Advertisement
ಅಭದ್ರತೆಯನ್ನು ಕಿತ್ತೆಸೆದ ದ್ರಾವಿಡ್2021ರ ಟಿ20 ವಿಶ್ವಕಪ್ ನಡೆಯುತ್ತಿದ್ದಾಗಲೇ ರಾಹುಲ್ ದ್ರಾವಿಡ್ ಭಾರತ ತಂಡಕ್ಕೆ ಪೂರ್ಣಪ್ರಮಾಣದ ತರಬೇತುದಾರರಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಏಕದಿನ ವಿಶ್ವಕಪ್ ಮುಕ್ತಾಯದವರೆಗೆ ಅವರ ಅವಧಿಯಿದೆ. ಇದಾದ ಅನಂತರವೂ ಅವರೇ ಮುಂದುವರಿಯುತ್ತಾರೆ ಎಂಬ ವರದಿಗಳಿವೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕು. ನವೆಂಬರ್‌ನಲ್ಲಿ ದ್ರಾವಿಡ್ ಮುಖ್ಯ ಕೋಚ್ ಆಗಿ ಆಯ್ಕೆಯಾದರೆ, ಡಿಸೆಂಬರ್‌ನಲ್ಲಿ ರೋಹಿತ್ ಶರ್ಮ ನಾಯಕರಾಗಿ ಆಯ್ಕೆಯಾದರು. ಅಲ್ಲಿಗೆ ಅನಧಿಕೃತವಾಗಿ ರವಿಶಾಸ್ತ್ರಿ -ವಿರಾಟ್ ಕೊಹ್ಲಿ ಜತೆಯಾಟ ಮುಗಿದಿತ್ತು. ಮುಂದೆ ಆರಂಭವಾಗಿದ್ದು ಇಬ್ಬರು ಶಾಂತಸ್ವಭಾವಿಗಳ ಜತೆಯಾಟ. ಆಗ ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಇದ್ದರು. ಎರಡೂ ಕೂಡ ಸೌರವ್ ಗಂಗೂಲಿ ಆಯ್ಕೆಯೇ ಎನ್ನುವುದು ಸ್ಪಷ್ಟ. ಈ ಹಂತದಲ್ಲಿ ವಿರಾಟ್ ಕೊಹ್ಲಿ-ಗಂಗೂಲಿ ಮಧ್ಯೆ ಬಹಿರಂಗವಾಗಿಯೇ ಚಕಮಕಿಗಳು ನಡೆದಿದ್ದವು.
Related Articles
ವಿರಾಟ್ ಕೊಹ್ಲಿ ತಂಡದ ನಾಯಕತ್ವವನ್ನು 2021ರ ಅಂತ್ಯದಲ್ಲಿ ತೊರೆಯುವಾಗ ಅವರ ವೃತ್ತಿಜೀವನವೂ ಮುಗಿಯಿತು ಎಂದೇ ಭಾವಿಸಲಾಗಿತ್ತು. ಅವರು ಎಲ್ಲ ರೀತಿಯಲ್ಲೂ ವಿಫಲ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದರು. ತಂಡದಿಂದ ಅವರನ್ನು ತೆಗೆದು, ಹೊಸಬರಿಗೆ ಮಣೆ ಹಾಕಿ ಎಂಬ ಸ್ವರಗಳೂ ಕೇಳಿಬಂದಿದ್ದವು. ಆ ಹೊತ್ತಿನಲ್ಲಿ ಅವರಿಗೆ ರೋಹಿತ್ ಶರ್ಮ ಮತ್ತು ರಾಹುಲ್ ದ್ರಾವಿಡ್ ಅವರ ಪೂರ್ಣ ಬೆಂಬಲ ಲಭಿಸಿತು. 