ಇಂದು ವಿಶ್ವ ಸೈಕಲ್ ದಿನವಂತೆ...ನನ್ನ ಮನದಲ್ಲಿ ಬಾಲ್ಯದ ನೆನಪುಗಳ ಸಂತೆ. ನನ್ನ ಇಷ್ಟದ ಹಲವು ಹವ್ಯಾಸಗಳಲ್ಲಿ ಸೈಕಲ್ ಸವಾರಿಯೂ ಒಂದು. ಬಾಲ್ಯದಲ್ಲಿ ನಮ್ಮೂರಿನ ಅಗ್ರಹಾರದ ಬೀದಿಗಳಲ್ಲಿ ಆರಂಭವಾಗಿ ಊರ ತುಂಬ ಸದ್ದಿಲ್ಲದೆ ಸಾಗುತ್ತಿತ್ತು. ಅಂದಿನ ದಿನಗಳಲ್ಲಿ ಇಂತಹ ಹುಡುಗಾಟಗಳಿಗೆ ಜೊತೆಯಾಗುತ್ತಿದ್ದವಳು ವಯಸ್ಸಿನಲ್ಲಿ ನನಗಿಂತ ನಾಲ್ಕು ವರುಷ ಹಿರಿಯಳಾದರೂ ಉದ್ದದಲ್ಲಿ ನನಗಿಂತ ಮೂರು ಇಂಚು ಗಿಡ್ಡ ಹಾಗು ತೆಳ್ಳಗೆ ಬೆಳ್ಳಗೆ ಇದ್ದು ನೋಡಲು ನನಗಿಂತ ಕಿರಿಯಳಂತೆ ಕಾಣುತ್ತಿದ್ದ ನನ್ನ ಗೆಳತಿ. ಅವಳ ಅಣ್ಣನಿಂದಲೇ ಸೈಕಲ್ ಸವಾರಿ ಕಲಿತ ನನಗೋ ಸುಲಭದಲ್ಲಿ ಕಾಲಿಗೆ ಸಿಗುವ ಪೆಡಲ್ ಅವಳನ್ನು ಮಾತ್ರ ಆಟವಾಡಿಸುತ್ತಿತ್ತು. ಆದರೂ ಹಟ ಹಿಡಿದು ಸೈಕಲ್ ಕಲಿತ ಅವಳೊಂದಿಗೆ ಅಲ್ಲೇ ಪೇಟೆಯಲ್ಲಿ ಗಂಟೆಗೆ ಇಪ್ಪತ್ತೈದು ಪೈಸೆಗೆ ಬಾಡಿಗೆಗೆ ಸಿಗುತ್ತಿದ್ದ ದೊಡ್ಡ ಸೈಕಲ್ ನ್ನು ಹಿಡಿದುಕೊಂಡ ಕತ್ತರಿಕಾಲು ಸೈಕಲ್ ಸವಾರಿ ಮಾಡುತ್ತಾ ಊರಿಡೀ ಸುತ್ತುತ್ತಿದ್ದೆವು .ಮತ್ತೆ ಕೆಲವು ದಿನಗಳ ಬಳಿಕ ಅಲ್ಲಿ ಅಂಗಡಿಗೆ ಬಂದ ಕಡಿಮೆ ಎತ್ತರದ ( ಲೇಡಿಸ್ ಸೈಕಲ್ ಅಲ್ಲ)ಸೈಕಲ್ ಗಳನ್ನು ಎಲ್ಲರಿಗಿಂತ ಮುಂಚೆಯೇ ಅಂಗಡಿ ಮಾಲೀಕರ ಬಳಿ ಕಾಯ್ದಿರಿಸಿ, ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಎಲ್ಲರೂ ಮಲಗಿದ ವೇಳೆಯಲ್ಲಿ ನಮ್ಮ ಸವಾರಿ ಹೊರಡುತ್ತಿತ್ತು.
