಿನ ಅರ್ಧದಷ್ಟಿದೆ. ವಿಶ್ವ ಹೃದಯ ದಿನದ 2023 ರ ಘೋಷ ವಾಕ್ಯ “ಹೃದಯವಂತಿಕೆ ಬಳಸಿರಿ : ಹೃದಯವನ್ನು ಅರಿಯಿರಿ” ಎನ್ನುವುದಾಗಿದೆ.