Advertisement

World Cup: ಅತ್ಯಧಿಕ 11 ತಂಡಗಳ ವಿರುದ್ಧ ಸೋತ ಇಂಗ್ಲೆಂಡ್‌!

12:06 AM Oct 17, 2023 | Team Udayavani |

ಹೊಸದಿಲ್ಲಿ: ಅಫ್ಘಾನಿಸ್ಥಾನ ವಿರುದ್ಧ ಹೀನಾಯವಾಗಿ ಸೋಲುವ ಮೂಲಕ ಕ್ರಿಕೆಟ್‌-ವಿಶ್ವಕಪ್‌ ಜನಕರೆಂಬ ಖ್ಯಾತಿಯ ಇಂಗ್ಲೆಂಡ್‌ ಭಾರೀ ಅವ ಮಾನವೊಂದಕ್ಕೆ ತುತ್ತಾಗಿದೆ. ಅದು ವಿಶ್ವಕಪ್‌ ಇತಿಹಾಸದಲ್ಲಿ ಅತ್ಯಧಿಕ 11 ತಂಡಗಳ ವಿರುದ್ಧ ಸೋಲನುಭವಿಸಿದ ತಂಡವೆನಿಸಿದೆ. ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್‌ ಕೂಡ ಈ ಅವಮಾನಕ್ಕೆ ಸಿಲುಕಿದರೂ ಇವೆರಡೂ ಬಲಿಷ್ಠ ತಂಡಗಳೇನಲ್ಲ.

Advertisement

ವಿಶ್ವಕಪ್‌ ಆರಂಭಗೊಂಡ 44 ವರ್ಷಗಳ ಬಳಿಕ ಚಾಂಪಿಯನ್‌ ಆಗಿ ಮೂಡಿಬಂದ ಇಂಗ್ಲೆಂಡ್‌ 1975ರ ಚೊಚ್ಚಲ ಕೂಟದಲ್ಲೇ ಸೋಲಿನ ಮುಖ ಕಾಣಲಾರಂಭಿಸಿತ್ತು. ಅಂದು ಆಸ್ಟ್ರೇಲಿಯಕ್ಕೆ ಶರಣಾಗಿತ್ತು. 1979ರಲ್ಲಿ ವೆಸ್ಟ್‌ ಇಂಡೀಸ್‌ ಎದುರಿನ ಫೈನಲ್‌ನಲ್ಲಿ ಮುಗ್ಗರಿಸಿತು.

1983ರಲ್ಲಿ ಭಾರತದ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲು ಕಂಡಿತು. ಇದೇ ಕೂಟದಲ್ಲಿ ನ್ಯೂಜಿಲ್ಯಾಂಡ್‌ ಕೂಡ ಇಂಗ್ಲೆಂಡ್‌ಗೆ ಆಘಾತವಿಕ್ಕಿತ್ತು. 1987ರಲ್ಲಿ ಪಾಕಿಸ್ಥಾನಕ್ಕೆ ಶರಣಾಯಿತು. 1992ರಲ್ಲಿ ಎದುರಾದದ್ದು ಅನಿರೀಕ್ಷಿತ ಆಘಾತ. ಅಂದು ಕ್ರಿಕೆಟ್‌ ಶಿಶು ಜಿಂಬಾಬ್ವೆ ಕೈಯಲ್ಲಿ ಮುಖಭಂಗ ಅನುಭವಿಸಿತು.

1996ರಲ್ಲಿ ಇಂಗ್ಲೆಂಡ್‌ ಮೊದಲ ಸಲ ಶ್ರೀಲಂಕಾ ಕೈಯಲ್ಲಿ ಸೋಲುಂಡಿತು. ಇದೇ ಕೂಟದಲ್ಲಿ ದಕ್ಷಿಣ ಆಫ್ರಿಕಾ ಕೂಡ ಆಂಗ್ಲರ ಮೇಲೆ ಸವಾರಿ ಮಾಡಿತು.2011ರಲ್ಲೂ ಇಂಗ್ಲೆಂಡ್‌ಗೆ ನಸೀಬು ಕೆಟ್ಟಿತ್ತು. ಅದು ಬಾಂಗ್ಲಾದೇಶ ಮತ್ತು ಐರ್ಲೆಂಡ್‌ ಕೈಯಲ್ಲಿ ಸೋಲಿನೇಟು ತಿಂದಿತು. ಇದೀಗ ಅಫ್ಘಾನಿಸ್ಥಾನ ತಂಡದ ಸರದಿ. ಹೀಗೆ ಕೂಟದ ಸಾಮಾನ್ಯ ತಂಡಗಳೆದುರು ಸೋಲುವುದು ಇಂಗ್ಲೆಂಡ್‌ಗೆ ಹೊಸತೇನೂ ಅಲ್ಲ!

Advertisement

Udayavani is now on Telegram. Click here to join our channel and stay updated with the latest news.

Next