Advertisement

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

05:58 AM Dec 27, 2024 | Team Udayavani |

ಡಾ. ಮನಮೋಹನ್‌ ಸಿಂಗ್‌ ಅವರನ್ನು ಪರಿಸ್ಥಿತಿಯ ಕೈಗೊಂಬೆ, ಅಪಘಾತದ ಪ್ರಧಾನಿ ಅಥವಾ ಸೈಲೆಂಟ್‌ ಪ್ರಧಾನಿ ಎಂಬ ಟೀಕೆಗಳಿವೆ. ಇದೆಲ್ಲದರ ನಡುವೆಯೂ ಡಾ. ಮನಮೋಹನ್‌ ಸಿಂಗ್‌ ಅವರನ್ನು ದೇಶ ಕಂಡ ಅತ್ಯುತ್ತಮ ಪ್ರಧಾನಿಗಳಲ್ಲೊಬ್ಬರು ಎಂದು ಹಲವಾರು ತಜ್ಞರು ಪರಿಗಣಿಸಿದ್ದಾರೆ. 1991ರಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸುವಲ್ಲಿ ತಾವೇ ಬರೆದಿದ್ದ ಮೊದಲ ಅಧ್ಯಾಯವನ್ನು 2004ರಿಂದ 2014ರವರೆಗಿನ ಅವಧಿಯಲ್ಲಿ ತಾವೇ ಪ್ರಧಾನಿಯಾದಾಗ ಮುಂದುವರಿಸಿದ್ದರು.

Advertisement

ಯುಪಿಎ-1 ಅವಧಿಯಲ್ಲಿ ಅವರದ್ದು ಕಳಂಕ ರಹಿತ ಆಡಳಿತ. ಆಗ ಜಿಡಿಪಿಯು ಶೇ. 8ರಿಂದ 9ರ ಗಡಿ ಮುಟ್ಟಿತ್ತು. ಅದರಲ್ಲೂ ವಿಶೇಷವಾಗಿ ಶೇ.9 ಮುಟ್ಟಿದಾಗ ಭಾರತ, ಇಡೀ ವಿಶ್ವದಲ್ಲಿ ಚೀನ ನಂತರ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಮಾಹಿತಿ ಹಕ್ಕು ಕಾಯ್ದೆ, ಆಹಾರ ಶಿಕ್ಷಣ ಹಕ್ಕು ಕಾಯ್ದೆ, ನರೇಗಾ, ಮೊಬೈಲ್‌ ಪೋರ್ಟಬಲಿಟಿ ಸೌಲಭ್ಯ ಇತ್ಯಾದಿ ಯೋಜನೆ ಜಾರಿ ಮಾಡಿದ ಹೆಗ್ಗಳಿಕೆ ಅವರದ್ದು.

ವಿಶೇಷ ಆರ್ಥಿಕ ವಲಯಗಳ ಕಾಯ್ದೆ
ದೇಶೀಯ ಕೈಗಾರಿಕಾ ರಂಗಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರೂಪಿಸಲಾದ ಕಾಯ್ದೆಯಿದು. ಇದಕ್ಕೆ 2005ರ ಜೂನ್‌ 23ರಂದು ರಾಷ್ಟ್ರಪತಿಯವರ ಅಂಕಿತ ದೊರಕಿತು. 2006ರ ಫೆ. 10ರಂದು ಇದು ನಿಯಮವಾಗಿ ಜಾರಿಗೊಂಡಿತು. ವಿಶೇಷ ಆರ್ಥಿಕ ವಲಯಗಳನ್ನು ರೂಪಿಸುವ, ಕೈಗಾರಿಕಾ ಬೆಳವಣಿಗೆಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಯಮಗಳನ್ನು ಜಾರಿಗೆ ತರಲಾಯಿತು. ಮುಕ್ತ ಮಾರುಕಟ್ಟೆಯನ್ನಾಗಿಸಿದ ನಂತರ ದೇಶದ ಆರ್ಥಿಕ ವ್ಯವಸ್ಥೆಯನ್ನು ಮತ್ತಷ್ಟು ಮೇಲೆತ್ತಲು ಕೈಗೊಂಡ ಮತ್ತೂಂದು ಪ್ರಮುಖ ನಿರ್ಧಾರವಿದು.

