Advertisement
ಈ ಪ್ರತಿಷ್ಠಿತ ಕೂಟದಲ್ಲಿ ಭಾರತ ತಂಡ ಪಾಕಿಸ್ಥಾನದ ವಿರುದ್ಧ ಆಡಬೇಕೇ, ಪಾಕಿಸ್ಥಾನ ಈ ಕೂಟದಲ್ಲಿ ಪಾಲ್ಗೊಳ್ಳುವುದರಿಂದ ಭಾರತ ವಿಶ್ವಕಪ್ ಪಂದ್ಯಾವಳಿಯನ್ನೇ ಬಹಿಷ್ಕರಿಸಬೇಕೇ, ಪಾಕಿಸ್ಥಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಿ ಕ್ರಿಕೆಟ್ ನಿಷೇಧ ಹೇರಬೇಕೇ… ಹತ್ತು ಹಲವು ಪ್ರಶ್ನೆಗಳು ತೂರಿಬರುತ್ತಿವೆ. ಐಸಿಸಿ, ಬಿಸಿಸಿಐ, ಕೇಂದ್ರ ಸರಕಾರ, ವಿಶ್ವ ಕ್ರಿಕೆಟ್ ವಲಯಗಳೆಲ್ಲ ಜಟಿಲ ಸಮಸ್ಯೆಯನ್ನು ಹೊತ್ತು ಕೂತಿವೆ.
ಕ್ರಿಕೆಟ್ “ಶಾಂತಿಯ ಸಂಧಾನಕಾರ’, ಕ್ರಿಕೆಟ್‌ನಿಂದ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯ ಸುಧಾರಿಸುತ್ತದೆ ಎಂಬುದೆಲ್ಲ ಭಾರತ-ಪಾಕಿಸ್ಥಾನ ವಿಷಯದಲ್ಲಿ ಸುಳ್ಳಾಗಿರುವುದಕ್ಕೆ ಪುಲ್ವಾಮಾ ದಾಳಿಯೇ ಸಾಕ್ಷಿ. ಇದರಿಂದ ಕ್ರೀಡೆಗಿಂತ ದೇಶ ದೊಡ್ಡದು ಎಂಬ ಅಭಿಮಾನ ಎಲ್ಲೆಡೆ ವ್ಯಕ್ತವಾಗುತ್ತಿದೆ. ಹೀಗಾಗಿ ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ಥಾನ ವಿರುದ್ಧ ಆಡುವುದು ಬೇಡ ಎಂಬ ಕೂಗು ತೀವ್ರಗೊಂಡಿದೆ. ಹಾಗೆಯೇ, ನಾವೇಕೆ ಪಾಕಿಸ್ಥಾನಕ್ಕೆ ಪುಕ್ಕಟೆ ಎರಡಂಕ ಕೊಡಬೇಕು, ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಭಾರತ ಸೋಲಿಲ್ಲದ ದಾಖಲೆ ಹೊಂದಿರುವುದರಿಂದ ಅವರನ್ನು ಇನ್ನೊಮ್ಮೆ ಹೆಡೆಮುರಿ ಕಟ್ಟಿ ಸಂಭ್ರಮಿಸೋಣ ಎಂಬ ಹೇಳಿಕೆಗಳೂ ಬಂದಿವೆ. ಮೇಲ್ನೋಟಕ್ಕೆ ಎರಡೂ ಸರಿ ಎನಿಸುತ್ತದೆ.
