Advertisement

World Cup Cricket; ಅಫ್ಘಾನ್‌ ಗಡಿ ದಾಟಿ ಮುನ್ನುಗ್ಗೀತೇ ಪಾಕ್‌ ಕ್ರಿಕೆಟ್‌ ಪಡೆ?

11:50 PM Oct 22, 2023 | Team Udayavani |

ಚೆನ್ನೈ: ಬಾಬರ್‌ ಆಜಂ ನೇತೃತ್ವದ ಪಾಕಿಸ್ಥಾನ ಬಹಳ ಇಕ್ಕಟ್ಟಿನ ಸ್ಥಿತಿಯಲ್ಲಿದೆ. ಭಾರತ ಮತ್ತು ಆಸ್ಟ್ರೇಲಿಯ ವಿರುದ್ಧ ಸತತ ಸೋಲನುಭವಿಸಿ ತನ್ನ ದೌರ್ಬಲ್ಯವನ್ನು ತೆರೆದಿರಿಸಿದೆ. ಒಂದು ದೊಡ್ಡ ಗೆಲುವಿನಿಂದ ಮಾತ್ರ ಬಾಬರ್‌ ಪಡೆಯ ಆತಂಕ ಮತ್ತು ಒತ್ತಡವನ್ನು ನಿವಾರಿಸಲು ಸಾಧ್ಯ ಎಂಬುದು ಸದ್ಯದ ಸ್ಥಿತಿ. ಇದಕ್ಕೆ ಅಫ್ಘಾನಿಸ್ಥಾನ ವಿರುದ್ಧದ ಪಂದ್ಯ ವರವಾಗಿ ಬಂದೀತೇ ಎಂಬ ನಿರೀಕ್ಷೆಯಲ್ಲಿದೆ ಪಾಕ್‌.

Advertisement

ಚೆನ್ನೈಯಲ್ಲಿ ನಡೆಯುವ ಈ ಮುಖಾಮುಖಿ ಪಾಕಿಸ್ಥಾನ ಪಾಲಿಗೆ ಅತ್ಯಂತ ಮಹತ್ವದೆಂಬುದರಲ್ಲಿ ಅನುಮಾನವಿಲ್ಲ. ಸದ್ಯ ಅದು 5ನೇ ಸ್ಥಾನದಲ್ಲಿದೆ. ರನ್‌ರೇಟ್‌ ಮೈನಸ್‌ ಆಗಿದೆ (-0.456). ಇಲ್ಲಿ ಸುಧಾರಣೆ ಅತೀ ಅಗತ್ಯ. ಇದು ಅಫ್ಘಾನ್‌ ಪಂದ್ಯದ ಮೂಲಕವೇ ಆರಂಭಗೊಂಡರೆ ಪಾಕ್‌ ಸುರಕ್ಷಿತ ಎಂಬುದು ಸದ್ಯದ ಲೆಕ್ಕಾಚಾರ. ಇಲ್ಲಿಯೂ ಎಡವಿದರೆ ಪಾಕಿಸ್ಥಾನಕ್ಕೆ ನಾಕೌಟ್‌ ಟಿಕೆಟ್‌ ಅನುಮಾನ ಎಂದೇ ಹೇಳಬೇಕಾಗುತ್ತದೆ.

