ನವದೆಹಲಿ: ಕರ್ನಾಟಕದಲ್ಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿ ಇರುವ ಸಿರಿಧಾನ್ಯಗಳನ್ನು ಜಗತ್ತಿನ ಗುಣಮಟ್ಟದ ಆಹಾರ ಪದ್ಧತಿ ವ್ಯವಸ್ಥೆಯಲ್ಲಿ ಪರಿಗಣಿಸಬೇಕು ಎಂಬ ಕೇಂದ್ರ ಸರ್ಕಾರದ ಸಲಹೆಗೆ ಮನ್ನಣೆ ಸಿಕ್ಕಿದೆ. ವಿಶ್ವಸಂಸ್ಥೆಯಿಂದ ರಚನೆಗೊಂಡಿರುವ ಅಂತಾರಾಷ್ಟ್ರೀಯ ಆಹಾರ ಸುರಕ್ಷತಾ ಸಂಸ್ಥೆ, ಕೋಡೆಕ್ಸ್ ಎಲಿಮೆಂಟೇರಿಯಸ್ ಕಮಿಷನ್ -ಸಿಎಸಿ ಸಮ್ಮೇಳನದಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಅದು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ. ಇಟೆಲಿಯ ರೋಮ್‌ನಲ್ಲಿ ನಡೆದ ಕಮಿಷನ್‌ನ ಸಮ್ಮೇಳನದಲ್ಲಿ ಕೇಂದ್ರದ ಪ್ರಸ್ತಾಪಕ್ಕೆ ಮನ್ನಣೆ ಪ್ರಾಪ್ತವಾಗಿದೆ.
ಸಿರಿ ಧಾನ್ಯಗಳ ವಿಧಗಳಾಗಿರುವ ಊದಲು, ರಾಗಿ, ಹರಕ, ಬರಗು, ಸಾಮೆಯನ್ನು ಸೇರಿಸಿಕೊಂಡು ಒಂದು ಗುಣಮಟ್ಟದ ಶ್ರೇಣಿಯ ಆಹಾರ ವ್ಯವಸ್ಥೆಯಾಗಿ ಪರಿಗಣಿಸುವ ಬಗ್ಗೆ ಕೇಂದ್ರ ಸರ್ಕಾರ ಸಲಹೆ ನೀಡಿತ್ತು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೃಷಿ ಮತ್ತು ಆಹಾರ ಸಂಘಟನೆ ಜಂಟಿಯಾಗಿ ರಚಿಸಿರುವ ಕೋಡೆಕ್ಸ್ ಎಲಿಮೆಂಟೇರಿಯಸ್ ಕಮಿಷನ್ ಕೇಂದ್ರ ಸರ್ಕಾರದ ಸಲಹೆಯನ್ನು ಮುಕ್ತ ಕಂಠದಿಂದ ಶ್ಲಾ ಸಿ, ಒಪ್ಪಿದೆ. ಸದ್ಯ ಸಜ್ಜೆ ಮತ್ತು ಜೋಳವನ್ನು ಮಾತ್ರ ಈ ಪಟ್ಟಿಯಲ್ಲಿ ಸೇರಿಸಲಾಗಿದೆ.
ಪ್ರಸಕ್ತ ವರ್ಷವನ್ನು “ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ” ಎಂದು ಪ್ರಧಾನಿ ಮೋದಿಯವರ ಸಲಹೆ ಹಿನ್ನೆಲೆಯಲ್ಲಿ ಆಚರಿಸಿಕೊಳ್ಳುತ್ತಿರುವಂತೆಯೇ ಭಾರತದ ಸಲಹೆಗೆ ಮನ್ನಣೆ ಸಿಕ್ಕಿರುವುದು ಸಂತೋಷದ ವಿಚಾರ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ ಮಾಂಡವಿಯಾ ಹೇಳಿದ್ದಾರೆ. ರೋಮ್‌ನಲ್ಲಿ ಸರ್ಕಾರದ ಪ್ರಸ್ತಾವನೆಗೆ ಮಾನ್ಯತೆ ಸಿಗುವಲ್ಲಿ ಶ್ರಮಿಸಿದವರಿಗೆ ಅಭಿನಂದನೆಗಳು ಎಂದಿದ್ದಾರೆ.
ಮುಂದೆ ಏನಾಗಲಿದೆ?
ಭಾರತದ ಆಹಾರ, ಗುಣಮಟ್ಟ ಮತ್ತು ಸುರಕ್ಷಾ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ನಿಗದಿಮಾಡಿರುವ 15 ವಿಧಗಳ ಸಿರಿಧಾನ್ಯಗಳನ್ನು ಎಂಟು ಗುಣಮಟ್ಟದ ಆಧಾರದಲ್ಲಿ ವಿಂಗಡಿಸಲಾಗುತ್ತದೆ. ಅವುಗಳಲ್ಲಿ ಇರುವ ತೇವಾಂಶ, ಯೂರಿಕ್ ಆ್ಯಸಿಡ್ ಇರುವ ಪ್ರಮಾಣ ಸೇರಿದಂತೆ ಹಲವು ಅಂಶಗಳ ಬಗ್ಗೆ ಅಧ್ಯಯನ ನಡೆಸಿ, ಕೇಂದ್ರ ಸರ್ಕಾರ ವರದಿ ಸಿದ್ಧಪಡಿಸಬೇಕಾಗಿದೆ. ಅದನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.