ಆಹಾರ ಭದ್ರತೆ ಕಾಯ್ದೆ
ದೇಶದ ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ನೀಡುವ ಕಾಯ್ದೆಯೇ ಆಹಾರ ಭದ್ರತಾ ಕಾಯ್ದೆ (ಆಹಾರ ಹಕ್ಕು ಕಾಯ್ದೆ). 2013ರ ಸೆ. 12ರಂದು ಇದಕ್ಕೆ ರಾಷ್ಟ್ರಪತಿ ಅಂಕಿತ ದೊರಕಿತು. ದೇಶದ 120 ಕೋಟಿ ಜನರಿಗೆ ಇದರ ಲಾಭ ದೊರಕಿತು. ನಗರ ಪ್ರದೇಶಗಳಲ್ಲಿನ ಶೇ. 50 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಶೇ. 75ರಷ್ಟು ಜನರು ಈ ಯೋಜನೆಯ ಪ್ರಯೋಜನ ಪಡೆದರು.

ಮಧ್ಯಾಹ್ನದ ಬಿಸಿಯೂಟ, ಮಕ್ಕಳ ಅಭಿವೃದ್ಧಿಯ ಅಂತರ್ಗತ ಸೇವೆಗಳು, ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯನ್ನು ಈ ಕಾಯ್ದೆಯ ವ್ಯಾಪ್ತಿಯೊಳಗೆ ತರಲಾಯಿತು. ಈ ಯೋಜನೆಯಡಿ, ಪ್ರತಿ ಬಡ ವ್ಯಕ್ತಿಗೆ ಐದು ಕೆಜಿಯಷ್ಟು ಧವಸ-ಧಾನ್ಯಗಳನ್ನು ರಿಯಾಯಿತಿ ದರದಲ್ಲಿ ಜಾರಿಗೊಳಿಸಲಾಯಿತು. 3 ಕೆಜಿ ಅಕ್ಕಿ (ಪ್ರತಿ ಕಿಲೋಗೆ 3 ರೂ.), 2 ಕೆಜಿ ಗೋಧಿ (ಪ್ರತಿ ಕಿಲೋಗೆ 2.80 ರೂ.) ಹಾಗೂ 1 ಕೆಜಿ ದ್ವಿದಳ ಧಾನ್ಯಗಳು (ಪ್ರತಿ ಕಿಲೋಗೆ 1.40 ರೂ.) ಪದ್ಧತಿಯನ್ನು ಜಾರಿಗೊಳಿಸಲಾಯಿತು. ಗರ್ಭಿಣಿಯರಿಗೆ, ಬಾಣಂತಿಯರಿಗೆ ದಿನಂಪ್ರತಿ ಉಚಿತ ಧಾನ್ಯ ವಿತರಣೆಯನ್ನು ಇದೇ ನಿಯಮಗಳಿಗೆ ಸೇರಿಸಲಾಯಿತು.

Advertisement

ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)
ಗುಣಮಟ್ಟದ ಶಿಕ್ಷಣವನ್ನು ಹೊಂದುವುದು ದೇಶದ ಎಲ್ಲಾ ಮಕ್ಕಳ ಹಕ್ಕು ಎಂಬುದನ್ನು ಪ್ರತಿಪಾದಿಸಿ, 2009ರ ಆ. 4ರಂದು ಜಾರಿಗೊಳಿಸಲಾದ ಕಾಯ್ದೆಯಿದು. 6ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣವು ಕಡ್ಡಾಯವಾಗಿ ಹಾಗೂ ಉಚಿತವಾಗಿ ಇರಬೇಕೆಂಬ ನಿಯಮವನ್ನು ಜಾರಿಗೊಳಿಸಲಾಯಿತು. 2010ರ ಏ. 1ರಂದು ಈ ಕಾಯ್ದೆ ಭಾರತದಲ್ಲಿ ಜಾರಿಗೆ ಬಂತು.

