Advertisement
ಹೈದರಾಬಾದ್‌ನ ಬ್ಯಾಟಿಂಗ್ ಸ್ನೇಹಿ ಟ್ರ್ಯಾಕ್‌ನಲ್ಲಿ ಸಾಗಿದ ಈ ಮುಖಾಮುಖೀಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 9 ವಿಕೆಟಿಗೆ 344 ರನ್ ಪೇರಿಸಿದರೆ, ಪಾಕಿಸ್ಥಾನ ದಿಟ್ಟ ರೀತಿಯಲ್ಲಿ ಚೇಸಿಂಗ್ ನಡೆಸಿ 48.2 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 348 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
Related Articles
ಶ್ರೀಲಂಕಾ ಇನ್ನಿಂಗ್ಸ್ ಜೋಡಿ ಶತಕದೊಂದಿಗೆ ರಂಗೇರಿಸಿಕೊಂಡಿತು. ಸತತ 2 ಪಂದ್ಯಗಳಲ್ಲೂ ಮುನ್ನೂರರ ಗಡಿ ದಾಟಿತು. ಕುಸಲ್ ಮೆಂಡಿಸ್ 122 ಮತ್ತು ಸದೀರ ಸಮರವಿಕ್ರಮ 108 ರನ್ ಬಾರಿಸಿ ಲಂಕೆಯ ಬೃಹತ್ ಮೊತ್ತಕ್ಕೆ ಕಾರಣರಾದರು. 344 ರನ್ ಎನ್ನುವುದು ವಿಶ್ವಕಪ್‌ನಲ್ಲಿ ಪೂರ್ಣ ಪ್ರಮಾಣ ಸದಸ್ಯ ರಾಷ್ಟ್ರದ ವಿರುದ್ಧ ಲಂಕಾ ಪೇರಿಸಿದ ಅತ್ಯಧಿಕ ಗಳಿಕೆ ಆಗಿದೆ.
Advertisement
ಇವರಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಕುಸಲ್ ಮೆಂಡಿಸ್ ಆಟ ಆತ್ಯಂತ ಆಕ್ರಮಣಕಾರಿಯಾಗಿತ್ತು. ವನ್‌ಡೌನ್ ಬ್ಯಾಟರ್ ಕೇವಲ 77 ಎಸೆತಗಳಿಂದ 122 ರನ್ ಚಚ್ಚಿದರು. ಸಿಡಿಸಿದ್ದು 14 ಬೌಂಡರಿ ಮತ್ತು 6 ಸಿಕ್ಸರ್. ಈ ಆರ್ಭಟದ ವೇಳೆ ಅಫ್ರಿದಿಗೆ ಸತತ 4 ಬೌಂಡರಿಗಳ ರುಚಿ ತೋರಿಸಿದರು. ಇದು ವಿಶ್ವಕಪ್‌ನಲ್ಲಿ ಶ್ರೀಲಂಕಾ ಆಟಗಾರನಿಂದ ದಾಖಲಾದ ಅತೀ ವೇಗದ ಶತಕ. ಇದು ಮೆಂಡಿಸ್ ಅವರ 3ನೇ ಸೆಂಚುರಿ. ವಿಶ್ವಕಪ್‌ನಲ್ಲಿ ಮೊದಲನೆಯದು. ಜತೆಗೆ ಜೀವನಶ್ರೇಷ್ಠ ಬ್ಯಾಟಿಂಗ್ ಕೂಡ ಆಗಿದೆ.
ಪ್ರಚಂಡ ಫಾರ್ಮ್ನಲ್ಲಿರುವ ಮೆಂಡಿಸ್ 2 ಶತಕಗಳ ಜತೆಯಾಟದಲ್ಲಿ ಪಾಲ್ಗೊಂಡರು. ಪಥುಮ್ ನಿಸ್ಸಂಕ ಜತೆ ದ್ವಿತೀಯ ವಿಕೆಟಿಗೆ 102 ರನ್ ಹಾಗೂ ಸಮರವಿಕ್ರಮ ಅವರೊಂದಿಗೆ 3ನೇ ವಿಕೆಟಿಗೆ 111 ರನ್ ಪೇರಿಸಿದರು. ಮೆಂಡಿಸ್ ಈ ವರ್ಷದ ಏಕದಿನದಲ್ಲಿ ಲಂಕಾ ಪರ ಸರ್ವಾಧಿಕ ರನ್ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಇನ್ನೊಂದೆಡೆ ಸದೀರ ಸಮರವಿಕ್ರಮ 89 ಎಸೆತಗಳಿಂದ 108 ರನ್ ಬಾರಿಸಿ ಚೊಚ್ಚಲ ಶತಕ ಸಂಭ್ರಮ ಆಚರಿಸಿದರು. ಇವರ ಬ್ಯಾಟಿಂಗ್ ಅಬ್ಬರದ ವೇಳೆ 11 ಬೌಂಡರಿ, 2 ಸಿಕ್ಸರ್ ಸಿಡಿಯಿತು. ಮೆಂಡಿಸ್-ಸಮರವಿಕ್ರಮ ಸಾಹಸದಿಂದ ಲಂಕಾ 28ನೇ ಓವರ್‌ನಲ್ಲೇ 200 ರನ್ ಗಡಿ ದಾಟಿ ಮುನ್ನುಗ್ಗಿತು.
ಕುಸಲ್ ಪೆರೆರ (0) ಅವರನ್ನು ದ್ವಿತೀಯ ಓವರ್‌ನಲ್ಲೇ ಕೆಡವಿದರೂ ಪಾಕಿಸ್ಥಾನಕ್ಕೆ ಈ ಮೇಲುಗೈ ಉಳಿಸಿಕೊಳ್ಳಲಾಗಲಿಲ್ಲ. ಮತ್ತೋರ್ವ ಆರಂಭಕಾರ ಪಥುಮ್ ನಿಸ್ಸಂಕ ಮತ್ತು ಮೆಂಡಿಸ್ ಸೇರಿಕೊಂಡು ಲಂಕಾ ಸರದಿಯನ್ನು ಬೆಳೆಸಿದರು. ನಿಸ್ಸಂಕ 61 ಎಸೆತಗಳಿಂದ 51 ರನ್ ಹೊಡೆದರು (7 ಬೌಂಡರಿ, 1 ಸಿಕ್ಸರ್). 4 ವಿಕೆಟ್ ಕಿತ್ತ ಮಧ್ಯಮ ವೇಗಿ ಹಸನ್ ಅಲಿ ಪಾಕಿಸ್ಥಾನದ ಯಶಸ್ವಿ ಬೌಲರ್.