ದೋಹಾ: ಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂ’ನಲ್ಲಿ ನಡೆದ ಸೋಮವಾರದ ವಿಶ್ವಕಪ್ ಫುಟ್‌ಬಾಲ್ ಮುಖಾಮುಖಿಯಲ್ಲಿ ದೈತ್ಯ ಇಂಗ್ಲೆಂಡ್ ತಂಡ ಇರಾನ್ ಮೇಲೆ ಸವಾರಿ ಮಾಡಿದೆ. 6-2 ಗೋಲುಗಳ ಅಧಿಕಾರಯುತ ಜಯ ದಾಖಲಿಸಿದೆ.
ಬುಕಾಯೊ ಸಕಾ (43ನೇ ಮತ್ತು 62ನೇ ನಿಮಿಷ) ಅವಳಿ ಗೋಲು ಬಾರಿಸಿ ಮಿಂಚಿದರು. ಇಂಗ್ಲೆಂಡ್ ಗೋಲು ಖಾತೆ ತೆರೆಯುವಾಗ 35 ನಿಮಿಷ ಉರುಳಿತ್ತು.
ಆರಂಭಿಕ ಗೋಲ್ ಜೂಡ್ ಬೆಲ್ಲಿಂಗ್‌ಹ್ಯಾಮ್ ಅವರಿಂದ ಸಿಡಿ ಯಲ್ಪಟ್ಟಿತು. ರಹೀಂ ಸ್ಟರ್ಲಿಂಗ್ (45 ಪ್ಲಸ್ ಒಂದನೇ ನಿಮಿಷ), ಬದಲಿ ಆಟಗಾರರಾದ ಮಾರ್ಕಸ್ ರಶ್‌ಫೋರ್ಡ್ (71ನೇ ನಿಮಿಷ) ಮತ್ತು ಜಾಕ್ ಗ್ರೀಲಿಶ್ (89ನೇ ನಿಮಿಷ) ಒಂದೊಂದು ಗೋಲು ಹೊಡೆದರು. ಇವರಲ್ಲಿ ರಶ್‌ಫೋರ್ಡ್, ಸಕಾ ಬದಲು ಕಣಕ್ಕಿಳಿದಿದ್ದರು.
ಇರಾನ್ ಒಂದು ಹಂತದಲ್ಲಿ 0-4 ಹಿನ್ನಡೆಯಲ್ಲಿತ್ತು. ಪಂದ್ಯದ 65ನೇ ನಿಮಿಷದಲ್ಲಿ ಮೆಹೆದಿ ತರೆಮಿ ಇರಾನ್‌ನ ಗೋಲು ಖಾತೆ ತೆರೆದರು. ದ್ವಿತೀಯ ಗೋಲು ಕೂಡ ತರೆಮಿ ಅವರಿಂದಲೇ ಪಂದ್ಯದ ಕೊನೆಯ ಕ್ಷಣದಲ್ಲಿ ದಾಖಲಾಯಿತು.
ಇಂಗ್ಲೆಂಡ್ ವಿಶ್ವಕಪ್ ಪಂದ್ಯವೊಂದ ರಲ್ಲಿ ಐದಕ್ಕೂ ಹೆಚ್ಚು ಗೋಲು ಬಾರಿಸಿದ ಕೇವಲ ದ್ವಿತೀಯ ನಿದರ್ಶನ ಇದಾಗಿದೆ. 2018ರ ವಿಶ್ವಕಪ್‌ನಲ್ಲಿ ಪನಾಮಾವನ್ನು 6-1 ಗೋಲುಗಳಿಂದ ಮಣಿಸಿತ್ತು.