ಒಂದು ದಿನ ನಮ್ಮ ಮನೆ ಪಕ್ಕದ ಸ್ವಲ್ಪ ಏರಿಕೆ ಇದ್ದ ಆ ಕಾಲು ದಾರಿಯಲ್ಲಿ ಆಗಷ್ಟೇ ಊಟ ಮುಗಿಸಿ ನಡೆಯುತ್ತ ಬರುತ್ತಿದ್ದ ಹಿರಿಯರೊಬ್ಬರು ನಮ್ಮ ಸೈಕಲ್ ಕಸರತ್ತಿಗೆ ಎದುರಾದರು..ಅವರಿಗೆ ಎದುರು ಬದುರಾಗಿ ನಾವಿಬ್ಬರೂ ಹೋಗುವ ದಾರಿ ತುಂಬಾ ಇಳಿಜಾರಾಗಿದ್ದರಿಂದ ನಮ್ಮ ಸೈಕಲ್ ಹತೋಟಿ ತಪ್ಪಿ ಅವರಿಗೆದುರಾಗಿ ಇನ್ನೇನು ಅವರಿಗೆ ಢಿಕ್ಕಿ ಹೊಡೆಯವುದೋ ಎಂಬಷ್ಟು ಹತ್ತಿರಕ್ಕೇ ಸಾಗುತ್ತಿತ್ತು. ಅದ್ಯಾಕೋ ಎಷ್ಟು ಬ್ಯಾಲೆನ್ಸ್ ಮಾಡಿದರೂ ಅವರು ಆಚೆ ಹೋದರೆ ನಮ್ಮ ಸೈಕಲ್ ಕೂಡಾ ಅವರು ಹೋದ ಕಡೆಯೇ ನಮಗೇ ಅರಿವಿಲ್ಲದೆ ಸಾಗಿದರೆ ಒಂದೆಡೆ ನಮಗೆ ಢವ ಢವ…ಮತ್ತೊಂದೆಡೆ ತಡೆಯಲಾರದ ನಗು. ಅಂತೂ ಅವರ ಸಹಸ್ರನಾಮಾರ್ಚನೆಯೊಂದಿಗೆ ಎಲ್ಲಿ ಬ್ಯಾಲೆನ್ಸ್ ತಪ್ಪಿ ನಾವು ಬೀಳುತ್ತೇವೋ ಎಂಬ ಹೆದರಿಕೆಯಿಂದ ಉಸಿರು ಬಿಗಿಹಿಡಿದು ನಮ್ಮ ಸೈಕಲ್ ನ್ನು ಹತೋಟಿಗೆ ತಂದು ನೇರ ದಾರಿ ಬಿಟ್ಟು ಪಕ್ಕದ ಗದ್ದೆಗೆ ಇಳಿಸಿ ಒಮ್ಮೆ ನಿಟ್ಟುಸಿರು ಬಿಟ್ಟಾಗಲೇ ನಮ್ಮ ಎದೆ ಬಡಿತ ಸಮಸ್ಥಿತಿಗೆ ಬಂದದ್ದು .ಇವತ್ತಿಗೂ ಆ ಇಳಿಜಾರಿನ ರಸ್ತೆ ನೋಡುವಾಗೆಲ್ಲಾ ಅಂದಿನ ದಿನ ನೆನಪಾಗಿ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಮತ್ತೊಂದು ಅಪರಾಹ್ನದ ಹೊತ್ತು ಒಟ್ಟಿಗೆ ಪಟ್ಟಾಂಗ ಹಾಕುತ್ತಾ ಸವಾರಿ ಮಾಡುತ್ತಿದ್ದಾಗ ನನ್ನ ಗೆಳತಿ ಆಯ ತಪ್ಪಿ ರಸ್ತೆಯಲ್ಲಿ ಬಿದ್ದಾವಾಗಲೇ ಯಮರಾಯನಂತ ದೊಡ್ಡ ಲಾರಿ ಎದುರಿಗೆ ಬಂದಾಗ ನಮ್ಮಿಬ್ಬರ ಕಥೆ ಮುಗಿದೇ ಹೋಯಿತೆಂದು ಹೆದರಿದ ನಾವು ಮತ್ತೊಂದು ವಾರ ಸೈಕಲ್ ಮುಟ್ಟಿರಲಿಲ್ಲ.ಆದರೆ ಸ್ಮಶಾನ ವೈರಾಗ್ಯವೆಂಬ ಮಾತಿನಂತೆ ಮತ್ತೆ ಯಥಾ ಪ್ರಕಾರ ನಮ್ಮ ಐರಾವತದ ಸವಾರಿ ಊರ ತುಂಬಾ.
ಬಾಲ್ಯದಲ್ಲಿ ಸೈಕಲ್ ಸವಾರಿ ಒಂಥರಾ ಮೋಜು ತಂದರೆ ತಾರುಣ್ಯದ ದಿನಗಳಲ್ಲಿ ಸೈಕಲ್ ಸವಾರರ ಮೇಲೆ ಒಂಥರಾ ಆಕರ್ಷಣೆ. ಆಗಿನ ದಿನಗಳಲ್ಲಿ ನಮ್ಮ ಕನಸಿನ ರಾಜಕುಮಾರ ಸೈಕಲ್ ಏರಿಬರುವ,ಸೈಕಲ್ ನಲ್ಲೇ ಹದಿ ಹರೆಯದ ಹುಡುಗಿಯರ ಹಿಂದೆ ಮುಂದೆ ಸುಳಿದಾಡುವ,ಅಲ್ಲದೆ ಏರು ಜವ್ವನೆಯರನ್ನು ತಮ್ಮ ಸೈಕಲ್ ನ ಮುಂದಿನ ಕ್ಯಾರಿಯರ್ ನಲ್ಲಿ ಕುಳ್ಳಿರಿಸಿ ಹಳೆಯ ಚಲನ ಚಿತ್ರ ಗೀತೆಗಳಲ್ಲಿ ಬರುವ ಹೀರೋ ಹೀರೋಯಿನ್ ರಂತೆ ಊರಿಡೀ ಸುತ್ತಿಸಿ ಮೆರೆದಾಡುವ ಕಲ್ಪನೆಗಳು ಗರಿಗೆದರುವ ,ಆ ಕನಸುಗಳಲಿ ಮೈಮರೆಯುವ ಮಧುರ ನೆನಪುಗಳ ದಿಬ್ಬಣ ಮನದ ತುಂಬಾ..
