ಹೈದರಾಬಾದ್: ಕಳೆದೆರಡು ಬಾರಿಯ ರನ್ನರ್ ಅಪ್ ನ್ಯೂಜಿಲ್ಯಾಂಡ್ 13ನೇ ವಿಶ್ವಕಪ್‌ನಲ್ಲಿ ಅಬ್ಬರದ ಆರಂಭ ಪಡೆಯುವ ಮೂಲಕ ಎಲ್ಲರನ್ನೂ ದಂಗುಬಡಿಸಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮೇಲಿದ್ದ ಅಷ್ಟೂ ಸೇಡನ್ನು ಒಂದೇ ಏಟಿಗೆ, ಒಂದೇ ವಿಕೆಟ್ ನಷ್ಟದಲ್ಲಿ ತೀರಿಸಿಕೊಂಡು ಈ ಕೂಟಕ್ಕೆ ಪ್ರಚಂಡ ಆರಂಭ ಒದಗಿಸಿದ್ದು ಈಗ ಇತಿಹಾಸ. ಕಿವೀಸ್ ಈಗ ತನ್ನ 2ನೇ ಪಂದ್ಯವನ್ನು ಆಡಲಿಳಿಯಲಿದೆ. ಸೋಮವಾರ ಹೈದ ರಾಬಾದ್ ಅಂಗಳದಲ್ಲಿ ನೆದರ್ಲೆಂಡ್ಸ್‌ಗೆ ಸವಾಲೊಡ್ಡಲಿದೆ.
“ತ್ರೀ ಲಯನ್ಸ್’ ಖ್ಯಾತಿಯ ಇಂಗ್ಲೆಂಡ್ ವಿರುದ್ಧ ನಾಯಕ ಕೇನ್ ವಿಲಿಯಮ್ಸನ್ ಗೈರಲ್ಲಿ ಕಣಕ್ಕಿಳಿದೂ ನ್ಯೂಜಿಲ್ಯಾಂಡ್ ಅಮೋಘ ಪ್ರದರ್ಶನ ನೀಡಿತ್ತು. ಡೇವನ್ ಕಾನ್ವೇ ಮತ್ತು ರಚಿನ್ ರವೀಂದ್ರ ಸೇರಿಕೊಂಡು ಆಂಗ್ಲರ ದಾಳಿಯನ್ನು ಛಿದ್ರಗೊಳಿಸಿದ್ದರು. ಇಂಗ್ಲೆಂಡ್ 9ಕ್ಕೆ 282 ರನ್ನುಗಳ ಸವಾ ಲಿನ ಮೊತ್ತವನ್ನೇ ಪೇರಿಸಿತಾದರೂ ನ್ಯೂಜಿಲ್ಯಾಂಡ್ ತನಗಿದು ಲೆಕ್ಕಕ್ಕೇ ಅಲ್ಲ ಎಂಬ ರೀತಿಯಲ್ಲಿ ಆಡಿ ಉಳಿದೆಲ್ಲ ತಂಡಗಳ ಮೇಲೆ ಅಪಾಯದ ಬಾವುಟ ಹಾರಿಸಿದೆ. ಇದಕ್ಕೆ ನೆದರ್ಲೆಂಡ್ಸ್ ಕೂಡ ಹೊರತಲ್ಲ.
ನೆದರ್ಲೆಂಡ್ಸ್ ತನ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ಥಾನಕ್ಕೆ ಯಾವ ವಿಧದಲ್ಲೂ ಸಾಟಿಯಾಗಿರಲಿಲ್ಲ. 286 ರನ್ ಬೆನ್ನಟ್ಟುವ ಹಾದಿಯಲ್ಲಿ ಅದು ಇನ್ನೂರರ ಗಡಿ ದಾಟಿದ್ದೇ ಒಂದು ದೊಡ್ಡ ಸಾಧನೆ ಎನಿಸಿತು. ಇಲ್ಲಿ ಡಚ್ಚರ ಪಡೆ 81 ರನ್ನುಗಳಿಂದ ಮುಗ್ಗರಿಸಿತು. ಬಾಸ್ ಡಿ ಲೀಡ್ ಎರಡೂ ವಿಭಾಗಗಳಲ್ಲಿ “ಬಾಸ್’ ಎನಿಸಿದ್ದು, ಪಂಜಾಬ್ ಮೂಲದ ವಿಕ್ರಮ್‌ಜೀತ್ ಸಿಂಗ್ ಅರ್ಧ ಶತಕ ಬಾರಿಸಿದ್ದಷ್ಟೇ ನೆದರ್ಲೆಂಡ್ಸ್ ಸರದಿಯ ಗುರುತಿಸಲ್ಪಡುವ ಅಂಶಗಳಾಗಿದ್ದವು.
