ಧರ್ಮಶಾಲಾ: ನ್ಯೂಜಿ ಲ್ಯಾಂಡ್ ಕೈಯಲ್ಲಿ ಬಲವಾದ ಏಟು ತಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ 13ನೇ ವಿಶ್ವಕಪ್‌ನಲ್ಲಿ ಮೊದಲ ಗೆಲು ವಿನ ಹುಡುಕಾಟದಲ್ಲಿದೆ. ಮಂಗಳವಾರ ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಂಗ್ಲರ ಪಡೆ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ.
ಈ ಬಾರಿ ಶಕಿಬ್ ಅಲ್ ಹಸನ್ ನೇತೃತ್ವದಲ್ಲಿ ಕಣಕ್ಕಿಳಿದಿರುವ ಬಾಂಗ್ಲಾ ದೇಶ ಈಗಾಗಲೇ ತನ್ನ ಆರಂಭಿಕ ಪಂದ್ಯವನ್ನು ಗೆದ್ದ ಸಂಭ್ರಮದಲ್ಲಿದೆ. ಅದು ಅಫ್ಘಾನಿಸ್ಥಾನ ವಿರುದ್ಧ 6 ವಿಕೆಟ್ ಜಯ ಸಾಧಿಸಿತ್ತು. ಹೀಗಾಗಿ ಬಾಂಗ್ಲಾದೇಶವೇ ಮಂಗಳವಾರದ ಮುಖಾಮುಖಿಯಲ್ಲಿ ಹೆಚ್ಚಿನ ಆತ್ಮವಿಶ್ವಾಸದಲ್ಲಿರುವ ತಂಡ ಎನ್ನಲಡ್ಡಿಯಿಲ್ಲ.
ನ್ಯೂಜಿಲ್ಯಾಂಡ್ ವಿರುದ್ಧ ಅನುಭವಿ ಸಿದ ಸೋಲು ಇಂಗ್ಲೆಂಡ್‌ಗೆ ಮೊದಲ ಎಚ್ಚರಿಕೆಯ ಗಂಟೆಯಾಗಿದೆ. ಉದ್ಘಾಟನ ಪಂದ್ಯದಲ್ಲಿ 9ಕ್ಕೆ 282 ರನ್ ಪೇರಿಸಿಯೂ ಇದನ್ನು ಉಳಿಸಿಕೊಳ್ಳುವಲ್ಲಿ ಬಟ್ಲರ್ ಬಳಗ ವಿಫಲವಾಗಿತ್ತು. ಆಂಗ್ಲರ ಬೌಲಿಂಗ್ ದಾಳಿಯನ್ನು ಡೇವನ್ ಕಾನ್ವೇ-ರಚಿನ್ ರವೀಂದ್ರ ಇಬ್ಬರೇ ಸೇರಿಕೊಂಡು ಧ್ವಂಸಗೊಳಿಸಿದ್ದರು. ಇಂಥದೊಂದು ಆಘಾತದಿಂದ ಹೊರಬರುವುದು ಯಾವ ತಂಡಕ್ಕೂ ಸುಲಭವಲ್ಲ. ಅದರಲ್ಲೂ ಹಾಲಿ ಚಾಂಪಿಯನ್ ತಂಡಕ್ಕಂತೂ ಇದು ಬರಸಿಡಿಲು ಬಡಿದ ಅನುಭವವೇ ಸೈ. ಹೀಗಾಗಿ ಬಾಂಗ್ಲಾದಂಥ “ಸಾಮಾನ್ಯ’ ತಂಡ ಕೂಡ ಇಂಗ್ಲೆಂಡ್ ಪಾಲಿಗೆ ದೊಡ್ಡ ಸವಾಲಾಗಿ ಕಾಡುವ ಸಂಭವವಿದೆ.
ಇಂಗ್ಲೆಂಡ್ ಬೌಲಿಂಗ್ ಹೇಗೆ?
ಇಂಗ್ಲೆಂಡ್ ಸದ್ಯಕ್ಕೆ ತನ್ನ ಬೌಲಿಂಗ್ ವಿಭಾಗವನ್ನು ಸುಧಾರಿಸಿಕೊಳ್ಳುವತ್ತ ಹೆಚ್ಚಿನ ಗಮನ ನೀಡಬೇಕು. ಕಿವೀಸ್ ತಂಡದ ಏಕೈಕ ವಿಕೆಟ್ ಉರುಳಿಸಿದ ಸ್ಯಾಮ್ ಕರನ್, ಮಾರ್ಕ್ ವುಡ್, ಕ್ರಿಸ್ ವೋಕ್ಸ್, ಮೊಯಿನ್ ಅಲಿ, ಆದಿಲ್ ರಶೀದ್, ಲಿಯಮ್ ಲಿವಿಂಗ್‌ಸ್ಟೋನ್ ತಮ್ಮ ಎಸೆತಗಳನ್ನು ಹರಿತಗೊಳಿಸದೆ ಹೋದರೆ ಬಾಂಗ್ಲಾ ಕೂಡ ಬಡಿದು ಹಾಕೀತು! ಬೌಲಿಂಗ್ ಸದಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದಿದ್ದರೆ ಡೇವಿಡ್ ವಿಲ್ಲಿ, ರೀಸ್ ಟಾಪ್ಲಿ ಅವಕಾಶ ಪಡೆಯಬಹುದು.
ಇಂಗ್ಲೆಂಡ್ ಈ ವಿಶ್ವಕಪ್‌ನಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ತಂಡ. ಆದರೂ ಅಹ್ಮದಾಬಾದ್‌ನ ಸಂಪೂರ್ಣ ಲಾಭವೆತ್ತುವಲ್ಲಿ ವಿಫಲವಾಯಿತು. ಇಲ್ಲಿ ಮುನ್ನೂರರ ಗಡಿ ದಾಟಿ ಮುನ್ನಡೆಯುವುದು ಅಂಥ ಸಮಸ್ಯೆ ಆಗಿರಲಿಲ್ಲ. ಆದರೆ ಧರ್ಮಶಾಲಾದಲ್ಲಿ ರನ್ ಗಳಿಕೆ ಸುಲಭವಲ್ಲ. ಬಾಂಗ್ಲಾ ಇದೇ ಅಂಗಳದಲ್ಲಿ ಅಫ್ಘಾನ್ ತಂಡವನ್ನು 156ಕ್ಕೆ ಕೆಡವಿತ್ತು. ಆದರೆ ಇಂಗ್ಲೆಂಡ್ ವಿರುದ್ಧ ಇಂಥದೇ ಮ್ಯಾಜಿಕ್ ಸುಲಭವಲ್ಲ.
ಬಾಂಗ್ಲಾದ ಬ್ಯಾಟಿಂಗ್ ಅನುಭವಿ ಗಳಿಂದ ಕೂಡಿದ್ದು, ಬಲಿಷ್ಠವಾಗಿಯೇ ಇದೆ. ಇಲ್ಲಿ ಇಂಗ್ಲೆಂಡ್ ಮೇಲೆ ಇನ್ನಷ್ಟು ಮಾನಸಿಕ ಒತ್ತಡ ಹೇರುವಲ್ಲಿ ಯಶಸ್ವಿಯಾದರೆ ಬಾಂಗ್ಲಾದಿಂದ ಅಚ್ಚರಿ ನಿರೀಕ್ಷಿಸಬಹುದು.