Advertisement
ಭಾರತಕ್ಕೆ ಮೂರು ಸೋಲುಅಂದಹಾಗೆ ಇಲ್ಲಿ ಭಾರತದ “ಸಾಧನೆ’ಯೂ ಪುನರಾವರ್ತನೆ ಗೊಂಡಿತ್ತು. ಅಥವಾ ಇನ್ನಷ್ಟು ಕಳಪೆ ಆಗಿತ್ತು ಎನ್ನಲಡ್ಡಿಯಿಲ್ಲ. ಮತ್ತೆ ಎಸ್. ವೆಂಕಟರಾಘವನ್ ನೇತೃತ್ವದಲ್ಲಿ ಕಣ ಕ್ಕಿಳಿದ ಭಾರತ “ಆಟಕ್ಕುಂಟು, ಲೆಕ್ಕಕ್ಕಿಲ್ಲ’ದ ತಂಡವಾಗಿ ಕಂಡಿತು. ಮೊದಲ ವಿಶ್ವಕಪ್ ವೈಫಲ್ಯಕ್ಕೆ ರಿಯಾಯಿತಿ ನೀಡಬಹುದಾದರೂ 4 ವರ್ಷಗಳ ಬಳಿಕ ಭಾರತದ ಏಕದಿನ ಮಟ್ಟ ಸುಧಾರಿಸದಿದ್ದುದು ನಮ್ಮ ಕ್ರಿಕೆಟ್ ಅಭಿಮಾನಿಗಳನ್ನು ತೀವ್ರ ನಿರಾಸೆಯಲ್ಲಿ ಕೆಡವಿತು. “ಬಿ’ ವಿಭಾಗದಲ್ಲಿದ್ದ ಭಾರತ, ಆಡಿದ ಮೂರೂ ಲೀಗ್ ಪಂದ್ಯಗಳನ್ನು ಸೋತು ಕೊನೆಯ ಸ್ಥಾನಕ್ಕೆ ಕುಸಿಯಿತು. ಅರ್ಹತಾ ಸುತ್ತಿನ ಮೂಲಕ ಬಂದ ಶ್ರೀಲಂಕಾವನ್ನೂ ಮಣಿಸಲು ನಮ್ಮ ವರಿಂದ ಸಾಧ್ಯವಾಗಲಿಲ್ಲ.
ಭಾರತ ತನ್ನ ಲೀಗ್ ಪಂದ್ಯವನ್ನು ಆರಂಭಿಸಿದ್ದೇ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಎದು ರಿಸುವ ಮೂಲಕ. ಫಲಿತಾಂಶ, 9 ವಿಕೆಟ್‌ಗಳ ದೊಡ್ಡ ಸೋಲು. ಬಳಿಕ ನ್ಯೂಜಿಲ್ಯಾಂಡ್ ವಿರುದ್ಧ 8 ವಿಕೆಟ್‌ಗಳಿಂದ ಮುಗ್ಗರಿಸಿತು. ಶ್ರೀಲಂಕಾ 47 ರನ್ನುಗಳಿಂದ ಬಗ್ಗುಬಡಿಯಿತು.
1975ರ ಚೊಚ್ಚಲ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ನೆಚ್ಚಿನ ತಂಡ ವಾಗಿ ಗುರುತಿಸಲ್ಪಟ್ಟಿತ್ತಷ್ಟೇ? ಆದರೆ ಅದು ಸೆಮಿಫೈನಲ್‌ನಲ್ಲೇ ಮುಗ್ಗರಿಸಿತ್ತು. ಆಗ ವೆಸ್ಟ್ ಇಂಡೀಸ್ ತಾಕತ್ತು ಏನೆಂಬುದು ಅರಿವಾಯಿತು. ಹೀಗಾಗಿ 1979ರಲ್ಲಿ ಕ್ಲೈವ್ ಲಾಯ್ಡ ನೇತೃತ್ವದ ಕೆರಿಬಿಯನ್ ಪಡೆಯ ಮೇಲೆ ಎಲ್ಲರೂ ಬಾಜಿ ಕಟ್ಟಿದ್ದರು. ಆದರೆ ಇಂಗ್ಲೆಂಡ್ ಫೈನಲ್‌ಗೆ
ಮುನ್ನುಗ್ಗಿ ಬಂದುದರಿಂದ ಚಿತ್ರಣ ಬದಲಾದೀತು ಎಂಬ ಕುತೂಹಲವೂ ಮನೆಮಾಡಿತ್ತು.