ಇನ್ನೂ ಸಾಕಷ್ಟು ದೊಡ್ಡ ತಂಡಗಳನ್ನು ಎದುರಿಸ ಬೇಕಿರುವ ನೆದರ್ಲೆಂಡ್ಸ್ ತನ್ನ ಬ್ಯಾಟಿಂಗ್‌ನಲ್ಲಿ ದೊಡ್ಡ ಮಟ್ಟದ ಸುಧಾರಣೆ ಕಾಣಬೇಕಾದುದು ಅತ್ಯಗತ್ಯ. ಮುಖ್ಯವಾಗಿ ಕ್ಯಾಪ್ಟನ್ ಸ್ಕಾಟ್ ಎಡ್ವರ್ಡ್ಸ್ ಬ್ಯಾಟ್‌ನಿಂದ ರನ್ ಹರಿದು ಬರಬೇಕಿದೆ. ಅವರು ಕಳೆದ 4 ಪಂದ್ಯಗಳಲ್ಲಿ 30 ರನ್ ಗಡಿ ದಾಟಿಲ್ಲ. ಪಾಕ್ ವಿರುದ್ಧ ಖಾತೆಯನ್ನೂ ತೆರೆಯಲಿಲ್ಲ. ಮ್ಯಾಕ್ಸ್ ಓ ಡೌಡ್, ಕಾಲಿನ್ ಆ್ಯಕರ್‌ಮನ್, ತೇಜ ನಿಡಮನೂರು ನಿಂತು ಆಡಿದರೆ ನೆದರ್ಲೆಂಡ್ಸ್‌ನಿಂದ ಹೋರಾಟವನ್ನು ನಿರೀಕ್ಷಿಸ ಬಹುದು. ಈಗಿನ ಸ್ಥಿತಿಯಲ್ಲಿ ಅದು ಏರುಪೇರಿನ ಫಲಿತಾಂಶ ದಾಖಲಿಸುವ ಮಟ್ಟದಲ್ಲಿಲ್ಲ.
ಆದರೆ ಪಾಕಿಸ್ಥಾನ ವಿರುದ್ಧ ನೆದ ರ್ಲೆಂಡ್ಸ್ ತಂಡದ ಬೌಲಿಂಗ್ ಕ್ಲಿಕ್ ಆದುದನ್ನು ಮರೆಯುವಂತಿಲ್ಲ. ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿದ್ದ ಬಾಬರ್ ಪಡೆಯನ್ನು 49 ಓವರ್‌ಗಳಲ್ಲಿ ಆಲೌಟ್ ಮಾಡಿದ ಡಚ್ಚರ ಸಾಹಸ ವನ್ನು ಮೆಚ್ಚಲೇಬೇಕು. ನ್ಯೂಜಿಲ್ಯಾಂಡ್ ವಿರುದ್ಧವೂ ಇಂಥದೊಂದು ಬೌಲಿಂಗ್ ಸಂಘಟಿಸಿದರೆ ನೆದರ್ಲೆಂಡ್ಸ್ ಕ್ರಿಕೆಟ್ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗು ವುದರಲ್ಲಿ ಅನುಮಾನವಿಲ್ಲ.ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ದ್ವಿತೀಯ ಪಂದ್ಯದಲ್ಲೂ ಆಡುವುದು ಅನುಮಾನ. ಹಾಗೆಯೇ ವೇಗಿ ಟಿಮ್ ಸೌಥಿ ಕೂಡ. ಇವರಿ
ಬ್ಬರೂ ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ತಂಡದ ಪ್ರಕಟನೆ ತಿಳಿಸಿದೆ. ಅಲ್ಲದೇ ನೆದರ್ಲೆಂಡ್ಸ್‌ನಂತ ಸಾಮಾನ್ಯ ತಂಡವನ್ನು ಎದುರಿಸಲು ಈ ಅನು ಭವಿಗಳ ಅಗತ್ಯವೂ ಇಲ್ಲ ಎಂಬುದು ಕಿವೀಸ್ ಲೆಕ್ಕಾಚಾರ. ಇಬ್ಬರೂ ಇನ್ನಷ್ಟು ವಿಶ್ರಾಂತಿ ಪಡೆದು ಅ. 13ರ ಬಾಂಗ್ಲಾದೇಶ ವಿರುದ್ಧ ಆಡಲಿಳಿದರೆ ಸಾಕು ಎಂಬ ಯೋಜನೆಯಲ್ಲಿ ತಪ್ಪೇನೂ ಇಲ್ಲ.
ಇಂಗ್ಲೆಂಡ್ ವಿರುದ್ಧ ನ್ಯೂಜಿಲ್ಯಾಂಡ್ ಸರದಿಯಲ್ಲಿ ಬ್ಯಾಟಿಂಗ್ ಲಭಿಸಿದ್ದು ಮೂವರಿಗೆ ಮಾತ್ರ. ಇವರಲ್ಲಿ ವಿಲ್ ಯಂಗ್ ಸೊನ್ನೆ ಸುತ್ತಿದರು. ಕಾನ್ವೇ ಮತ್ತು ರವೀಂದ್ರ ಅಜೇಯ ಶತಕದೊಂದಿಗೆ ಮೆರೆದರು. ರವೀಂದ್ರ ಕಿವೀಸ್ ಸರದಿಯ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಿ ಗೋಚರಿಸಲಾರಂಭಿಸಿದ್ದಾರೆ. ಪಾಕ್ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಅವರು ಸಿಡಿದು ನಿಂತಿದ್ದರು.