Related Articles
Advertisement
ಅಂದು ಕಾರ್ಗಿಲ್ ಕದನಕಾಕತಾಳೀಯವೆಂಬಂತೆ, 1999ರಲ್ಲಿ ಇಂಗ್ಲೆಂಡ್ ಆತಿಥ್ಯದಲ್ಲೇ ವಿಶ್ವಕಪ್ ನಡೆದಾಗ ಆಗಲೂ ಭಾರತ-ಪಾಕಿಸ್ಥಾನ ನಡುವೆ ಬಿಗು ವಾತಾವರಣ ನೆಲೆಸಿತ್ತು. ಕಾರಣ, ಕಾರ್ಗಿಲ್ ವಾರ್! ವಿಶ್ವಕಪ್ ಮತ್ತು ಕಾರ್ಗಿಲ್ ಕದನ ಏಕಕಾಲದಲ್ಲಿ ನಡೆಯುತ್ತಿತ್ತು. ಅಂದು “ಸೂಪರ್ ಸಿಕ್ಸ್’ ಹಂತದಲ್ಲಿ ಭಾರತ-ಪಾಕ್ ಎದುರಾದವು. ಎಂದಿನಂತೆ ಭಾರತ ವಿಶ್ವಕಪ್ ಅಂಗಳದಲ್ಲಿ ಪಾಕಿಸ್ಥಾನವನ್ನು ಹೊಡೆದುರುಳಿಸಿ ಸಂಭ್ರಮಿ ಸಿತು. ಅಂದು ಕೂಡ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ ಆಡಬಾರದು-ಆಡಬೇಕು ಎಂಬ ಕೂಗು ತೀವ್ರವಾಗಿಯೇ ಇತ್ತು. ಆದರೆ ನೇರಾನೇರ ಕಾರ್ಗಿಲ್ ಕದನಕ್ಕೆ ಪುಲ್ವಾಮಾದ ಕಳ್ಳ ದಾಳಿಯನ್ನು ಸಮೀಕರಿಸಲಾಗದು. ವಿಶ್ವಕಪ್‌ಗೆ ಇನ್ನೂ 3 ತಿಂಗಳಿರಬಹುದು, ಆದರೆ ಭಾರತ-ಪಾಕಿಸ್ಥಾನ ಪಂದ್ಯದ ಕುರಿತು ಶೀಘ್ರದಲ್ಲಿ ಸ್ಪಷ್ಟ ಹಾಗೂ ದಿಟ್ಟ ನಿರ್ಧಾರವೊಂದಕ್ಕೆ ಬರಬೇಕಾದ ಅಗತ್ಯವಿದೆ. ಫೈನಲ್‌ನಲ್ಲಿ ಎದುರಾದರೆ?
ಈ ಬಾರಿಯ ವಿಶ್ವಕಪ್ ರೌಂಡ್ ರಾಬಿನ್ ಲೀಗ್ ಮಾದರಿಯನ್ನು ಹೊಂದಿದೆ. ಇದರಂತೆ ಭಾರತ-ಪಾಕಿಸ್ಥಾನ ಮುಖಾಮುಖೀ ನಡೆಯಬೇಕಿದೆ. ಈ ಪಂದ್ಯವನ್ನು ಭಾರತ ತ್ಯಜಿಸಿದರೆ ಎರಡಂಕ ನಷ್ಟವಾಗುತ್ತದೆ. ಪಾಕಿಗೆ ಲಾಭವಾಗುತ್ತದೆ. ಇದರಿಂದ ಭಾರತದ ಸೆಮಿಫೈನಲ್ ಪ್ರವೇಶಕ್ಕೇನೂ ಅಡ್ಡಿಯಾಗಲಿಕ್ಕಿಲ್ಲ ಎಂದೇ ಭಾವಿಸೋಣ. ಅಕಸ್ಮಾತ್ ಭಾರತ-ಪಾಕಿಸ್ಥಾನ ತಂಡಗಳೇ ಫೈನಲ್‌ನಲ್ಲಿ ಎದುರಾದರೆ? ಆಗಲೂ ಭಾರತ “ಕಪ್’ ಬಿಟ್ಟುಕೊಡುತ್ತದೆಯೇ? ಈ ಬಗ್ಗೆ ಈಗಲೇ ಚಿಂತಿಸಿ ಸೂಕ್ತ ಯೋಜನೆಯನ್ನು ರೂಪಿಸಬೇಕಾದ ಅಗತ್ಯವಿದೆ. 1996ರ ವಿಶ್ವಕಪ್ ವೇಳೆ ಎಲ್‌ಟಿಟಿಇ ಭೀತಿಯಿಂದ ಆಸ್ಟ್ರೇಲಿಯ, ವೆಸ್ಟ್ ಇಂಡೀಸ್ ತಂಡಗಳು ಶ್ರೀಲಂಕಾದಲ್ಲಿ ಆಡಲು ನಿರಾಕರಿಸಿದ್ದವು. ಆಗ ಲಂಕೆಗೆ ಪುಕ್ಕಟೆ 4 ಅಂಕ ಲಭಿಸಿತ್ತು. ಲಾಹೋರ್ ಫೈನಲ್‌ನಲ್ಲಿ ಅಂದು ಆಡಲು ನಿರಾಕರಿಸಿದ ಆಸ್ಟ್ರೇಲಿಯವೇ ಎದುರಾದಾಗ ಮೇಲೆರಗಿ ಹೋದ ಶ್ರೀಲಂಕಾ ಚಾಂಪಿಯನ್ ಆದದ್ದು ಈಗ ಇತಿಹಾಸ. ಆದರೆ ಭಾರತ-ಪಾಕಿಸ್ಥಾನ ವಿಷಯದಲ್ಲಿ ಈ ಘಟನೆಯನ್ನು ತುಲನೆ ಮಾಡಲಾಗದು.