2022ರ ಟಿ20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಅಜೇಯ 82 ರನ್ ಬಾರಿಸಿ, ಸೋಲುತ್ತಿದ್ದ ತಂಡವನ್ನು ಗೆಲ್ಲಿಸಿದರು. ಅವರ ಆ ಇನಿಂಗ್ಸ್ ಟಿ20 ಇತಿಹಾಸದ ಶ್ರೇಷ್ಠ ಇನಿಂಗ್ಸ್ ಗಳಲ್ಲೊಂದಾಗಿ ದಾಖಲಾಯಿತು. ಅನಂತರ ಸುಧಾರಿಸಿಕೊಳ್ಳುತ್ತಲೇ ವಿರಾಟ್ ಕೊಹ್ಲಿ, ತಾವೀಗ ನಾಯಕರಲ್ಲ ಎಂಬ ನೋವುಗಳನ್ನೆಲ್ಲ ಮರೆತು ತಂಡಕ್ಕಾಗಿ ಆಡಿದರು. ತಂಡಕ್ಕೆ ಯಾವ ಯಾವ ಹೊತ್ತಲ್ಲಿ ಅಗತ್ಯವಿತ್ತೋ ಆಗೆಲ್ಲ ಸಿಡಿದರು. ಈ ವಿಶ್ವಕಪ್‌ನಲ್ಲಿ ಅವರ ತಾಕತ್ತು ಏನೆಂದು ಇಡೀ ವಿಶ್ವವೇ ನೋಡಿದೆ. ಅವರ ತಾಕತ್ತನ್ನು ಅರ್ಥ ಮಾಡಿಸಲು, ಅವರ ಅದ್ಭುತ ಇನಿಂಗ್ಸ್ ಗಳೇ ಸಾಕು, ಅದಕ್ಕೆ ವಿಶೇಷ ಬಣ್ಣನೆಗಳು ಬೇಕಿಲ್ಲ!
Advertisement
ಈ ಬಾರಿ ಕೊಹ್ಲಿ ಏಕದಿನದಲ್ಲಿ ಸಚಿನ್ ತೆಂಡುಲ್ಕರ್ ಮಾಡಿದ್ದ ಹಲವು ವಿಶ್ವದಾಖಲೆಗಳನ್ನು ಮುರಿದರು. ಏಕದಿನದಲ್ಲಿ 50 ಶತಕ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಮೊದಲಿಗ ಎನಿಸಿಕೊಂಡರು. ಸಚಿನ್ ತೆಂಡುಲ್ಕರ್ 49 ಶತಕ ಬಾರಿಸಿದ್ದು ಅಲ್ಲಿಯವರೆಗೆ ವಿಶ್ವದಾಖಲೆಯಾಗಿತ್ತು. ಒಂದೇ ಆವೃತ್ತಿಯಲ್ಲಿ ಗರಿಷ್ಠ ರನ್ ಬಾರಿಸಿದ ವಿಶ್ವದಾಖಲೆಯನ್ನು ನಿರ್ಮಿಸಿದರು. ಇಲ್ಲೂ ಸಚಿನ್ ದಾಖಲೆಯೇ ಪತನವಾಗಿದ್ದು.ಕೊಹ್ಲಿಯಲ್ಲಿ ಗಮನಿಸಲೇಬೇಕಾದ ಸಂಗತಿಯೇನೆಂದರೆ ಅವರು ರೋಹಿತ್ ಶರ್ಮ ಮತ್ತು ರಾಹುಲ್ ದ್ರಾವಿಡ್ ಅವರಿಗೆ ಪೂರ್ಣವಾಗಿ ಹೊಂದಿಕೊಂಡರು. ಕೊಹ್ಲಿ ಸ್ವಭಾವತಃ ಆಕ್ರಮಣಕಾರಿ ಆಟಗಾರ. ದ್ರಾವಿಡ್-ರೋಹಿತ್ ಇದಕ್ಕೆ ವಿರುದ್ಧ ವ್ಯಕ್ತಿತ್ವದವರು, ಬಹಳ ಶಾಂತ. ಇಲ್ಲವರು ಸಮನ್ವಯದ ಕೊರತೆಯಾಗದಂತೆ ಇಬ್ಬರಿಗೂ ನೆರವಾದರು. ತಮ್ಮ ಉತ್ಸಾಹವನ್ನು ಕಳೆದುಕೊಳ್ಳಲಿಲ್ಲ. ಕೇವಲ ದಾಖಲೆಗಾಗಿ ಆಡುವ ಆಟಗಾರ ಎಂಬಂತೆ ವರ್ತಿಸಲಿಲ್ಲ. ತಂಡಕ್ಕಾಗಿ ಏನೆಲ್ಲ ಕೊಡಬಹುದೋ, ಅವನ್ನೆಲ್ಲ ನೀಡಿದರು.
