Advertisement

ರಾಮಾಯಣದಿಂದ ವಿಶ್ವ ಮಾರ್ಗದರ್ಶನ

12:02 PM Jan 10, 2018 | Team Udayavani |

ಬೆಂಗಳೂರು: ಸಮಾಜ ಹೇಗೆ ಮುಂದುವರಿಯಬೇಕು ಎಂಬ ಬಗ್ಗೆ ಜಗತ್ತಿಗೆ ಮಾರ್ಗದರ್ಶನ ನೀಡುವ ಮಹಾನ್‌ ಕೃತಿ ರಾಮಾಯಣ ಎಂದು ಸಾಹಿತಿಗಳೂ ಆದ ಸಂಸದ ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.

Advertisement

ರಂಗಚೇತನ ಸಂಸ್ಕೃತಿ ಕೇಂದ್ರವು ನಗರದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಮ್ಮ ರಚನೆಯ “ಶ್ರೀರಾಮಾಯಣ ಮಹಾನ್ವೇಷಣಂ’ ಗದ್ಯಾನುವಾದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮಾಯಣ ಕೃತಿಯಲ್ಲಿ ಜಗತ್ತಿಗೆ ಮಾರ್ಗದರ್ಶನ ನೀಡುವ ಸತ್ವ ಹಾಗೂ ಚೈತನ್ಯವಿದೆ ಎಂದು ಪ್ರತಿಪಾದಿಸಿದರು.

ಭಾರತೀಯ ಸಂಸ್ಕೃತಿ ಬಿಂಬಿಸುವ ಮಹಾಕಾವ್ಯದಲ್ಲಿನ ಕತೆಗಳಿಗೆ ಪ್ರಸ್ತುತತೆ ಇದೆ. ರಾಮಾಯಣವು ಜಗತ್ತಿನ 25ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಕಟವಾಗಿದ್ದು, ಸಾರ್ವತ್ರಿಕವೆನಿಸಿದೆ ಎಂದು ಹೇಳಿದರು.  ನನ್ನ ಮಹಾಕಾವ್ಯವನ್ನು ಎನ್‌. ಭಾರತಿಯವರು ಪರಿಣಾಮಕಾರಿಯಾಗಿ ಗದ್ಯಾನುವಾದ ಮಾಡಿದ್ದಾರೆ. ಗದ್ಯಾನುವಾದ ಓದುತ್ತಿದ್ದರೆ ಅವರ ವಿದ್ವತ್‌, ಕಾವ್ಯಶಕ್ತಿ ಹಾಗೂ ಭಾಷಾ ಪಕ್ಷತೆ ಸ್ಪಷ್ಟವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗದ್ಯಾನುವಾದ ಪರಿಚಯ ನೀಡಿದ ಸಂಸ್ಕೃತ ವಿದ್ವಾಂಸ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌, ಎನ್‌.ಭಾರತಿ ಅವರು ಗದ್ಯಾನುವಾದವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟಿದ್ದಾರೆ. ಮೂಲ ಕವಿಯ ಅಭಿಪ್ರಾಯ, ಧ್ವನಿ, ಶೈಲಿ, ಆದ್ಯತೆಯನ್ನಿಟ್ಟುಕೊಂಡೇ ಸಂಗ್ರಹಿಸಿರುವುದು ಉತ್ತಮವಾಗಿದೆ. ಮೂಲ ಕವಿತೆಯ ಗತಿಯೊಂದಿಗೆ ತಮ್ಮ ಗತಿಯನ್ನು ಪುನರ್‌ ನಿರೂಪಿಸುವುದು ಸವಾಲಿನ ಕೆಲಸ. ಅದನ್ನು ಭಾರತಿಯವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು. 

