Advertisement

World Cup ಕ್ರಿಕೆಟ್‌ ಅರ್ಹತಾ ಪಂದ್ಯಾವಳಿ: ಶ್ರೀಲಂಕಾ, ಸ್ಕಾಟ್ಲೆಂಡ್‌ ಅಜೇಯ ಓಟ

10:39 PM Jun 25, 2023 | Team Udayavani |

ಬುಲವಾಯೊ: ವಿಶ್ವಕಪ್‌ ಕ್ರಿಕೆಟ್‌ ಅರ್ಹತಾ ಪಂದ್ಯಾವಳಿಯ “ಬಿ” ವಿಭಾಗದ ಸ್ಪರ್ಧೆಯಲ್ಲಿ ಶ್ರೀಲಂಕಾ ಮತ್ತು ಸ್ಕಾಟ್ಲೆಂಡ್‌ ಅಜೇಯ ಓಟ ಬೆಳೆಸಿವೆ. ರವಿವಾರದ ಪಂದ್ಯದಲ್ಲಿ ಎರಡೂ ತಂಡಗಳು ಗೆದ್ದು ಹ್ಯಾಟ್ರಿಕ್‌ ಗೌರವಕ್ಕೆ ಪಾತ್ರವಾದವು.

Advertisement

ಶ್ರೀಲಂಕಾ 133 ರನ್ನುಗಳ ಭಾರೀ ಅಂತರದಿಂದ ಐರ್ಲೆಂಡ್‌ ತಂಡವನ್ನು ಕೆಡವಿತು. ಲಂಕಾ 49.5 ಓವರ್‌ಗಳಲ್ಲಿ 325 ರನ್‌ ಪೇರಿಸಿದರೆ, ಐರ್ಲೆಂಡ್‌ 31 ಓವರ್‌ಗಳಲ್ಲಿ 192ಕ್ಕೆ ಕುಸಿಯಿತು. ಇದರೊಂದಿಗೆ ಐರ್ಲೆಂಡ್‌ ಆಡಿದ ಮೂರೂ ಪಂದ್ಯಗಳಲ್ಲಿ ಸೋತು ಕೂಟದಿಂದ ನಿರ್ಗಮಿಸಿತು.

ಕರುಣಾರತ್ನೆ ಮೊದಲ ಶತಕ
ಆರಂಭಕಾರ ದಿಮುತ್‌ ಕರುಣಾರತ್ನೆ ಅವರ ಶತಕ ಶ್ರೀಲಂಕಾ ಸರದಿಯ ಆಕರ್ಷಣೆ ಆಗಿತ್ತು. 38ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಅವರು ಎಸೆತಕ್ಕೊಂದರಂತೆ 103 ರನ್‌ ಮಾಡಿದರು. ಹೊಡೆದದ್ದು 8 ಬೌಂಡರಿ. ಇದು ಕರುಣಾರತ್ನೆ ಅವರ 40ನೇ ಏಕದಿನ ಪಂದ್ಯ ಹಾಗೂ ಚೊಚ್ಚಲ ಶತಕ. 97 ರನ್‌ ಅವರ ಈವರೆಗಿನ ಗರಿಷ್ಠ ಗಳಿಕೆ ಆಗಿತ್ತು. ಟೆಸ್ಟ್‌
ನಲ್ಲಿ 16 ಶತಕ ಹೊಡೆದರೂ ಏಕದಿನದಲ್ಲಿ ಅವರು ಇಲ್ಲಿಯ ತನಕ ಸೆಂಚುರಿ ಬಾರಿಸಿರಲಿಲ್ಲ.

82 ರನ್‌ ಮಾಡಿದ ಸದೀರ ಸಮರವಿಕ್ರಮ ಲಂಕಾ ತಂಡದ ಮತ್ತೋರ್ವ ಬ್ಯಾಟಿಂಗ್‌ ವೀರ. 86 ಎಸೆತ ನಿಭಾಯಿಸಿದ ಸಮರವಿಕ್ರಮ 4 ಬೌಂಡರಿ ಹೊಡೆದರು. ಚರಿತ ಅಸಲಂಕ 38, ಧನಂಜಯ ಡಿ ಸಿಲ್ವ ಅಜೇಯ 42 ರನ್‌ ಮಾಡಿ ಲಂಕಾ ಮೊತ್ತವನ್ನು ಮುನ್ನೂರರಾಚೆ ವಿಸ್ತರಿಸಿದರು. ಕುಸಲ್‌ ಮೆಂಡಿಸ್‌ (0), ನಾಯಕ ದಸುನ್‌ ಶಣಕ (5) ಕ್ಲಿಕ್‌ ಆಗಲಿಲ್ಲ. ಐರ್ಲೆಂಡ್‌ ಪರ ಮಾರ್ಕ್‌ ಅಡೈರ್‌ 4, ಬ್ಯಾರ್ರಿ ಮೆಕಾರ್ಥಿ 3 ಮತ್ತು ಗ್ಯಾರೆತ್‌ ಡೆಲಾನಿ 2 ವಿಕೆಟ್‌ ಕೆಡವಿದರು.

ಮತ್ತೆ ಹಸರಂಗ ಮ್ಯಾಜಿಕ್‌
ಸ್ಪಿನ್ನರ್‌ ಹಸರಂಗ ಮತ್ತೂಮ್ಮೆ ಮ್ಯಾಜಿಕ್‌ ಮಾಡಿ ಲಂಕೆಯ ಬೌಲಿಂಗ್‌ ಹೀರೋ ಎನಿಸಿದರು. ಮೊದಲೆರಡು ಪಂದ್ಯಗಳಿಂದ 11 ವಿಕೆಟ್‌ (6 ಪ್ಲಸ್‌ 5) ಕೆಡವಿದ್ದ ಹಸರಂಗ, ಇಲ್ಲಿ 79 ರನ್‌ ನೀಡಿ ಐವರನ್ನು ಪೆವಿಲಿಯನ್‌ಗೆ ಅಟ್ಟಿದರು. ಇದರೊಂದಿಗೆ ಸತತ 3 ಪಂದ್ಯಗಳಲ್ಲಿ 5 ಪ್ಲಸ್‌ ವಿಕೆಟ್‌ ಕೆಡವಿದ ವಿಶ್ವದ ಕೇವಲ 2ನೇ ಬೌಲರ್‌ ಎನಿಸಿದರು. ಪಾಕಿಸ್ಥಾನದ

Advertisement

ವಕಾರ್‌ ಯೂನಿಸ್‌ ಮೊದಲಿಗ.
ಐರ್ಲೆಂಡ್‌ ಸರದಿಯಲ್ಲಿ 39 ರನ್‌ ಮಾಡಿದ ಕರ್ಟಿಸ್‌ ಕ್ಯಾಂಫ‌ರ್‌ ಅವರದೇ ಹೆಚ್ಚಿನ ಗಳಿಕೆ. ಹ್ಯಾರಿ ಟೆಕ್ಟರ್‌ 33 ರನ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-49.5 ಓವರ್‌ಗಳಲ್ಲಿ 325 (ಕರಿಣಾರತ್ನೆ 103, ಸಮರವಿಕ್ರಮ 82, ಧನಂಜಯ ಡಿ ಸಿಲ್ವ ಔಟಾಗದೆ 42, ಅಸಲಂಕ 38, ಮಾರ್ಕ್‌ ಆಡೈರ್‌ 46ಕ್ಕೆ 4, ಬ್ಯಾರ್ರಿ ಮೆಕಾರ್ಥಿ 56ಕ್ಕೆ 3). ಐರ್ಲೆಂಡ್‌-31 ಓವರ್‌ಗಳಲ್ಲಿ 192 (ಕ್ಯಾಂಫ‌ರ್‌ 39, ಹ್ಯಾರಿ ಟೆಕ್ಟರ್‌ 33, ಜಾರ್ಜ್‌ ಡಾಕ್ರೆಲ್‌ ಔಟಾಗದೆ 26, ಜೋಶುವ ಲಿಟ್ಲ 20, ಹಸರಂಗ 79ಕ್ಕೆ 5, ಮಹೀಶ್‌ ತೀಕ್ಷಣ 28ಕ್ಕೆ 2).