ಕೊಹ್ಲಿಯ ಹೋರಾಟಕಾರಿ ಗುಣ ಇನ್ನೊಂದು ಅದ್ಭುತ. ಅವರು ಎದುರಿಸಿದ ಟೀಕೆಗಳು, ವೈಫಲ್ಯಗಳು, ಮಾನಸಿಕ ಹೊಯ್ದಾಟಗಳು ಸಾಮಾನ್ಯರ ಪಾಲಿಗಾದರೆ ಮಾರಕವೇ ಆಗುತ್ತಿದ್ದವು. ಆದರೆ ಅವರು ತಿರುಗಿಬಿದ್ದು ಮತ್ತೆ ವಿಶ್ವದ ಸರ್ವಶ್ರೇಷ್ಠ ಆಟಗಾರ ಸ್ಥಾನ ಪಡೆದಿದ್ದನ್ನು ಅಸಾಮಾನ್ಯ ಸಾಧನೆ ಎಂದೇ ಹೇಳಬೇಕು. ಬಿಕ್ಕಟ್ಟಿನಲ್ಲಿ ಬೆಳಕಾಗಿದ್ದು ರೋಹಿತ್
ಭಾರತ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮ ನಾಯಕರಾಗಿ ಆಯ್ಕೆಯಾಗಿದ್ದು 2021 ಡಿಸೆಂಬರ್ ತಿಂಗಳಲ್ಲಿ. ಆ ಹೊತ್ತಿನಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿ ಪೂರ್ಣ ಮಸುಕಾಗಿದ್ದರು. ಬ್ಯಾಟರ್ ಆಗಿಯೂ ಸತತ ವೈಫಲ್ಯ ಕಾಣುತ್ತಿದ್ದರು. ಆತ್ಮವಿಶ್ವಾಸವನ್ನೂ ಕಳೆದುಕೊಂಡಿದ್ದರು. ಅಂತಹ ಹೊತ್ತಿನಲ್ಲಿ ಬರೀ ಸೀಮಿತ ಓವರ್‌ಗಳಿಗೆ ರೋಹಿತ್ ನಾಯಕರಾದಾಗ ದೊಡ್ಡ ಹೊಣೆಗಾರಿಕೆಯಿತ್ತು. ರೋಹಿತ್ ಮುಂದೆ ತಂಡವನ್ನು ಮತ್ತೆ ಹಳಿಗೇರಿಸುವ ಜವಾಬ್ದಾರಿಯಿದ್ದಿದ್ದು ಮಾತ್ರವಲ್ಲ, ಎಲ್ಲ ಇದ್ದೂ ಯಾವ ಕಾರಣಕ್ಕೆ ತಂಡ ವಿಫಲವಾಗುತ್ತಿದೆ ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಿತ್ತು. 2022ರ ಜನವರಿಯಲ್ಲಿ ರೋಹಿತ್ ಶರ್ಮ ಮೂರೂ ಮಾದರಿಗೆ ನಾಯಕರಾಗಿ ಆಯ್ಕೆಯಾದರು. ಆಗ ಕೊಹ್ಲಿ ತಾವಾಗಿಯೇ ಟೆಸ್ಟ್ ನಾಯಕತ್ವವನ್ನೂ ತ್ಯಜಿಸಿದ್ದರು. ಈ ಹೊತ್ತಿನಲ್ಲಿ ರೋಹಿತ್‌ಗೆ ಕೊಹ್ಲಿಯನ್ನೂ ಜತೆಗೊಯ್ಯುವ, ಅವರ ಬೆಂಬಲಕ್ಕೆ ನಿಲ್ಲುವ ಅಗತ್ಯವಿತ್ತು. ಮತ್ತೂಂದು ಕಡೆ ಇರುವ ಆಟಗಾರರಿಗೆ ಅಭದ್ರತೆಯುಂಟಾಗದಂತೆ, ಹೊಸಬರಿಗೂ ಅವಕಾಶ ನೀಡಿ ತಂಡವನ್ನು ಮೇಲೆತ್ತುವ ಗುರುತರ ಹೊಣೆಯೂ ಇತ್ತು. ಆರಂಭದಲ್ಲಿ ರೋಹಿತ್ ಇದರಲ್ಲಿ ಯಶಸ್ಸು ಕಂಡುಕೊಳ್ಳಲಿಲ್ಲ. 2022ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ನಾಯಕತ್ವದಲ್ಲೇ ಭಾರತ ಸೆಮಿಫೈನಲ್‌ನಲ್ಲಿ ಹೀನಾಯವಾಗಿ ಸೋತುಹೋಗಿತ್ತು. ಅದೂ ಸಾಲದೆಂಬಂತೆ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಮುಗ್ಗರಿಸಿತು. ಏಷ್ಯಾ ಕಪ್‌ನಿಂದ ಬದಲಾಯ್ತು ಚಹರೆ: ರೋಹಿತ್ ಬ್ಯಾಟಿಂಗ್‌ನಲ್ಲಿ ಕೂಡ ಹಿಡಿತ ಕಳೆದುಕೊಂಡಿದ್ದರು. ಐಪಿಎಲ್‌ನಲ್ಲಿ ಅವರ ನಾಯಕತ್ವದ ಮುಂಬಯಿ ಇಂಡಿಯನ್ಸ್ ವಿಫಲವಾಯಿತು. ಹೀಗಾಗಿ ರೋಹಿತ್ ಭವಿಷ್ಯದ ಬಗ್ಗೆಯೇ ಪ್ರಶ್ನೆಗಳಿದ್ದವು. ಅದೇ ಹೊತ್ತಿನಲ್ಲಿ ಟಿ20 ತಂಡಕ್ಕೆ ಹಾರ್ದಿಕ್ ಪಾಂಡ್ಯರನ್ನು ನಾಯಕರನ್ನಾಗಿ ನೇಮಿಸಲಾಯಿತು. ಆಗ ಅವರೇ ಪೂರ್ಣಪ್ರಮಾಣದ ಭವಿಷ್ಯದ ನಾಯಕ ಎಂಬ ಸುಳಿವನ್ನೂ ಸ್ಪಷ್ಟವಾಗಿ ನೀಡಲಾಗಿತ್ತು. ರೋಹಿತ್ ಅವರ ಬಗ್ಗೆ ಮತ್ತೆ ಅಭಿಪ್ರಾಯಗಳು ಬದಲಾಗಿದ್ದು ಸೆಪ್ಟಂಬರ್ ತಿಂಗಳಲ್ಲಿ ನಡೆದ ಏಕದಿನ ಏಷ್ಯಾಕಪ್‌ನಲ್ಲಿ. ಎಲ್ಲ ತಂಡಗಳನ್ನು ಹೀನಾಯವಾಗಿ ಹೊಸಕಿ ಹಾಕಿದ ಭಾರತ ಅಂತಿಮ ಪಂದ್ಯದಲ್ಲಿ ಲಂಕಾವನ್ನು 50 ರನ್‌ಗಳಿಗೆ ಆಲೌಟ್ ಮಾಡಿ, 10 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಅಲ್ಲಿ ರೋಹಿತ್ ನಾಯಕತ್ವದ ಸಾಮರ್ಥ್ಯ ಸ್ಪಷ್ಟವಾಗಿ ಗೋಚರವಾಯಿತು.
