Advertisement

ಸನಾತನ ಆಹಾರ ಸಂಸ್ಕೃತಿ ಉಳಿಸಿ, ಬೆಳೆಸೋಣ

12:58 AM Jun 07, 2021 | Team Udayavani |

ಪ್ರಕೃತಿ, ಸಂಸ್ಕೃತಿ, ವಿಕೃತಿ-ಈ ಮೂರು ಭಾವಗಳು ಮನುಷ್ಯನ ಗುಣ ಸ್ವಭಾವಗಳನ್ನು ರೂಪಿಸುತ್ತವೆ. ಆಹಾರದ ಬಗೆಗೇ ನೋಡಿದರೆ ಪ್ರಕೃತಿಯಲ್ಲಿ ದೊರೆ ಯುವ ಆಹಾರವನ್ನು ಅದೇ ರೂಪದಲ್ಲಿ ಸ್ವೀಕರಿಸುವುದು ಪ್ರಕೃತಿ. ಅವುಗಳಿಗೆ ಉಪ್ಪು, ಹುಳಿ, ಖಾರ ಇತ್ಯಾದಿಗಳನ್ನು ಸೇರಿಸಿ ರುಚಿಕರವನ್ನಾಗಿ, ಪುಷ್ಟಿಕರವನ್ನಾಗಿ ಮಾಡಿ ಸೇವಿಸುವುದು ಸಂಸ್ಕೃತಿ. ಅವುಗಳನ್ನು ಕೆಡಿಸುವುದು ಹಾಗೂ ಕೆಡಿಸಿ ಸ್ವೀಕರಿಸುವುದು ವಿಕೃತಿ. ನಾವು ತಿನ್ನುವ ಆಹಾರವು ದೇಹ ಹಾಗೂ ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸ್ವಸ್ಥವಾದ ದೇಹ ಮತ್ತು ಮನಸ್ಸುಗಳಿಗೆ ಮೂಲ ಕಾರಣ ಪರಿಶುದ್ಧ ಮತ್ತು ಸುರಕ್ಷಿತ ಆಹಾರ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಜೂನ್‌ 7ನ್ನು ವಿಶ್ವ ಆಹಾರ ಸುರಕ್ಷತಾ ದಿನವನ್ನಾಗಿ ಆಚರಿಸಲು ಕರೆೆಕೊಟ್ಟಿದೆ. ಇದರ ಮುಖ್ಯ ಉದ್ದೇಶ ಸುರಕ್ಷಿತ ಆಹಾರದ ಬಳಕೆ, ಆಹಾರಜನ್ಯ ಅಪಾಯ (ರೋಗ) ಗಳನ್ನು ತಡೆಯುವುದು ಹಾಗೂ ಆಹಾರ ಸುರಕ್ಷತೆಯ ಮೂಲಕ ಆರೋಗ್ಯ, ಮಾರುಕಟ್ಟೆ, ಪ್ರವಾಸ ಇವುಗಳನ್ನು ಉತ್ತೇಜಿಸಿ ಸುಸ್ಥಿರ ಅಭಿವೃದ್ಧಿ ಯನ್ನು ಸಾಧಿಸುವುದು. ವಿಶ್ವ ಆಹಾರ ಸುರಕ್ಷತಾ ದಿನದ ಈ ವರ್ಷದ ಧ್ಯೇಯ “ಆರೋಗ್ಯಕರ ನಾಳೆಗಾಗಿ ಇಂದು ಸುರಕ್ಷಿತ ಆಹಾರ’. ಸಕಲ ಜೀವ ಸಮೂಹಕ್ಕೆ ಉತ್ತಮ ನಾಳೆಗಳನ್ನು ದೊರಕಿಸಿಕೊಟ್ಟು ಆ ಮೂಲಕ ಪರಿಸರದ ರಕ್ಷಣೆಯೂ ಈ ಧ್ಯೇಯದ ಆಂತರ್ಯ.