ಸ್ಪಿನ್‌ ನಿಭಾವಣೆಯಲ್ಲಿ ವೈಫ‌ಲ್ಯ
ಈ ಪಂದ್ಯಾವಳಿಯಲ್ಲಿ ಕಂಡುಬಂದ ಪಾಕಿಸ್ಥಾನ ತಂಡದ ದೊಡ್ಡ ಸಮಸ್ಯೆಯೆಂದರೆ ಸ್ಪಿನ್‌ ನಿಭಾವಣೆಯಲ್ಲಿ ಪರದಾಡುತ್ತಿರುವುದು. ಏಷ್ಯಾದ ತಂಡವಾಗಿದ್ದೂ ಸ್ಪಿನ್‌ ಎಸೆತಗಳಿಗೆ ಪಾಕ್‌ ಬ್ಯಾಟರ್ ಅಂಜುತ್ತಿರುವುದು ಅಚ್ಚರಿಯೇ ಸೈ. ಆಸ್ಟ್ರೇಲಿಯ ಎದುರಿನ ಬೆಂಗಳೂರು ಪಂದ್ಯದಲ್ಲಿ ಪಾಕ್‌ ತನ್ನ 4 ದೊಡ್ಡ ವಿಕೆಟ್‌ಗಳನ್ನು ಲೆಗ್‌ಸ್ಪಿನ್ನರ್‌ ಆ್ಯಡಂ ಝಂಪ ಅವರಿಗೆ ಒಪ್ಪಿಸಿತ್ತು. ಹೀಗಾಗಿ ಹೀನಾಯ ಸೋಲನ್ನು ಕಾಣಬೇಕಾಯಿತು.
ಆಫ್ಘಾನಿಸ್ಥಾನ ಕೂಡ ಬಲಿಷ್ಠ ಸ್ಪಿನ್‌ ಪಡೆಯನ್ನು ಹೊಂದಿರುವ ತಂಡ. ರಶೀದ್‌ ಖಾನ್‌, ಮೊಹಮ್ಮದ್‌ ನಬಿ ಮತ್ತು ಬೌಲಿಂಗ್‌ ಆರಂಭಿಸುವ ಮುಜೀಬ್‌ ಉರ್‌ ರೆಹಮಾನ್‌ ಅತ್ಯಂತ ಅಪಾಯಕಾರಿಗಳು. ಈ ಸ್ಪಿನ್‌ ತ್ರಿವಳಿಗಳನ್ನು ಎದುರಿಸಿ ನಿಂತರಷ್ಟೇ ಪಾಕಿಸ್ಥಾನದ ಮೇಲುಗೈಯನ್ನು ನಿರೀಕ್ಷಿಸಬಹುದು.

ಪಾಕಿಸ್ಥಾನದ ಬ್ಯಾಟಿಂಗ್‌ ಸರದಿ ಕಾಗದದಲ್ಲಷ್ಟೇ ಬಲಿಷ್ಠ. ಅಂಗಳಕ್ಕಿಳಿದಾಗ ಎಂದಿನ ಜೋಶ್‌ ಕಂಡುಬಂದಿಲ್ಲ. ಅದರಲ್ಲೂ ಭಾರತದೆದುರಿನ ಅಹ್ಮದಾ ಬಾದ್‌ ಪಂದ್ಯವನ್ನು ನರ್ವಸ್‌ ಆಗಿಯೇ ಕಳೆದುಕೊಂಡಂತಿತ್ತು. ಮುಖ್ಯವಾಗಿ ನಾಯಕ ಬಾಬರ್‌ ಆಜಂ ಅವರಿಂದಲೇ ನಾಯಕನ ಆಟ ಹೊರಹೊಮ್ಮುತ್ತಿಲ್ಲ. ಅಬ್ದುಲ್ಲ ಶಫೀಕ್‌-ಇಮಾಮ್‌ ಉಲ್‌ ಹಕ್‌ ಜೋಡಿಯ ಆರಂಭ ಪರಿಣಾಮಕಾರಿಯಲ್ಲ. ಮಧ್ಯಮ ಕ್ರಮಾಂಕದಲ್ಲಿ ಪ್ರತೀ ಸಲವೂ ಮೊಹಮ್ಮದ್‌ ರಿಜ್ವಾನ್‌ ಆಪತಾºಂಧವನ ಪಾತ್ರ ವಹಿಸಬೇಕಿದೆ. 294 ರನ್‌ ಮಾಡಿರುವ ರಿಜ್ವಾನ್‌ ಪಾಕ್‌ ತಂಡದ ಟಾಪ್‌ ಸ್ಕೋರರ್‌ ಆಗಿದ್ದಾರೆ. ಸೌದ್‌ ಶಕೀಲ್‌, ಇಫ್ತಿಕಾರ್‌ ಅಹ್ಮದ್‌ ಇನ್ನಷ್ಟು ಆತ್ಮವಿಶ್ವಾಸದಿಂದ ಆಡಬೇಕಿದೆ.
ಪಾಕಿಸ್ಥಾನದ ಬೌಲಿಂಗ್‌ ವಿಭಾಗ ಈ ಕೂಟದಲ್ಲಿ ಪರದಾಡುತ್ತಿದೆ. ಆಸ್ಟ್ರೇಲಿಯ ವಿರುದ್ಧದ ಬೆಂಗಳೂರು ಪಂದ್ಯದಲ್ಲಿ ಆರಂಭಿಕ ಜೋಡಿಯನ್ನು ಬೇರ್ಪಡಿಸಲಿಕ್ಕೇ 34 ಓವರ್‌ ತೆಗೆದುಕೊಂಡದ್ದು ತಂಡಕ್ಕೆ ಎದುರಾದ ದೊಡ್ಡ ಹಿನ್ನಡೆ. ಅನಂತರ ಎಡಗೈ ಪೇಸರ್‌ ಶಾಹೀನ್‌ ಶಾ ಅಫ್ರಿದಿ 5 ವಿಕೆಟ್‌ ಕೆಡವಿದರೂ ಆಗಲೇ ಆಸೀಸ್‌ ಮೊತ್ತ ಬೆಟ್ಟದಷ್ಟಾಗಿತ್ತು.

