ಬೆಂಗಳೂರು: ಕೋವಿಡ್ 19 ಲಾಕ್‌ಡೌನ್ ನೆಪದಲ್ಲಿ ಈ ಬಾರಿಯ ವಿಶ್ವ ಪರಿಸರ ದಿನ ಆಟಕ್ಕುಂಟು ಲೆಕ್ಕಕ್ಕಿಲ್ಲಎನ್ನುವಂತೆ ಆಚರಿಸಲಾಗಿದೆ. ಪರಿಸರ ಬೆಳಸಿ ಉಳಿಸುವ ನಿಟ್ಟಿನಲ್ಲಿ ಆಚರಿಸುವ “ವಿಶ್ವ ಪರಿಸರ ದಿನ’ವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್‌ಪಿಸಿಬಿ) ಮತ್ತು ರಾಜ್ಯ ಅರಣ್ಯ ಪರಿಸರ, ಜೀವಶಾಸ್ತ್ರ ಇಲಾಖೆಯು ಪರಿಸರ ದಿನ ಆಚರಣೆಗೆ ಮೀಸಲಿಟ್ಟ ಹಣ ವೆಚ್ಚ ಮಾಡಲು ಕಾರ್ಯಕ್ರಮ ಮಾಡಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟವಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಮಾತ್ರ ಹಣ ವೆಚ್ಚ ಮಾಡಿದೆ. ಆದರೆ, ಜನಜಾಗೃತಿಯಂತಹ ಉಪಯುಕ್ತ ಕಾರ್ಯಕ್ರಮ ಮಾತ್ರ ಮಾಡಲಿಲ್ಲ. ಮಂಡಳಿಯು ರಾಜ್ಯದಲ್ಲಿ ಪರಿಸರ ಸಂರಕ್ಷಣೆ ಕಾರ್ಯಚಟುವಟಿಕೆ ನಡೆಸುವ, ನಿಯಮ ರೂಪಿಸುವ ಅಧಿಕೃತ ಸಂಸ್ಥೆಯಾಗಿದ್ದು, ಈ ಬಾರಿ ಡಿಜಿಟಲ್ ಕಾರ್ಯಕ್ರಮ, ಕೈಪಿಡಿ, ಭಿತ್ತಿ ಪತ್ರ, ಕರಪತ್ರಗಳ ಬಿಡುಗಡೆಗೆ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಂಡಿತ್ತು. ಕೋವಿಡ್ 19 ಸಂಕಷ್ಟದ ಪರಿಸ್ಥಿತಿಯಲ್ಲಿ ಪರಿಸರ ಸಂರಕ್ಷಣೆಯ ಕುರಿತ ಚರ್ಚೆಗಳು, ಕಾಳಜಿಗಳು ಮುನ್ನೆಲೆಗೆ ಬಂದಿದ್ದು, ಪರಿಸರ ಸಂರಕ್ಷಣೆ ಕಾಳಜಿ ಅನಿವಾರ್ಯವಾಗಿದೆ.
ಈ ಬಗ್ಗೆ ಎಲ್ಲರೂ ಎಚ್ಚರಗೊಳ್ಳಬೇಕು ಎಂದು ವಿಶ್ವಸಂಸ್ಥೆಯು ಈ ಬಾರಿಯ ವಿಶ್ವ ಪರಿಸರ ದಿನವನ್ನು “ಟೈಮ್ ಫಾರ್ ನೇಚರ್ ‘ (ಪ್ರಕೃತಿಗೆ ಸಮಯ) ಎಂಬ ಘೋಷ ವಾಕ್ಯದಡಿಯಲ್ಲಿ ಆಚರಣೆಗೆ ಸೂಚಿಸಿತ್ತು. ಆದರೆ, ಲಾಕ್‌ಡೌನ್ ಹಿನ್ನೆಲೆ ಹಿಂದೆದಿಗಿಂತಲೂ ನೀರಸವಾಗಿ ಪರಿಸರ ದಿನ ಆಚರಣೆ ಕಂಡು ಬಂದಿದೆ. ಸರ್ಕಾರದ ಅಂಗ ಸಂಸ್ಥೆಗಳು ನೆಪ ಮಾತ್ರಕ್ಕೆ ದಿನಾ ಚರಣೆ ಮಾಡಿದರೆ, ಸಾರ್ವಜನಿಕ ಸಂಘ ಸಂಸ್ಥೆಗಳು ಅಂತರ ಕಾಯ್ದುಕೊಂಡವು. ಕೆಲವೆಡೆ ಮಾತ್ರ ಕಚೇರಿ ಆವರಣದಲ್ಲಿ, ಮೈದಾನದಲ್ಲಿ ಸಸಿ ನೆಡಲಾಗಿದೆ.