ಆ ಮೂಲಕ, ಶಿಕ್ಷಣವನ್ನು ಮಕ್ಕಳ ಮೂಲಭೂತ ಹಕ್ಕು ಎಂದು ಪರಿಗಣಿಸಿದ ರಾಷ್ಟ್ರಗಳಲ್ಲಿ ಭಾರತ 135ನೇ ರಾಷ್ಟ್ರವಾಗಿ ರೂಪುಗೊಂಡಿತು. ಈ ಕಾಯ್ದೆಯ ಜಾರಿಯಿಂದಾಗಿ, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಖಾಸಗಿ ಶಾಲೆಗಳಲ್ಲಿ ಶೇ. 25ರಷ್ಟು ಸೀಟುಗಳನ್ನು ಬಡಮಕ್ಕಳಿಗೆ ಮೀಸಲಾಗಿಡುವ ನಿಯಮ ಜಾರಿಗೊಂಡಿತು. ಬಡ ಮಕ್ಕಳು ಖಾಸಗಿ ಶಾಲೆಗಳಿಗೆ ಮೀಸಲಾತಿ ಆಧಾರದಲ್ಲಿ ದಾಖಲಾಗಲು ಅವಕಾಶ ಸಿಕ್ಕಿತು. ಆ ಮೂಲಕ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅನುಕೂಲವಾಯಿತು. ಇದರ ಜೊತೆಯಲ್ಲೇ, ಅನಧಿಕೃತ ಶಾಲೆಗಳನ್ನು ಗುರುತಿಸುವ, ಖಾಸಗಿ ಶಾಲೆಗಳಲ್ಲಿ ಕ್ಯಾಪಿಟೇಷನ್‌ ಹಾಗೂ ಡೊನೇಷನ್‌ ಹಾವಳಿಯಿಂದ ಬಡ ಮಕ್ಕಳನ್ನು ರಕ್ಷಿಸಲು ಅನುಕೂಲವಾಯಿತು.

ಉದ್ಯೋಗ ಖಾತ್ರಿ ಯೋಜನೆ
ಇದರ ಪೂರ್ಣ ಹೆಸರು ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿಯ ರಾಷ್ಟ್ರೀಯ ಯೋಜನೆ. ಇದು ಹಳ್ಳಿಗಾಡಿನ ಜನತೆಗೆ ಪ್ರತಿ ವರ್ಷ ಕನಿಷ್ಟ ನೂರು ದಿನಗಳ ಉದ್ಯೋಗ ಖಾತ್ರಿಯನ್ನು ನೀಡುವ ಯೋಜನೆಯನ್ನು ಒಳಗೊಂಡಿದೆ. ಆ ಮೂಲಕ, ಬಡವರಿಗೆ, ಆರ್ಥಿಕ ದುರ್ಬಲರಿಗೆ, ಕೌಶಲ್ಯ ರಹಿತರ ದುಡಿಮೆಗೆ ದಾರಿ ಕಲ್ಪಿಸುವುದರ ಜೊತೆಗೆ, ಗ್ರಾಮೀಣಾಭಿವೃದ್ಧಿಗೂ ಮಹತ್ವದ ಯೋಗದಾನ ನೀಡುತ್ತದೆ. 2006ರ ಫೆ. 2ರಂದು ಇದನ್ನು ದೇಶದ 200 ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು. 2008ರ ಏಪ್ರಿಲ್‌ನ ನಂತರ ಇದನ್ನು ಹಲವು ಹಳ್ಳಿಗಳಿಗೆ ವಿಸ್ತರಿಸಲಾಯಿತು. ಅಲ್ಲಿಂದ ಮುಂದಕ್ಕೆ ಹಂತಹಂತವಾಗಿ ಇದನ್ನು ದೇಶವ್ಯಾಪಿಗೊಳಿಸಲಾಗಿದೆ. ಇದನ್ನು ಭಾರತದ ಕಾರ್ಮಿಕ ಕಾನೂನುಗಳಲ್ಲೊಂದು ಎಂದೇ ಪರಿಗಣಿಸಲಾಗಿದೆ.