ಅಫ್ಘಾನ್‌ಗೆ ಹೋಲಿಸಿದರೆ ಪಾಕಿಸ್ಥಾನದ ಸ್ಪಿನ್‌ ವಿಭಾಗ ನಿಜಕ್ಕೂ ದುರ್ಬಲ. ಮೊಹ್ಮಮದ್‌ ನವಾಜ್‌, ಶದಾಬ್‌ ಖಾನ್‌, ಉಸಾಮ ಮಿರ್‌ ಈವರೆಗೆ ಯಾವುದೇ ಪ್ರಭಾವ ಬೀರಿಲ್ಲ. ಆಲ್‌ರೌಂಡರ್‌ ಕೂಡ ಆಗಿರುವ ಶದಾಬ್‌ ವಿಶ್ವಕಪ್‌ ಹೊತ್ತಿಗೆ ಸರಿಯಾಗಿ ಕೈಕೊಟ್ಟಿದ್ದಾರೆ. ಹೀಗಾಗಿ ಆಸೀಸ್‌ ವಿರುದ್ಧ ಸ್ಥಾನವನ್ನೂ ಕಳೆದುಕೊಳ್ಳಬೇಕಾಯಿತು. ಇವರ ಬದಲು ಬಂದ ಮಿರ್‌ ಅವರಿಗೆ ಪದಾರ್ಪಣ ಪಂದ್ಯವೇ ದುಃಸ್ವಪ್ನವಾಗಿ ಕಾಡಿತು.

Advertisement

ಪಾಕ್‌ ವಿರುದ್ಧ 7 ಸೋಲು
ಅಫ್ಘಾನಿಸ್ಥಾನ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ಗೆ ಆಘಾತವಿಕ್ಕಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ತಂಡ. ಆದರೆ ಅನಂತರ ನ್ಯೂಜಿಲ್ಯಾಂಡ್‌ ವಿರುದ್ಧ ಇವರ ಆಟ ನಡೆದಿರಲಿಲ್ಲ. ಮುಖ್ಯವಾಗಿ ಬ್ಯಾಟಿಂಗ್‌ ವಿಭಾಗಕ್ಕೆ ಸ್ಥಿರತೆ ತುಂಬಬೇಕಾದ ಕೆಲಸ ಆಗಬೇಕಿದೆ. ಇಲ್ಲಿ ಗುರ್ಬಜ್‌-ಜದ್ರಾನ್‌, ಶಾ, ಶಾಹಿದಿ, ಒಮರ್‌ಜಾಯ್‌, ಅಲಿಖೀಲ್‌ ಮೊದಲಾದ ಪ್ರತಿಭಾನ್ವಿತರಿದ್ದಾರೆ. ಇವರಲ್ಲಿ ಕೆಲವರಾದರೂ ಪಾಕ್‌ ದಾಳಿಯನ್ನು ಎದುರಿಸಿ ನಿಂತು ದೊಡ್ಡ ಜತೆಯಾಟ ನಡೆಸುವುದು ಮುಖ್ಯ.

ಇಲ್ಲಿ ಇನ್ನೊಂದು ಸಂಗತಿ ಇದೆ. ಅಫ್ಘಾನಿಸ್ಥಾನ ಈವರೆಗೆ ಏಕದಿನದಲ್ಲಿ ಪಾಕಿಸ್ಥಾನ ವಿರುದ್ಧ ಜಯ ಸಾಧಿಸಿಲ್ಲ. ಆಡಿದ ಏಳೂ ಪಂದ್ಯಗಳಲ್ಲಿ ಸೋತಿದೆ. ಇದರಲ್ಲಿ ಒಂದು ವಿಶ್ವಕಪ್‌ ಪಂದ್ಯವೂ ಸೇರಿದೆ. ಈ ಸೋಲಿನ ಸರಪಳಿಯನ್ನು ತುಂಡರಿಸಲು ಅಫ್ಘಾನ್‌ಗೆ ಸಾಧ್ಯವಾದೀತೇ ಎಂಬುದು ಇಲ್ಲಿನ ಮುಖ್ಯ ಪ್ರಶ್ನೆ.

 ಆರಂಭ: ಅ. 2.00
 ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next