ಹೊಸದಿಲ್ಲಿ: ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಶೂಟಿಂಗ್‌ನಲ್ಲಿ ಮನು ಭಾಕರ್ ಅವರನ್ನು ಹಿಂದಿಕ್ಕಿದ ಯಶಸ್ವಿನಿ ಸಿಂಗ್ ದೇಸ್ವಾಲ್ ಚಿನ್ನದ ಪದಕಕ್ಕೆ ಗುರಿ ಇರಿಸಿದರು. ಮನು ಬೆಳ್ಳಿಗೆ ತೃಪ್ತಿಪಟ್ಟರು.
ವನಿತೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಎಲ್ಲರ ಗುರಿಯೂ ಮನು ಭಾಕರ್ ಮೇಲಿತ್ತು. ಆದರೆ ಯಶಸ್ವಿನಿ ದೊಡ್ಡದೊಂದು ಯಶಸ್ಸು ಸಾಧಿಸಿದರು. ಅವರು 238.8 ಅಂಕ ಸಂಪಾದಿಸಿದರೆ, ಮನು 236.7 ಅಂಕ ಗಳಿಸಿದರು. ಕಂಚು ಬೆಲರೂಸ್‌ನ ವಿಕ್ಟೋರಿಯಾ ಚೈಕಾ ಪಾಲಾಯಿತು (215.9).
ಖಾತೆ ತೆರೆದ ದಿವ್ಯಾಂಶ್ :
ಇದಕ್ಕೂ ಮೊದಲು ದಿವ್ಯಾಂಶ್ ಸಿಂಗ್ ಪನ್ವಾರ್ ಮೂಲಕ ಭಾರತದ ಪದಕದ ಖಾತೆ ತೆರೆದಿತ್ತು. ಕೂಟದ ದ್ವಿತೀಯ ದಿನವಾದ ಶನಿವಾರ, ವಿಶ್ವದ ನಂ.1 ಶೂಟರ್, 18 ವರ್ಷದ ದಿವ್ಯಾಂಶ್ 10 ಮೀ. ಏರ್ ರೈಫಲ್ ವಿಭಾಗದಲ್ಲಿ 228.1 ಅಂಕಗಳೊಂದಿಗೆ ತೃತೀಯ ಸ್ಥಾನಿಯಾದರು.
“ಡಾ| ಕರ್ಣಿ ಸಿಂಗ್ ಸ್ಟೇಡಿಯಂ’ನಲ್ಲಿ ನಡೆದ ಸ್ಪರ್ಧೆಯಲ್ಲಿ ಅಮೆರಿಕದ ಲುಕಾಸ್ ಕೊಝೆನೀಸ್ಕಿ ಚಿನ್ನ (249.8) ಮತ್ತು ಹಂಗೇರಿಯ ಇಸ್ತವಾನ್ ಪೆನಿ ಬೆಳ್ಳಿ ಗೆದ್ದರು (249.7). ಭಾರತದ ಮತ್ತೋರ್ವ ಸ್ಪರ್ಧಿ ಅರ್ಜುನ್ ಬಬುಟ 5ನೇ ಸ್ಥಾನಕ್ಕೆ ಕುಸಿದರು.
ಲಾಕ್‌ಡೌನ್ ವೇಳೆ ಹೇಗೆ ಶೂಟಿಂಗ್ ಮಾಡಬೇಕೆಂಬುದೇ ನನಗೆ ಮರೆತು ಹೋಗಿತ್ತು ಎಂಬುದಾಗಿ ದಿವ್ಯಾಂಶ್ ಪ್ರತಿಕ್ರಿಯಿಸಿದ್ದಾರೆ.