ಸಂಬಂಧವೇ ಇಲ್ಲ ಎನ್ನುವಂತಿದ್ದ ಅರಣ್ಯ ಇಲಾಖೆ: ರಾಜ್ಯ ಅರಣ್ಯ ಇಲಾಖೆಯು ವಿಶ್ವ ಪರಿಸರ ದಿನಕ್ಕೂ ನಮಗೂ ಸಂಬಂಧವಿಲ್ಲ ಎಂಬಂತಿದೆ. ಈ ಕುರಿತು ಮಾಹಿತಿ ಕೇಳಿದರೆ, “ಅರಣ್ಯ ದಿನವನ್ನು ಮಾತ್ರ ನಾವು ಆಚರಿಸುವುದು, ವಿಶ್ವ ಪರಿಸರ ದಿನವು ಪರಿಸರ ವಿಭಾಗಕ್ಕೆ ಸೇರಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಚರಿಸಲಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಪರಿಸರ ಸಂರಕ್ಷಣೆ ಚಟುವಟಿಕೆಗಳಲ್ಲಿ ಇಲಾಖೆಗಳ ಸಮನ್ವಯತೆ ಕೊರತೆ ಇರುವುದು ಸ್ಪಷ್ಟವಾಗುತ್ತಿದೆ.
ನಿಯಮ ರೂಪಿಸಲು ಇದು ಸಕಾಲ: ಲಾಕ್‌ಡೌನ್ ವೇಳೆ ಮಹಾನಗರಗಳಲ್ಲಿ ಮಾಲಿನ್ಯ ಇಳಿಕೆ, ನೀರು ಮತ್ತು ವಿದ್ಯುತ್ ಉಳಿಕೆಯಾಗಿದೆ. ಕಾಡುಗಳಲ್ಲಿ ಪ್ರಾಣಿಗಳು ನಿಶ್ಚಿಂತವಾಗಿವೆ. ಒಂದಿಷ್ಟು ಉತ್ತಮ ಪರಿಸರ ನಿರ್ಮಾಣಕ್ಕೆ ಈ ಲಾಕ್‌ಡೌನ್ ಬದಲಾವಣೆ ಸಾಕಷ್ಟು ಕೊಡುಗೆ ನೀಡಿದೆ. ಇಂಥ ವೇಳೆ ಕೇವಲ ಆನ್‌ಲೈನ್ ಕಾರ್ಯಕ್ರಮಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೀಮಿತವಾಗಿರುವುದಕ್ಕೆ ಪರಿಸರವಾದಿಗಳಿಂದ ಬೇಸರ ವ್ಯಕ್ತವಾಗಿದೆ. ಅಲ್ಲದೆ ಮಂಡಳಿಯು ಲಾಕ್‌ಡೌನ್ ಬಳಿಕ ಉತ್ತಮ ಪರಿಸರಕ್ಕಾಗಿ ಜನರು ಕೈಗೊಳ್ಳಬೇಕಾದ ಕ್ರಮಗಳ ನಿಯಮಗಳನ್ನು ಜಾರಿಗೆ ತರಬಹುದಿತ್ತೆಂದು ಪರಿಸರವಾದಿಗಳು ಸಲಹೆ ನೀಡಿದ್ದಾರೆ.
ಕೋವಿಡ್ 19 ವೈರಸ್ ಹರಡುವಿಕೆಯನ್ನು ತಡೆಯುವ ಶಕ್ತಿ ವಿಶೇಷ ತಳಿಯ ಮರಗಳಲ್ಲಿದೆ. ಈ ಬಗ್ಗೆ ಅರಣ್ಯ ಇಲಾಖೆ ಆಲೋಚಿಸಿ ಪರಿಸರ ದಿನದಂದು ಎಲ್ಲೆಡೆ ಗಿಡಗಳನ್ನು ನೆಡಬಹುದಿತ್ತು. ಲಾಕ್‌ಡೌನ್ ವೇಳೆ ನಿಯಂತ್ರಣವಾಗಿದ್ದ ಮಾಲಿನ್ಯವನ್ನು ಮುಂದಿನ ದಿನಗಳಲ್ಲಿ ಯಾವ ರೀತಿ ನಿಯಂತ್ರಣದಲ್ಲಿಡಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ವಾಗಬೇಕಿತ್ತು. ಇದರ ಬದಲಾಗಿ ಆನ್ ಲೈನ್ ಕಾರ್ಯಕ್ರಮಕ್ಕೆ ಸೀಮಿತವಾಗಿ ರುವುದು ಬೇಸರದ ವಿಚಾರ.
-ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