ನಗರ  ಅಭಿವೃದ್ಧಿಗೆ ನರ್ಮ್ ಯೋಜನೆ
ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ದೇಶದ ಎಲ್ಲಾ ನಗರಗಳನ್ನು ಆಧುನೀಕರಣಗೊಳಿಸುವ ಉದ್ದೇಶದಿಂದ ಜಾರಿಗೆ ತರಲಾದ ಯೋಜನೆಯಿದು. ನಗರದ ಜನರ ಜೀವನಮಟ್ಟವನ್ನು ಅದರಲ್ಲೂ ಮುಖ್ಯವಾಗಿ ನಗರಗಳಲ್ಲಿ ವಾಸಿಸುತ್ತಿರುವ ಬಡವರ ಜೀವನವನ್ನು ಸುಧಾರಿಸುವುದು ಹಾಗೂ ಆ ನಗರದಲ್ಲಿ ಇರುವ ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವುದು ಇದರ ಗುರಿ. ಈ ಕಾಯಕವನ್ನು ಏಳು ವರ್ಷಗಳೊಳಗೆ ಮಾಡುವ ಗಡುವನ್ನು ವಿಧಿಸಿಕೊಂಡಿದ್ದ ಸರ್ಕಾರ, ಅದಕ್ಕಾಗಿ 20 ಬಿಲಿಯನ್‌ ಡಾಲರ್‌ ಮೊತ್ತವನ್ನು ನಿಗದಿಗೊಳಿಸಲಾಗಿತ್ತು. 2005ರ ಡಿ. 3ರಂದು ಈ ಯೋಜನೆಯನ್ನು ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಉದ್ಘಾಟಿಸಿದ್ದರು.

ಸರ್ವ ಶಿಕ್ಷಣ ಅಭಿಯಾನಕ್ಕೆ ಶಕ್ತಿ
ಕಾಂಗ್ರೆಸ್‌ ಸರ್ಕಾರದ ಎರಡು ಪ್ರಮುಖ ಯೋಜನೆಗಳಾದ ಸರ್ವ ಶಿಕ್ಷಣ ಅಭಿಯಾನ ಹಾಗೂ ಮಧ್ಯಾಹ್ನದ ಬಿಸಿಯೂಟ ಯೋಜನೆಗಳನ್ನು 2006ರಲ್ಲಿ ಡಾ. ಮನಮೋಹನ್‌ ಸಿಂಗ್‌ ಪರಾಮರ್ಶೆ ಮಾಡಿದರು. ಅದರಲ್ಲಿ, 2004ರಿಂದ 2006ರ ಅವಧಿಯಲ್ಲಿ ಶಾಲೆಯನ್ನು ಅರ್ಧದಲ್ಲೇ ಬಿಟ್ಟ ಮಕ್ಕಳ ಸಂಖ್ಯೆ 2.5 ಕೋಟಿಯಿಂದ 96 ಲಕ್ಷಕ್ಕೆ ಇಳಿಕೆಯಾಗಿದ್ದನ್ನು ಮನಗಾಣಲಾಯಿತು. ಇದರಿಂದ ಉತ್ಸಾಹಗೊಂಡ ಡಾ. ಮನಮೋಹನ್‌ ಸಿಂಗ್‌ ಅವರು , ಸರ್ವ ಶಿಕ್ಷಣ ಅಭಿಯಾನ ಯೋನಜೆಗೆ ತತ್ತಷ್ಟು ಶಕ್ತಿಯನ್ನು ತುಂಬಿ, ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತದ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸುವತ್ತ ಹೆಜ್ಜೆ ಇಡುವಂತೆ ಸೂಚಿಸಿದರು. ಇದರ ಫ‌ಲವಾಗಿ, ಸರ್ಕಾರಿ ಶಾಲೆಗಳಲ್ಲಿನ ಬೋಧನಾ ಗುಣಮಟ್ಟ ಹೆಚ್ಚಿಸುವ ಕೆಲಸಕ್ಕೆ ನಾಂದಿ ಹಾಡಲಾಯಿತು. ಇದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗೆ ಕಾರಣವಾಯಿತು.

ಮೊಬೈಲ್‌ ಸಂಖ್ಯೆ ಪೋರ್ಟಬಿಲಿಟಿ ಕಾಯ್ದೆ (ಎಂಎನ್‌ಪಿ)
2011ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಗ್ರಾಹಕರಿಗೆ ತಮ್ಮ ಮೊಬೈಲ್‌ ಸಂಖ್ಯೆಯನ್ನು ಬದಲಾಯಿಸದೆಯೇ ಒಂದು ನೆಟ್‌ವರ್ಕ್‌ನಿಂದ ಮತ್ತೂಂದು ನೆಟ್‌ವರ್ಕ್‌ಗೆ ಹೋಗುವ ಸದಾವಕಾಶ ಇದರಿಂದ ಲಭ್ಯವಾಗಿದೆ. ಉತ್ತಮ ಸೇವೆಯನ್ನು ನೀಡುವ ನೆಟ್‌ವರ್ಕ್‌ನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನೂ ಇದು ನೀಡುತ್ತದೆ. ಈ ಮೂಲಕ ಭಾರತ, ಇಂಥ ಸೌಲಭ್ಯವನ್ನು ಕಲ್ಪಿಸಿರುವ ಅಮೆರಿಕ, ಚೀನಾದಂಥ ಮುಂದುವರಿದ ರಾಷ್ಟ್ರಗಳ ಸಾಲಿಗೆ ಸೇರಿತು.

