ತೋಕೂರು : ಹಸಿದವನ ಹೊಟ್ಟೆಯನ್ನು ತಣಿಸಲು ಪ್ರಯತ್ನಿಸುವುದು ಸಹ ಸಮಾಜ ಸೇವೆಯ ಒಂದು ಗುಣ, ವೃಥಾ ಆಹಾರವನ್ನು ಪೋಲು ಮಾಡದೆ. ಅಗತ್ಯವಿರುವಷ್ಟು ಮಾತ್ರ ಹೊಟ್ಟೆ ತುಂಬಿಸಿಕೊಳ್ಳಿ. ಇದರಿಂದ ಆರೋಗ್ಯಕ್ಕೂ ಒಳ್ಳೆಯದು, ಸಮಾಜಕ್ಕೊಂದು ಸಂದೇಶವೂ ಸಿಗುತ್ತದೆ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.14ರಂದು ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಮೂಲ್ಕಿಯ ಜನ ವಿಕಾಸ ಸಮಿತಿಯ ಸಹಕಾರದಲ್ಲಿ ವಿಶ್ವ ಆಹಾರ ದಿನಾಚರಣೆಯ ಪ್ರಯುಕ್ತ ನಡೆದ ಆಹಾರದ ಅಪವ್ಯಯವನ್ನು ತಡೆಗಟ್ಟುವ ಉದ್ದೇಶದ ಆಹಾರ ಜಾಗೃತಿ ಅಭಿಯಾನ-2017ಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ತೋಕೂರು ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆಹಾರದ ಬಗ್ಗೆ ಕಾಳಜಿಯನ್ನು ವಹಿಸಲು ಮಕ್ಕಳ ಮೂಲಕ ಜಾಗೃತಿ ಮೂಡಿಸುವ ಪುನರೂರು ಪ್ರತಿಷ್ಠಾನದ ಯೋಚನೆ ಮತ್ತು ಯೋಜನೆ ಉತ್ತಮ ಕಾರ್ಯಕ್ರಮವಾಗಿದೆ. ಇದರಿಂದ ಮಕ್ಕಳ ಮನಸ್ಸನ್ನು ಗೆಲ್ಲಲು ನಾವು ಸಹ ಪರಿವರ್ತನೆ ಆಗಬೇಕಾಗಿದೆ ಎಂದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿ, ಪ್ರಸ್ತಾವನೆಗೈದು, ಆಹಾರದ ಪ್ರಾಮುಖ್ಯವನ್ನು ತಿಳಿಸಿದರು. ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್. ಕೆ.ಉಷಾರಾಣಿ, ಕಿನ್ನಿಗೋಳಿ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಶಾಂಭವಿ ಶೆಟ್ಟಿ ನಿಡ್ಡೋಡಿ, ಲಯನೆಸ್ ಕ್ಲಬ್ ಅಧ್ಯಕ್ಷೆ ಸ್ಮಿತಾ ಎಂ. ಡಿ’ಸೋಜಾ, ಶಾಲಾ ಮುಖ್ಯ ಶಿಕ್ಷಕಿ ಗೌರಿ, ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ ಯೋಗೀಶ್, ಸಹಾಯಕಿ ವಿಶಾಂತಿ, ಉದ್ಯಮಿ ನಿಡ್ಡೋಡಿ ಸಚಿನ್ ಶೆಟ್ಟಿ, ಗ್ರಾಮ ಕರಣಿಕ ಮೋಹನ್, ಜನ ವಿಕಾಸ ಸಮಿತಿಯ ಅಧ್ಯಕ್ಷ ಪಿ.ಎಸ್.ಸುರೇಶ್ ರಾವ್, ಶ್ರೇಯಾ ಪುನರೂರು, ಆನಂದ ಮೇಲಂಟ, ಭಾಗ್ಯಾ ರಾಜೇಶ್, ಶಶಿಕರ ಕೆರೆಕಾಡು, ಸಹ ಶಿಕ್ಷಕಿಯರಾದ ಗೌರಿ, ಮೋಹಿನಿ, ಸರಿತಾ, ಅನಿತಾ, ನಿತೇಶ್ ಶೈಲಜಾ ಉದಯಕುಮಾರ್, ಪ್ರೇಮಾ ಉಪಸ್ಥಿತರಿದ್ದರು. ಉಪನ್ಯಾಸಕ ಜಿತೇಂದ್ರ ವಿ. ರಾವ್ ಹೆಜಮಾಡಿ ನಿರೂಪಿಸಿದರು, ಪ್ರಾಣೇಶ್ ಭಟ್ ದೇಂದಡ್ಕ ವಂದಿಸಿದರು.
ಆಹಾರ ಜಾಗೃತಿ ಅಭಿಯಾನ
ಮೂಲ್ಕಿ ಹೋಬಳಿಯ 90 ಶಾಲಾ ಕಾಲೇಜುಗಳಿಗೆ, ಹೊಟೇಲ್, ಕಲ್ಯಾಣ ಮಂಟಪ ಹಾಗೂ ಸಭಾ ಭವನಗಳ ಸಹಿತ ಸುಮಾರು 210 ಕಡೆಗಳಿಗೆ ತೆರಳಿ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಘೋಷ ವಾಕ್ಯದ ವಿವಿಧ ಫಲಕಗಳನ್ನು ಅಳವಡಿಸುವ ಕಾರ್ಯಕ್ರಮವನ್ನು ಮುಂದಿನ ಮೂರು ದಿನಗಳ ಕಾಲ ನಡೆಯಲಿದೆ.