ಮೊದಲ ಗದ್ಯಾನುವಾದ ಪ್ರತಿ ಸ್ವೀಕರಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಮೂಲಕೃತಿಗೆ ಸ್ವಲ್ಪವೂ ಚ್ಯುತಿ ಬಾರದಂತೆ ಪರಿಣಾಮಕಾರಿಯಾಗಿ ಗದ್ಯಾನುವಾದ ರೂಪುಗೊಂಡಿದೆ. ವೀರಪ್ಪ ಮೊಯ್ಲಿ ಅವರ ಶ್ರೀರಾಮಾಯಣ ಮಹಾನ್ವೇಷಣಂ ಕೃತಿಯಲ್ಲಿ ಸಮಾನತೆ, ಸ್ತ್ರೀವಾದ, ಮನುಷ್ಯ ಪ್ರಜ್ಞೆ ಇದೆ. ಸಮಾಜದಲ್ಲಿ ಇಂದು ಪರಸ್ಪರರು, ನೆರೆಹೊರೆಯವರನ್ನು ಸಂಶಯದಿಂದ ನೋಡುವ ಇಂದಿನ ಸಂದರ್ಭದಲ್ಲಿ ಮನುಷ್ಯ ಪ್ರಜ್ಞೆಯನ್ನು ಪ್ರತಿಪಾದಿಸುವುದು ಪ್ರಸ್ತುತವೆನಿಸಿದೆ ಎಂದು ಹೇಳಿದರು.

Advertisement

ಇದಕ್ಕೂ ಮುನ್ನ ನಿರ್ಮಲ ಪ್ರಸನ್ನ ಅವರು ಗಮಕ ವಾಚನ ಹಾಗೂ ಡಾ.ಎ.ವಿ.ಪ್ರಸನ್ನ ಅವರು ವ್ಯಾಖ್ಯಾನ ಪ್ರಸ್ತುತ ಪಡಿಸಿದರು. ರಂಗಕರ್ಮಿ ಡಾ.ಡಿ.ಕೆ.ಚೌಟ, ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್‌, ಗದ್ಯಾನುವಾದ ಮಾಡಿರುವ ಎನ್‌.ಭಾರತಿ ಉಪಸ್ಥಿತರಿದ್ದರು.

ಅನ್ವೇಷಣೆಯಿಂದಷ್ಟೇ ಹೊಸತನದ ಅಮೃತ ದಕ್ಕುತ್ತದೆ. ನನ್ನ ಕಾವ್ಯದ ಜಾಡು ಕೂಡ ಅನ್ವೇಷಣೆ. ದಾಳಿ ಸಂಸ್ಕೃತಿಗಿಂತ ಸಂಬಂಧಗಳನ್ನು ಬೆಸೆಯುವುದಕ್ಕೆ ಒತ್ತು ನೀಡಲಾಗಿದೆ. ಜತೆಗೆ ಸ್ತ್ರೀ ಸಮಾನತೆಯೂ ಇದೆ. ಒಟ್ಟಾರೆ ಸತ್ಯ, ಧರ್ಮ, ಶಾಂತಿ, ಪ್ರೇಮ ಮತ್ತು ಅಹಿಂಸೆಯನ್ನು ಮಹಾಕಾವ್ಯ ಪ್ರತಿಪಾದಿಸುತ್ತದೆ. ಕಾವ್ಯ ರಚಿಸುವವರಿಗೆ ಜನರ ದೃಷ್ಟಿಗಿಂತ ಮನಸ್ಸಿನ ದೃಷ್ಟಿ ಇರುತ್ತದೆ. ಇದಕ್ಕೆ ನಾನು ಸಹ ಹೊರತಲ್ಲ.
-ಎಂ.ವೀರಪ್ಪ ಮೊಯ್ಲಿ , ಸಂಸದ 

ಮೊಯ್ಲಿ ಮತ್ತೂಂದು ಕಾವ್ಯ: ನೇರ ಚುನಾವಣಾ ರಾಜಕೀಯದಲ್ಲಿದ್ದುಕೊಂಡು ಮೂರು ಮಹಾಕಾವ್ಯಗಳನ್ನು ರಚಿಸಿದ ವೀರಪ್ಪ ಮೊಯ್ಲಿಯವರಂತಹ ಮತ್ತೂಂದು ವ್ಯಕ್ತಿತ್ವ ಇಡೀ ದೇಶದಲ್ಲೇ ಕಾಣಸಿಗುವುದಿಲ್ಲ. ಅಹಿಂಸೆಯನ್ನೇ ಕೇಂದ್ರವಾಗಿಟ್ಟುಕೊಂಡು ಅವರು ರಚಿಸಿರುವ “ಬಾಹುಬಲಿ ಅಹಿಂಸಾ ದಿಗ್ವಿಜಯ’ ಮಹಾಕಾವ್ಯವೂ ಸದ್ಯದಲ್ಲೇ ಬಿಡುಗಡೆಯಾಗುತ್ತಿರುವುದು ಸಂತಸದ ಸಂಗತಿ ಎಂದು ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next