Advertisement

ಪಾಕಿಗೆ ವಿಶ್ವಕಪ್‌ ಬಹಿಷ್ಕಾರ: ಬಿಸಿಸಿಐ ನಿರ್ಣಯವಿಲ್ಲ

12:30 AM Feb 23, 2019 | Team Udayavani |

ಹೊಸದಿಲ್ಲಿ: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ಥಾನ ವಿರುದ್ಧದ ವಿಶ್ವಕಪ್‌ ಕ್ರಿಕೆಟ್‌ ಪಂದ್ಯ ಬಹಿಷ್ಕರಿಸಬೇಕೆಂಬ ಒತ್ತಾಯದ ಬಗ್ಗೆ ಬಿಸಿಸಿಐ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಶುಕ್ರವಾರ ಬಿಸಿಸಿಐ ಆಡಳಿತಾಧಿಕಾರಿಗಳ ಸಭೆ ನಡೆದರೂ ಪಾಕ್‌ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಲೀ, ಪಾಕಿಸ್ಥಾನವನ್ನೇ ಒಟ್ಟಾರೆ ವಿಶ್ವಕಪ್‌ನಿಂದ ಬಹಿಷ್ಕರಿಸಬೇಕೆಂಬ ಬೇಡಿಕೆಯ ಬಗ್ಗೆಯಾಗಲೀ ಏನೂ ನಿರ್ಧಾರವಾಗಲಿಲ್ಲ. ಬದಲಿಗೆ ಕೇಂದ್ರ ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಮುಖ್ಯ ಆಡಳಿತಾಧಿಕಾರಿ ವಿನೋದ್‌ ರಾಯ್‌ ತಿಳಿಸಿದ್ದಾರೆ.

Advertisement

ಆದರೆ ಐಸಿಸಿಗೆ ಇ-ಮೇಲ್‌ ಮಾಡಿರುವ ಬಿಸಿಸಿಐ, ಮುಂದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಭಾರತೀಯ ಅಭಿಮಾನಿಗಳು, ಕ್ರಿಕೆಟಿಗರು, ಪಂದ್ಯದ ಸಿಬಂದಿಗೆ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಹೇಳಿದೆ. ಅಷ್ಟು ಮಾತ್ರವಲ್ಲ, ಭಯೋತ್ಪಾದನೆಯನ್ನು ಪೋಷಿಸುವ ಯಾವುದೇ ರಾಷ್ಟ್ರಗಳೊಂದಿಗೆ ಕ್ರಿಕೆಟ್‌ ಸಂಬಂಧಗಳನ್ನು ಕಡಿದುಕೊಳ್ಳಬೇಕೆಂದು ಐಸಿಸಿ ಮತ್ತು ಅದರ ಸದಸ್ಯ ರಾಷ್ಟ್ರಗಳಿಗೆ ಆಗ್ರಹಿಸುವುದಾಗಿ ವಿನೋದ್‌ ರಾಯ್‌ ತಿಳಿಸಿದ್ದಾರೆ. ಫೆ. 26ರಿಂದ ಮಾ. 2ರ ವರೆಗೆ ಐಸಿಸಿ ಸಭೆ ನಡೆಯಲಿದೆ. ಈ ವೇಳೆ ವಿನೋದ್‌ ರಾಯ್‌, ಐಸಿಸಿಗೆ ಆಗ್ರಹಿಸುವ ನಿರೀಕ್ಷೆಯಿದೆ.

ಸರಕಾರದ ನಿರ್ಣಯಕ್ಕೆ ಬದ್ಧ
ಪಾಕಿಸ್ಥಾನ ವಿರುದ್ಧ ವಿಶ್ವಕಪ್‌ ಕ್ರಿಕೆಟ್‌ ಬಹಿಷ್ಕರಿಸಬೇಕೆಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಕೂಡ ಹೇಳಿದ್ದಾರೆಂಬ ವರದಿಗಳಿಗೆ ಪ್ರತಿಕ್ರಿಯಿಸಲು ವಿನೋದ್‌ ರಾಯ್‌ ನಿರಾಕರಿಸಿದ್ದಾರೆ. ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಇನ್ನೂ ನಮ್ಮ ಮುಂದೆ 3 ತಿಂಗಳು ಬಾಕಿಯಿದೆ. ಈ ಬಗ್ಗೆ ಸರಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೋ, ಅದಕ್ಕೆ ನಾವು ಬದ್ಧವಾಗಿರುತ್ತೇವೆ ಎಂದು ವಿನೋದ್‌ ಹೇಳಿದ್ದಾರೆ.

ಪಾಕಿಸ್ಥಾನ ವಿರುದ್ಧ ವಿಶ್ವಕಪ್‌ ಕ್ರಿಕೆಟ್‌ ಆಡದಿರುವ ಬಗ್ಗೆ ಬಿಸಿಸಿಐ ಪದಾಧಿಕಾರಿಗಳಿಗೆ ಒಳಗೊಳಗೇ ಭೀತಿಯಿದೆ ಎನ್ನಲಾಗಿದೆ. ಬಿಸಿಸಿಐಗೆ ಐಸಿಸಿಯಲ್ಲಿ ಬಹುಮತವಿಲ್ಲ. ಭಾರತೀಯ ಶಶಾಂಕ್‌ ಮನೋಹರ್‌ ಅವರೇ ಐಸಿಸಿ ಮುಖ್ಯಸ್ಥರಾಗಿದ್ದರೂ ಅವರಿಗೆ ಐಸಿಸಿಯಲ್ಲಿ ಗರಿಷ್ಠ  ಬೆಂಬಲವಿದೆ. ಒಂದು ವೇಳೆ ಪಾಕಿಸ್ಥಾನವನ್ನು ವಿಶ್ವಕಪ್‌ನಿಂದ ಬಹಿಷ್ಕರಿಸುವ ನಿರ್ಣಯ ಮಂಡಿಸಿದರೂ ಐಸಿಸಿಯಲ್ಲಿ ಭಾರತಕ್ಕೆ ಸೋಲಾಗಲಿದೆ.ಅಲ್ಲದೇ ಪಾಕಿಸ್ಥಾನವನ್ನು ಬಹಿಷ್ಕರಿಸಿ ಎಂಬ ನಿರ್ಣಯ ತೆಗೆದುಕೊಂಡರೆ, 2021ರ ಚಾಂಪಿಯನ್ಸ್‌ ಟ್ರೋಫಿ, 2023ರ ವಿಶ್ವಕಪ್‌ ಆತಿಥ್ಯ ಬಿಸಿಸಿಐಗೆ ಕೈತಪ್ಪುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next