ಸ್ಕಾಟ್ಲೆಂಡ್‌ಗೆ 76 ರನ್‌ ಜಯ
ಬುಲವಾಯೊ: ರವಿವಾರದ ಇನ್ನೊಂದು ಪಂದ್ಯದಲ್ಲಿ ಸ್ಕಾಟ್ಲೆಂಡ್‌ 76 ರನ್ನುಗಳಿಂದ ಒಮಾನ್‌ಗೆ ಸೋಲುಣಿಸಿತು. ಸ್ಕಾಟ್ಲೆಂಡ್‌ 50 ಓವರ್‌ಗಳಲ್ಲಿ 320 ರನ್‌ ಪೇರಿಸಿ ಸವಾಲೊಡ್ಡಿದರೆ, ಒಮಾನ್‌ 9 ವಿಕೆಟಿಗೆ 244 ರನ್‌ ಗಳಿಸಲಷ್ಟೇ ಶಕ್ತವಾಯಿತು. ಆದರೆ ಈ ಸೋಲಿನ ಹೊರತಾಗಿಯೂ ಒಮಾನ್‌ ಸೂಪರ್‌ ಸಿಕ್ಸ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಸ್ಕಾಟ್ಲೆಂಡ್‌ನ‌ ದೊಡ್ಡ ಸ್ಕೋರ್‌ಗೆ ಕಾರಣವಾದದ್ದು ವನ್‌ಡೌನ್‌ ಬ್ಯಾಟರ್‌ ಬ್ರೆಂಡನ್‌ ಮೆಕ್‌ಮುಲೆನ್‌ ಅವರ ಆಕರ್ಷಕ ಶತಕ. ಅವರು 136 ರನ್ನುಗಳ ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು. ಎದುರಿಸಿದ್ದು 121 ಎಸೆತ, ಸಿಡಿಸಿದ್ದು 14 ಬೌಂಡರಿ ಹಾಗೂ 3 ಸಿಕ್ಸರ್‌. ನಾಯಕ ರಿಚೀ ಬೆರ್ರಿಂಗ್ಟನ್‌ 60 ರನ್‌ ಹೊಡೆದರು. ಇವರಿಬ್ಬರ 3ನೇ ವಿಕೆಟ್‌ ಜತೆಯಾಟದಲ್ಲಿ 138 ರನ್‌ ಒಟ್ಟುಗೂಡಿತು.

ಕ್ರಿಸ್‌ ಗ್ರೀವ್ಸ್‌ 5 ವಿಕೆಟ್‌ ಕಿತ್ತು ಒಮಾನ್‌ಗೆ ತಡೆಯೊಡ್ಡಿದರು. 69 ರನ್‌ ಮಾಡಿದ ನಸೀಮ್‌ ಖುಷಿ ಒಮಾನ್‌ ಇನ್ನಿಂಗ್ಸ್‌ನ ಟಾಪ್‌ ಸ್ಕೋರರ್‌.

ಸಂಕ್ಷಿಪ್ತ ಸ್ಕೋರ್‌: ಸ್ಕಾಟ್ಲೆಂಡ್‌-50 ಓವರ್‌ಗಳಲ್ಲಿ 320 (ಮೆಕ್‌ಮುಲೆನ್‌ 136, ಬೆರ್ರಿಂಗ್ಟನ್‌ 60, ಬಿಲಾಲ್‌ ಖಾನ್‌ 55ಕ್ಕೆ 5). ಒಮಾನ್‌-9 ವಿಕೆಟಿಗೆ 244 (ನಸೀಮ್‌ ಖುಷಿ 69, ಶೋಯಿಬ್‌ ಖಾನ್‌ 36, ಕ್ರಿಸ್‌ ಗ್ರೀವ್ಸ್‌ 53ಕ್ಕೆ 5). ಪಂದ್ಯಶ್ರೇಷ್ಠ: ಬ್ರೆಂಡನ್‌ ಮೆಕ್‌ಮುಲೆನ್‌.

Advertisement

Udayavani is now on Telegram. Click here to join our channel and stay updated with the latest news.

Next