Advertisement

ನಮ್ಮ ನಾಳೆಗಳನ್ನು ಸುರಕ್ಷಿತಗೊಳಿಸಬೇಕಾದರೆ ನಿನ್ನೆ ಹೇಗಿದ್ದೆವು, ಇಂದು ಹೇಗಿದ್ದೇವೆ ಎಂಬುದರ ಅರಿವು ಬಹುಮುಖ್ಯವಾಗುತ್ತದೆ. ನಿನ್ನೆ ಉತ್ಪಾದಿಸಿದ ಆಹಾರ ವನ್ನು ಇಂದು ನಾವು ಸ್ವೀಕರಿಸುತ್ತಿದ್ದೇವೆ. ಅದು ನಮಗೆ ಉತ್ತಮ ನಾಳೆಗಳನ್ನು ದೊರಕಿಸಿಕೊಡಬೇಕಾದರೆ ಇಂದು ಅದನ್ನು ಎಷ್ಟು ಸುರಕ್ಷಿತವಾಗಿಟ್ಟುಕೊಂಡು ಬಳಸಿದ್ದೇವೆ ಎಂಬುದರ ಜತೆಗೆ ನಿನ್ನೆ ಹೇಗೆ ಸುರಕ್ಷಿತ ವಾಗಿ ಬೆಳೆಸಿದ್ದೇವೆಂಬುದು ಮುಖ್ಯವಾಗುತ್ತದೆ. ಇಂದು ಆಹಾರವನ್ನು ಸುರಕ್ಷಿತವಾಗಿ ಕಾಪಿಟ್ಟಿರಬಹುದು. ಆದರೆ ಉತ್ಪಾ ದನೆಯ ಹಂತದಲ್ಲಿ ಈ ಬಗ್ಗೆ ಗಮನ ಹರಿಸದಿದ್ದರೆ ಆ ಆಹಾರ ಎಷ್ಟರಮಟ್ಟಿಗೆ ಸುರಕ್ಷಿತವೆನಿಸಿಕೊಳ್ಳುತ್ತದೆ?. ಇಂದು ಆಗಿರುವುದು ಇದೇ ತಾನೆ?. ಅಭಿವೃದ್ಧಿಯ ಹಪಾಹಪಿಕೆಯಿಂದಾಗಿ ನಮ್ಮ ಬೇರುಗಳನ್ನು ದುರ್ಬಲಗೊಳಿಸಿದ್ದೇವೆ. ಮಾರುಕಟ್ಟೆ ವಿಸ್ತಾರ ಹಾಗೂ ಲಾಭವೇ ಮುಖ್ಯವಾದಾಗ ಆಹಾರದ ಗುಣಮಟ್ಟ, ಸುರಕ್ಷತೆ ಗೌಣವಾಗುತ್ತದೆ. ರಾಸಾಯನಿಕ, ಕೀಟನಾಶಕ ಗಳನ್ನು ಬಳಸಿ ಪಡೆದ ಉತ್ಪನ್ನ ಲಾಭವನ್ನು ತಂದು ನಮ್ಮ ಜೇಬು ತುಂಬಿಸಿತು. ಆದರೆ ಪರಿಣಾಮ ಮಾತ್ರ ಭಯಾನಕವಾದುದು. ಭೂಮಿಯ ಗುಣಮಟ್ಟದ ಹಾನಿ, ಜಲಮಾಲಿನ್ಯ ಹೀಗೆ ಪ್ರಕೃತಿಯ ಮೇಲೆ ವಿಷಕಾರಿ ಪರಿಣಾಮಗಳನ್ನು ಉಂಟುಮಾಡಿದೆ. ಮಾತ್ರವಲ್ಲ ಆಹಾರದ ಗುಣಮಟ್ಟದ ಮೇಲೂ ದುಷ್ಪರಿಣಾಮವನ್ನು ಬೀರಿ ತನ್ಮೂಲಕ ನಮ್ಮ ದೈಹಿಕ, ಮಾನಸಿಕ ಆರೋಗ್ಯಕ್ಕೂ ಅಪಾಯವನ್ನು ತಂದೊಡ್ಡಿದೆ. ಇದರೊಂದಿಗೆ ಇನ್ನೂ ಅಪಾಯಕಾರಿಯಾಗಿ ಬೆಳೆದಿರುವುದು ನಮ್ಮ ನೂತನ ಆಹಾರ ಪದ್ಧತಿ. ಗಡಿಬಿಡಿಯ ಬದುಕಿನಲ್ಲಿ ನಮಗೆ ಎಲ್ಲವೂ ತತ್‌ಕ್ಷಣವೇ ದೊರಕಬೇಕು. ಅದರ ಭಾಗವೇ Instant Food . ಇದು ಅಂಥ Instant ಆದ eternal ಕಾಯಿಲೆಗಳನ್ನೂ ಜತೆಗೆ ಕರೆತಂದಿರುವುದು ಸುಳ್ಳಲ್ಲ. ನಮ್ಮ ಆಹಾರಪದ್ಧತಿಯಲ್ಲಿ ಅಸಮತೋಲನವನ್ನು ತಂದುಕೊಂಡಿರುವ ನಾವು ನಮ್ಮ ಸುತ್ತಲಿನ ಜೀವಿಗಳ ಆಹಾರಪದ್ಧತಿಯಲ್ಲೂ ಅಸಮತೋಲನವನ್ನು ಉಂಟು ಮಾಡಿರುವುದು ಮಾತ್ರ ದುರಂತ. ಕಾಡಿನ ದಾರಿಯಾಗಿ ಸಾಗುವಾಗ ಅಲ್ಲಿರುವ ಮಂಗಗಳಿಗೆ ಬ್ರೆಡ್‌, ತಂಪು ಪಾನೀಯಗಳ ರುಚಿ ಹತ್ತಿಸಿದ್ದೇವೆ. ಸಾಕುಪ್ರಾಣಿಗಳಿಗೆ ಕೃತಕ ಆಹಾರಗಳ ಅಭ್ಯಾಸ ಮಾಡಿಸಿದ್ದೇವೆ. ಜತೆಗೆ ಪರಿಸರದಲ್ಲಿ ಇರಬೇಕಾದ ಆಹಾರ ಸರಪಳಿಯನ್ನು ತುಂಡರಿಸಿರುವುದಂತೂ ಅಕ್ಷಮ್ಯವೇ ಸರಿ.