ಪ್ರಸ್ತುತ ವಿಶ್ವಕಪ್‌ನ ಸೆಮಿಫೈನಲ್ ಹಂತದವರೆಗೂ ಭಾರತ ಸಾಧಿಸಿದ್ದೆಲ್ಲ ಏಕಪಕ್ಷೀಯ ಜಯಗಳೇ. ಎದುರಾಳಿಗಳನ್ನು ಸಂಪೂರ್ಣವಾಗಿ ಹೊಸಕಿಹಾಕಿದೆ ಎಂದರೆ ಅದನ್ನು ಉತ್ಪ್ರೇಕ್ಷೆ ಎನ್ನಲು ಸಾಧ್ಯವೇ ಇಲ್ಲ. ಇಲ್ಲಿ ರೋಹಿತ್ ನಾಯಕತ್ವದ ಸಾಮರ್ಥ್ಯ ಖಚಿತವಾಯಿತು. ಕೊಹ್ಲಿ ಭರ್ಜರಿ ಲಯಕ್ಕೆ ಮರಳಿದರು. ಇಡೀ ತಂಡ ಒಗ್ಗೂಡಿ ಏಕಮನಸ್ಸಿನಿಂದ ಆಡಿತು. ಹಾರ್ದಿಕ್ ಪಾಂಡ್ಯ ಕಾಲನ್ನು ಉಳುಕಿಸಿಕೊಂಡು ಅರ್ಧದಲ್ಲೇ ಹೊರಬಿದ್ದಿದ್ದು ತಂಡಕ್ಕೆ ಆಘಾತಕಾರಿಯೇ ಆಗಿದ್ದರೂ ಅದನ್ನು ಇತರೆ ಆಟಗಾರರು ನಿಭಾಯಿಸಿದರು. ಒಂದು ತಂಡ ಹೀಗೆ ಏಕಮನಸ್ಸಿನಿಂದ ಆಡಬೇಕಾದರೆ ಅಲ್ಲಿ ನಾಯಕನ ಸಾಮರ್ಥ್ಯ ದೊಡ್ಡ ಪರಿಣಾಮ ಬೀರುತ್ತದೆ. ಅದರಲ್ಲಿ ರೋಹಿತ್ ಯಶಸ್ವಿಯಾಗಿದ್ದಾರೆ. ಮುಖ್ಯವಾಗಿ ರೋಹಿತ್ ನಾಯಕತ್ವದಲ್ಲಿ ಯಾವುದೇ ಆಟಗಾರ ಅಭದ್ರತೆಯನ್ನು ಎದುರಿಸಲಿಲ್ಲ. ಆರ್.ಅಶ್ವಿನ್ ವಿಶ್ವಕಪ್‌ನಲ್ಲಿ ಆಡುವುದು ಸಾಧ್ಯವೇ ಇಲ್ಲ ಎಂಬ ಮಾತುಗಳಿದ್ದರೂ, ಅವರು ಅಂತಿಮಹಂತದಲ್ಲಿ ತಂಡಕ್ಕೆ ಆಯ್ಕೆಯಾದರು. ಅದಕ್ಕೆ ಕಾರಣ ಅಕ್ಷರ್ ಪಟೇಲ್ ಏಷ್ಯಾ ಕಪ್ ವೇಳೆ ಗಾಯಗೊಂಡಿದ್ದು. ಈ ಕೂಟದಲ್ಲಿ ಅಶ್ವಿನ್‌ಗೆ ಆರಂಭದ ಒಂದು ಪಂದ್ಯ ಬಿಟ್ಟರೆ ಮತ್ತೆ ಸೆಮಿಫೈನಲ್‌ವರೆಗೆ ಆಡಲು ಅವಕಾಶ ಸಿಗಲಿಲ್ಲ. ಹಾಗಂತ ಅಶ್ವಿನ್ ಬೇಸರಿಸಲಿಲ್ಲ. ಇಶಾನ್ ಕಿಶನ್ ಬಹುತೇಕ ಹೊರಗೇ ಉಳಿದರು. ಅವರೂ ನೊಂದುಕೊಳ್ಳಲಿಲ್ಲ. ತಂಡ ಸೂರ್ಯಕುಮಾರ್ ಯಾದವ್ ಸಾಮರ್ಥ್ಯದ ಮೇಲೆ ನಂಬಿಕೆಯಿರಿಸಿತು. ಅದನ್ನು ಅವರು ಉಳಿಸಿಕೊಂಡರು. ಲಯ ಕಳೆದುಕೊಂಡಿದ್ದ ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್ ಮೇಲೆ ಇಟ್ಟ ನಂಬಿಕೆ ಉಪಯೋಗಕ್ಕೆ ಬಂತು. ಅರ್ಥಾತ್ ಪ್ರತೀ ಆಟಗಾರರು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರು. ತಂಡದ ಜತೆಗೆ ನಿಂತರು. ಆಟಗಾರರಲ್ಲಿನ ಪೂರ್ಣ ಸಾಮರ್ಥ್ಯ ಹೊರತೆಗೆದಿದ್ದು ರೋಹಿತ್ ಒಬ್ಬ ಪಕ್ವ ನಾಯಕ ಎಂಬುದಕ್ಕೆ ಸಾಕ್ಷಿ.