ಆಗೆಲ್ಲ ಬಾಲ್ಯದಲ್ಲಿ ಸಮ ವಯಸ್ಕ,ಹುಡುಗರಂತೆ ನಾವೂ ಸೈಕಲ್ ಬಿಟ್ಟು ಏನೋ ಸಾಧಿಸಿದೆವೆಂಬ ತುಡಿತಕ್ಕೆ ದೊಡ್ಡ ಸಾಹಸ ಮಾಡಿದಂತಹ ಹಮ್ಮುಬಿಮ್ಮು ಜೊತೆಯಾದರೆ ತಾರುಣ್ಯದ ದಿನಗಳಲ್ಲಿ ಮನಕದ್ದ ಸೈಕಲ್ ಸವಾರ ರಾಜಕುಮಾರರ ಕನವರಿಕೆಯಲ್ಲಿ ಸೈಕಲ್ ಬಲು ಆಪ್ತವಾಗಿತ್ತು. ಈಗ ನಡುಹರೆಯದಲ್ಲೂ ನಮ್ಮ ದೇಹದ ಕೊಬ್ಬು ಕರಗಿಸಲು,ಪರಿಸರ ಸಂರಕ್ಷಣೆಗೆ ನಾಂದಿ ಹಾಡಲು ಇದು ಅನಿವಾರ್ಯವೆಂದೆನಿಸುತಲಿದೆ.ವಾಕಿಂಗ್, ಜಾಗಿಂಗ್,ವ್ಯಾಯಾಮ,ಯೋಗ ಎಲ್ಲಕ್ಕಿಂತಲೂ ನನಗೆ ಈ ಸೈಕಲ್ ಸವಾರಿಯೇ ಹೆಚ್ಚು ಇಷ್ಟ. ಹಾಗಾಗಿ ಕಳೆದ ಹತ್ತುವರುಷಗಳಲ್ಲಿ ಸುಮಾರು ಮೂರು ಸೈಕಲ್ ಖರೀದಿಸಿ ತಿಂಗಳುಗಟ್ಟಲೆ ಅದನ್ನು ಉಪಯೋಗಿಸದೆ ಬದಿಗಿಟ್ಟು ಆವಾಗಾವಾಗ ರಿಪೇರಿಮಾಡಿಸ್ತಾ ಮನೆಮಂದಿಯಿಂದ ಬೈಸಿ ಕೊಂಡರೂ ಬೈಸಿಕಲ್ ಮೇಲಿನ ವ್ಯಾಮೋಹ ಒಂದಿನಿತೂ ಬತ್ತಲಿಲ್ಲ. ನನ್ನಿಬ್ಬರು ಹೆಣ್ಣುಮಕ್ಕಳೂ ಸೈಕಲ್ ಪ್ರಿಯರಾಗಿದ್ದು ನನಗೊಂದು ಪ್ಲಸ್ ಪಾಯಿಂಟ್.. ಈ ವರುಷದ ಹುಟ್ಟಿದ ದಿನವನ್ನು ನೆವನ ಮಾಡಿಕೊಂಡು ಗೋಳು ಹೊಯ್ದಾದರೂ ಹೊಸ ಮಾಡೆಲ್ ಸೈಕಲ್ ತರಸಿಕೊಳ್ಳಬೇಕು.ಮತ್ತೆ ನಮ್ಮ ತಾರುಣ್ಯದ ದಿನಗಳಲ್ಲಿ ಎಲ್ಲೆಂದರಲ್ಲಿ ಸೈಕಲ್ ಏರಿ ಬಂದು ಆಗಿನ ಹದಿ ಹರೆಯದ ಹುಡುಗಿಯರ ಮನಗೆದ್ದ.,ಹೃದಯ ಕದ್ದ ಇದೀಗ ಸೈಕಲ್ ತುಳಿಯಲೇ ಪ್ರಯಾಸ ಪಡುತ್ತಿರುವ ನಡು ಹರೆಯದ ಎಲ್ಲ ಸೈಕಲ್ ಸವಾರರಿಗೆ ಹಾಗು ಇಂದು ಹಲವಾರು ಕಾರಣಗಳಿಂದ ಸೈಕಲ್ ನ್ನು ಜೀವನದಲ್ಲಿ ಜೊತೆಯಾಗಿಸಿಕೊಂಡ ಎಲ್ಲ ಸೈಕಲ್ ಪ್ರೇಮಿಗಳಿಗೆ ವಿಶ್ವ ಸೈಕಲ್ ದಿನದ ಶುಭಾಶಯಗಳು.
ಪೂರ್ಣಿಮಾ ಜನಾರ್ದನ್ ಕೊಡವೂರು