ಗದಗ: ಕರ್ನಾಟಕ ರಾಜ್ಯ ಬೆಳೆಗಾರರ ಸಂಘದಿಂದ ಡಿ.26 ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ ವಿಶ್ವ ರೈತ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಒತ್ತಾಯಿಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಶೇ.65 ಕ್ಕಿಂತಲೂ ಹೆಚ್ಚು ಜನರು ಕೃಷಿಯಲ್ಲಿ ನಿರತ ರಾಗಿದ್ದಾರೆ. ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸುವ ಕ್ಷೇತ್ರವಾಗಿ ಹೊರಹೊಮ್ಮಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೈಗಾರಿಕೋದ್ಯಮಗಳು, ಯಾಂತ್ರೀ ಕರಣ ಉದ್ದಿಮೆಗಳ ಬೃಹತ್ ಪ್ರಮಾಣದಲ್ಲಿ ಬೆಳವಣಿಗೆ ಯಾಗಿದ್ದರಿಂದ ಹವಾಮಾನ ಕಲುಷಿತ ಗೊಂಡಿದೆ. ಅಲ್ಲದೇ, ರೈತರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ವಾರ್ಷಿಕ ಆದಾಯ ಕಡಿಮೆಯಾಗಿದ್ದರಿಂದ ಬಹುತೇಕ ರೈತರು ಕೃಷಿ ಯಿಂದ ವಿಮುಖರಾಗುತ್ತಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರಕಾರ ಚಿಂತನೆ ನಡೆಸಬೇಕು. ಅವುಗಳನ್ನು ಪರಿಹರಿಸುವುದರ ಜೊತೆಗೆ ರೈತರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿ ಸಬೇಕು. ತುಂಡು ಜಮೀನಿನಿಂದ ಹೆಚ್ಚು ಲಾಭ ಸಿಗದೇ ರೈತರಿಗೆ ಸಾಮೂಹಿಕ ಪಾಲುದಾರಿಕೆಯಲ್ಲಿ ಕೃಷಿ ಪದ್ಧತಿ ಪರಿಚಯಿಸಬೇಕು. ರೈತರು ರಾಸಾಯನಿಕ ಗೊಬ್ಬರಕ್ಕೆ ಮಾರು ಹೋಗಿರುವುದನ್ನು ತಪ್ಪಿಸಲು ಪಶು ಸಂಗೋಪನೆ ಹಾಗೂ ಸಮಗ್ರ ಕೃಷಿ ಪದ್ಧತಿಗೆ ಒತ್ತು ನೀಡಬೇಕು. ಕೃಷಿ ಕಾರ್ಮಿಕರ ಕೊರತೆ ಹಾಗೂ ಆರ್ಥಿಕ ವೆಚ್ಚದಿಂದ ಮುಕ್ತಿ ಹೊಂದಲು ಕೃಷಿ ಯಂತ್ರೋಪಕರಣಗಳು ಸುಲಭವಾಗಿ ಬಾಡಿಗೆಗೆ ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಕಾರ್ಮೀಕರ ಕೌಶಲ್ಯ ಅಭಿವೃದ್ಧಿಗೆ ಗ್ರಾಪಂ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ರೈತರಿಗೆ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಬೇಕು. ಹವಾಮಾನ ವೈಫರೀತ್ಯದಿಂದ ಅಪಾರ ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಬೇಕು. ಕನಿಷ್ಟ ಬೆಂಬಲ ಬೆಲೆಯನ್ನು ಎಲ್ಲ ಬೆಳೆಗಳಿಗೂ ವಿಸ್ತರಿಸಬೇಕು. ಕಬ್ಬಿನಿಂದ ಉತ್ಪಾದಿಸುವ ಎತನಾಲ್ ಲಾಭಂಶದಲ್ಲಿ ರೈತರಿಗೆ ಪಾಲು ನೀಡಲು ಕಾನೂನು ಜಾರಿಗೊಳಿಸಬೇಕು. ಹನಿ ನೀರಾವರಿಗೆ ನೀಡುವ ಸಹಾಯ ಧನವನ್ನು ಹೆಚ್ಚಿಗೆ ಮಾಡಬೇಕೆಂದು ಒತ್ತಾಯಿಸಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಕಾಶ ಸಜ್ಜನರ, ರವಿ ನಾಯ್ಕ, ನಿಂಗಪ್ಪ ಬಿಂಗಿ, ಸುರೇಶ ಹಲವಾಗಲಿ, ಶಿದ್ಧನಗೌಡ ಪಾಟೀಲ ಇದ್ದರು.