ನಮ್ಮ ಸನಾತನ ಪರಂಪರೆಗೆ ಬೆನ್ನು ಹಾಕಿ ಸಾಗಿ ದಂತೆಲ್ಲ ಇಂಥ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಇದಕ್ಕಾಗಿ ವಿಶ್ವಸಂಸ್ಥೆಗೂ ಒಂದೊಂದು ವಿಷಯಕ್ಕಾಗಿ ಒಂದೊಂದು ದಿನಾಚರಣೆಯನ್ನು ಘೋಷಿಸಿ, ಧ್ಯೇಯವನ್ನು ನಿರೂಪಿಸಿ ಆ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸುವ ಅನಿವಾರ್ಯ ಎದುರಾಗಿದೆ. ಆಹಾರದ ಬಗೆ, ಗುಣಲಕ್ಷಣ, ಪರಿಣಾಮ, ಬಳಕೆಯ ವಿಧಾನ, ದೇಶ-ಕಾಲಗಳಿಗನುಗುಣವಾಗಿ ಆಹಾರ ಸ್ವೀಕಾರದ ನಿಯಮ, ಉತ್ಪಾದನೆಯ ಪದ್ಧತಿ, ಕಾಪಿಡುವ ಕ್ರಮ ಇವುಗಳ ಬಗೆಗೆ ನಿರ್ದೇಶನ ಮಾಡಿದ ನಮ್ಮ ಹಿರಿಯರು ಉತ್ಕೃಷ್ಟವಾದ ಆಹಾರ ಸಂಸ್ಕೃತಿಯೊಂದನ್ನು ನಮಗೆ ನೀಡಿದ್ದಾರೆ. ವಿಶ್ವಸಂಸ್ಥೆಯು ಇಂದು ರೂಪಿಸಿರುವ ಧ್ಯೇಯ ಸಾಧನೆಗಾಗಿ ಮರಳಿ ಆ ಸಂಸ್ಕೃತಿಯೆಡೆಗೆ ನಾವು ಹೊರಳಬೇಕಿದೆ. ಸುರಕ್ಷಿತವಾದ ಸನಾತನ ಆಹಾರ ಸಂಸ್ಕೃತಿಯನ್ನು ಅರಿತು, ಉಳಿಸಿ, ಬೆಳೆಸೋಣ.

– ಡಾ| ವಿಜಯಲಕ್ಷ್ಮೀ ಎಂ., ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next