Advertisement

ಮಕ್ಕಳ ರಕ್ಷಣೆ ನಮ್ಮ ಹೊಣೆ ; ಎಳೆಯರ ಬೆಳವಣಿಗೆಗೆ ಮುಳುವಾಗದಿರಲಿ ಕೋವಿಡ್‌-19

11:39 PM Jun 11, 2020 | Sriram |

ಮಣಿಪಾಲ: ಭಾರತ ಸೇರಿದಂತೆ ವಿಶ್ವಾದ್ಯಾಂತ ಅನಕ್ಷರತೆ, ಬಡತನದಷ್ಟೇ ಭದ್ರವಾಗಿ ಬೇರೂರಿರುವ ಮತ್ತೊಂದು ಪಿಡುಗು ಬಾಲಕಾರ್ಮಿಕ ಸಮಸ್ಯೆ. ಬಡತನ ಮತ್ತು ಅರಿವಿನ ಕೊರತೆಯಿಂದ ಪಾಲಕರು ಮಕ್ಕಳನ್ನು ದುಡಿಮೆಗೆ ತಳ್ಳುತ್ತಿದ್ದಾರೆ. ಅವರ ಅಸಹಾಯಕ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡ ಕೆಲವು ಉದ್ಯಮಿಗಳು ಕಡಿಮೆ ಕೂಲಿ ನೀಡಿ, ಮಕ್ಕಳನ್ನು ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಮನೋಧರ್ಮ ಬದಲಾಗಬೇಕು. ಮಕ್ಕಳನ್ನು ದುಡಿಮೆಯಲ್ಲಿ ತೊಡಗಿಸುವ ಬದಲು ಶಿಕ್ಷಣ ನೀಡುವತ್ತ ಪಾಲಕರು ಮತ್ತು ಸಮಾಜ ಮುಂದಾಗಬೇಕು. ಈ ಹಿನ್ನೆಲೆ ಯಲ್ಲಿ ವಿಶ್ವಾದ್ಯಾಂತ ಬಾಲಕಾರ್ಮಿಕರ ದುರವಸ್ಥೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಜೂನ್‌ 12ರಂದು ವಿಶ್ವ ಬಾಲಕಾರ್ಮಿಕರ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ.

Advertisement

2002ರಲ್ಲಿ ಪ್ರಾರಂಭ
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಾಲಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೈಗಾರಿಕೆಗಳಲ್ಲಿ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಲಾಗುತ್ತದೆ. ಅದರಲ್ಲೂ 5ರಿಂದ 12 ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಕಾರ್ಮಿಕ ಪದ್ಧತಿಗೆ ಬಲಿಯಾಗುತ್ತಿದ್ದಾರೆ. ಶಿಕ್ಷಣ, ಉತ್ತಮ ಬೆಳವಣಿಗೆ, ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಮತ್ತು ಆರೋಗ್ಯ, ಸುರಕ್ಷೆ ಎಂಬಿತ್ಯಾದಿ ಮೂಲ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯ ತೀವ್ರತೆಯನ್ನರಿತ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) 2002ರಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನವನ್ನು ಪ್ರಾರಂಭಿಸಿತು. ಈ ಬಾರಿ “ಕೋವಿಡ್‌-19: ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಹೋರಾಟ ಮತ್ತು ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಮಕ್ಕಳ ರಕ್ಷಣೆ ನಮ್ಮ ಹೊಣೆ’ ಎಂಬ ವಿಷಯವನ್ನಿಟ್ಟುಕೊಳ್ಳುವ ಅರಿವು ಮೂಡಿಸಲು ಮುಂದಾಗಿದೆ.

ಪರಿಸ್ಥಿತಿ ಬಿಗಡಾಯಿಸಲಿದೆ
ಸದ್ಯ ಕೋವಿಡ್‌-19 ಬಿಕ್ಕಟ್ಟು ಬಾಲ ಕಾರ್ಮಿಕ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಪಿಡುಗಿನಿಂದಾಗಿ ಬಾಲಕಾರ್ಮಿಕರ ಪ್ರಮಾಣ ಹೆಚ್ಚಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಐಎಲ್‌ಒ ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದು, ಸಮಸ್ಯೆ ಪ್ರಾರಂಭಿಕ ಹಂತದಲ್ಲಿಯೇ ತೊಡೆದು ಹಾಕಲು ಯೋಜನೆ ರೂಪಿಸುತ್ತಿದೆ.