ಸೆಮಿಫೈನಲ್‌ನಲ್ಲಿ ಎದುರಾದ ತಂಡಗ ಳೆಂದರೆ ವೆಸ್ಟ್ ಇಂಡೀಸ್-ಪಾಕಿಸ್ಥಾನ ಮತ್ತು ಇಂಗ್ಲೆಂಡ್-ನ್ಯೂಜಿಲ್ಯಾಂಡ್. ಕಳೆದ ಸಲ ಫೈನಲ್‌ನಲ್ಲಿ ಎಡವಿದ ಆಸ್ಟ್ರೇಲಿಯ ಈ ಬಾರಿ ಲೀಗ್‌ನಲ್ಲೇ ಹೊರಬಿದ್ದಿತ್ತು. ಪಾಕ್ ಮೊದಲ ಸಲ ಉಪಾಂತ್ಯ ಪ್ರವೇಶಿಸಿತು. ಆದರೆ ವಿಂಡೀಸ್ ಕೈಯಲ್ಲಿ 43 ರನ್ನುಗಳಿಂದ ಸೋತಿತು. ಇನ್ನೊಂದು ರೋಚಕ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ 9 ರನ್ನುಗಳಿಂದ ನ್ಯೂಜಿಲ್ಯಾಂಡ್ ತಂಡವನ್ನು ಉರುಳಿಸಿತು. ಇಂಗ್ಲೆಂಡ್ 60 ಓವರ್‌ಗಳಲ್ಲಿ 8ಕ್ಕೆ 221 ರನ್ ಗಳಿಸಿದರೆ, ನ್ಯೂಜಿಲ್ಯಾಂಡ್ 9ಕ್ಕೆ 212 ರನ್ ಮಾಡಿ ಶರಣಾಯಿತು. ಹೀಗೆ ಸತತ 2 ವಿಶ್ವಕಪ್ ಸೆಮಿಫೈನಲ್‌ಗಳಲ್ಲೂ ಕಿವೀಸ್‌ಗೆ ಅದೃಷ್ಟ ಕೈಕೊಟ್ಟಿತು.
Related Articles
ಲಾರ್ಡ್ಸ್ ಫೈನಲ್‌ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಮೈಕ್ ಬ್ರೇಯರ್ಲಿ ಬೌಲಿಂಗ್ ಆಯ್ದುಕೊಂಡಾಗ ನಿರ್ಧಾರ ಸರಿಯಾಗಿಯೇ ಇತ್ತು ಎನಿಸಿತು. 99ಕ್ಕೆ ವಿಂಡೀಸ್‌ನ 4 ವಿಕೆಟ್ ಉರುಳಿಸಿತು. ಆದರೆ ವಿವಿಯನ್ ರಿಚರ್ಡ್ಸ್ ಅಬ್ಬರಿಸಿ ಅಜೇಯ 138 ರನ್ ಸಿಡಿಸಿದರು. ಕಾಲಿಸ್ ಕಿಂಗ್ 86 ರನ್ ಬಾರಿಸಿದರು. ಸ್ಕೋರ್ 9ಕ್ಕೆ 286ರ ತನಕ ಏರಿತು.
ಇಂಗ್ಲೆಂಡ್ ಆರಂಭ ಅಮೋಘವಾ ಗಿತ್ತು. ಬ್ರೇಯರ್ಲಿ (64) ಮತ್ತು ಜೆಫ್ ಬಾಯ್ಕಟ್ (57) ಆರಂಭಿಕ ವಿಕೆಟಿಗೆ 129 ರನ್ ಪೇರಿಸಿದಾಗ ಇಂಗ್ಲೆಂಡ್ ಇತಿಹಾಸಕ್ಕೆ ಕ್ಷಣಗಣನೆ ಆರಂಭವಾಗಿತ್ತು. ಅಷ್ಟೇ… ಮುಂದಿನದ್ದೆಲ್ಲ ವಿಂಡೀಸ್ ವೇಗಿಗಳ ದರ್ಬಾರು.
Advertisement
ಜೋಯೆಲ್ ಗಾರ್ನರ್ (38ಕ್ಕೆ 5) ಆಂಗ್ಲ ಪಡೆಯ ಮೇಲೆರಗಿ ಹೋದರು. ಕಾಲಿನ್ ಕ್ರಾಫ್ಟ್, ಮೈಕಲ್ ಹೋಲ್ಡಿಂಗ್ ಕೂಡ ಕೈಚಳಕ ತೋರಿದರು. ನಾಟಕೀಯ ಕುಸಿತ ಕಂಡ ಇಂಗ್ಲೆಂಡ್ 194ಕ್ಕೆ ಆಲೌಟ್ ಆಗಿತ್ತು. ವಿಂಡೀಸ್ ಕಿರೀಟ ಉಳಿಸಿಕೊಂಡು ಮೆರೆದಾಡಿತು