16.8 ಕೋಟಿ ಬಾಲಕಾರ್ಮಿಕರು
ಯುನಿಸೆಫ್‌, ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ವಿಶ್ವಬ್ಯಾಂಕ್‌ ಹಂಚಿಕೊಂಡಿರುವ ಮಾಹಿತಿಯ ಆಧಾರದ ಮೇಲೆ ಪ್ರಸ್ತುತ ಜಾಗತಿಕವಾಗಿ 5ರಿಂದ 17 ವರ್ಷ ವಯಸ್ಸಿನ ಒಟ್ಟು 16.8 ಕೋಟಿಯಷ್ಟು ಬಾಲ ಕಾರ್ಮಿಕರಿದ್ದಾರೆ. ಇವರಲ್ಲಿ ಸುಮಾರು 7.2 ಕೋಟಿಯಷ್ಟು ಮಕ್ಕಳು ಅಪಾಯಕಾರಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ದೇಶದ ಪರಿಸ್ಥಿತಿ
ಬಿಹಾರದಲ್ಲಿ ಶೇ.45ರಷ್ಟು ಬಾಲ ಕಾರ್ಮಿಕರಿದ್ದರೆ, ರಾಜಸ್ಥಾನ ಮತ್ತು ಝಾರ್ಖಂಡ್‌ಗಳಲ್ಲಿ ಇದರ ಪ್ರಮಾಣ ಶೇ.40ರಷ್ಟಿದೆ. ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶಗಳಲ್ಲಿ ಶೇ.38ರಷ್ಟು ಬಾಲ ಕಾರ್ಮಿಕರಿದ್ದಾರೆ.

Advertisement

ಮಹತ್ವ ಮತ್ತು ಉದ್ದೇಶ
ಬಾಲ ಕಾರ್ಮಿಕ ಪದ್ಧತಿಯಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದು ಮತ್ತು ಅದನ್ನು ನಿರ್ಮೂಲನೆ ಮಾಡಲು ಅದರ ವಿರುದ್ಧ ಹೋರಾಡಲು ಮಾರ್ಗಗಳನ್ನು ಕಂಡುಕೊಳ್ಳುವುದೇ ಆಚರಣೆಯ ಮೂಲ ಉದ್ದೇಶ. ಮಕ್ಕಳನ್ನು ಬಲವಂತವಾಗಿ ದುಡಿಮೆ, ಮಾದಕವಸ್ತು ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಮುಂತಾದ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುವುದನ್ನು ತಡೆಗಟ್ಟುವತ್ತ ಕಾರ್ಯಾಚರಿಸುತ್ತಿದೆ. ಮಕ್ಕಳನ್ನು ಕಾರ್ಮಿಕರನ್ನಾಗಿ ದುಡಿಸುವುದು ಅಪರಾಧ. ಅವರಿಗೆ ಶಿಕ್ಷಣ ನೀಡಿದರೆ ಸಮಾಜ ಮತ್ತು ದೇಶ ಎರಡೂ ಉದ್ಧಾರವಾಗುವುದು.

ಜಾಗತಿಕ ಬಾಲ ಕಾರ್ಮಿಕ‌ರು
(2016ರ ಮಾಹಿತಿ ಪ್ರಕಾರ)
ಆಫ್ರಿಕಾ 7,21,000
ಏಶ್ಯಾ, ಪೆಸಿಫಿಕ್‌ 6,02,000
ಅಮೆರಿಕ 1,07,000
ಯುರೋಪ್‌,
ಮಧ್ಯ ಏಶ್ಯಾ 55,000
ಅರಬ್‌ ರಾಜ್ಯಗಳು 12,000

Advertisement

Udayavani is now on Telegram. Click here to join our channel and stay updated with the latest news.

Next