ಶೇ.9ಕ್ಕೆ ಮುಟ್ಟಿದ ಜಿಡಿಪಿ
ರಾಷ್ಟ್ರೀಯ ಅಂಕಿ-ಸಂಖ್ಯೆ ಇಲಾಖೆ ನೇಮಿಸಿದ್ದ ಸಮಿತಿಯೊಂದರ ವರದಿಯ ಪ್ರಕಾರ, 2006-07ರಲ್ಲಿ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ ಶೇ. 9ರಷ್ಟಿತ್ತು ಎಂದು ಉಲ್ಲೇಖೀಸಲಾಗಿದೆ. ಈ ವರದಿಯನ್ನು ಕೇಂದ್ರ ಅಂಕಿ-ಅಂಶ ಹಾಗೂ ಯೋಜನಾ ಜಾರಿ ಸಚಿವಾಲಯದ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗಿತ್ತು. ಇದು ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ದೇಶ ಕಂಡ ಅತಿ ಗರಿಷ್ಠ ಜಿಡಿಪಿ. 1988-89ರಲ್ಲಿ ದೇಶದ ಜಿಡಿಪಿ ಶೇ. 10.2ರಷ್ಟನ್ನು ದಾಖಲಿಸಿತ್ತು.  ಅದು ಬಿಟ್ಟರೆ ಅತ್ಯುತ್ತಮ ಜಿಡಿಪಿ ದಾಖಲಾಗಿದ್ದು 2006-07ರಲ್ಲಿಯೇ ಎಂದು ಹೇಳಲಾಗಿದೆ. 1991ರಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಗಳ ಫ‌ಲ ಎಂದು ಪರಿಗಣಿಸಲಾಗಿದೆ.

ಚಂದ್ರಯಾನ,  ಮಂಗಳಯಾನದ ಕನಸು
ದೇಶದ ಆರ್ಥಿಕತೆಯ ಬೆಳವಣಿಗೆಯ ಜೊತೆಗೆ, ದೇಶವು ವೈಜ್ಞಾನಿಕವಾಗಿಯೂ ಸಾಧನೆಗಳನ್ನು ಮಾಡ­ಬೇಕೆಂಬ ಕನಸು ಡಾ. ಮನಮೋಹನ್‌ ಸಿಂಗ್‌ ಅವರದ್ದಾಗಿತ್ತು. ಹಾಗಾಗಿಯೇ, ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವದ ಯೋಜನೆಗಳಾದ ಚಂದ್ರಯಾನ, ಮಂಗಳಯಾನ ಕೈಗೊಳ್ಳುವ ಆಶಯಗಳಿಗೆ ಪ್ರೋತ್ಸಾಹ ನೀಡಲಾಯಿತು. ಈ ಎರಡೂ ಪ್ರಸ್ತಾವನೆಗಳಿಗೆ ಡಾ. ಸಿಂಗ್‌ ಸಹಿ ಹಾಕಿದ್ದರು.

ಆರಂಭದಲ್ಲಿ ಚಂದ್ರಯಾನವನ್ನು ರಷ್ಯಾದ ಸಹಯೋಗದೊಂದಿಗೆ ಅನುಷ್ಠಾನಗೊಳಿಸುವ ಆಶಯವನ್ನು ಇಸ್ರೋ ಹೊಂದಿತ್ತಾದರೂ, ಆನಂತರ ಏಕಾಂಗಿಯಾಗಿಯೇ ಈ ಪ್ರಯತ್ನಕ್ಕೆ ಕೈ ಹಾಕಲು ನಿರ್ಧರಿಸಿತು. ಇದಕ್ಕೆ ಕೇಂದ್ರ ಸರ್ಕಾರ ಇಲ್ಲ ಎನ್ನಲಿಲ್ಲ.2012ರಲ್ಲೇ ಮಂಗಳಯಾನದ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಇದನ್ನು ಖುದ್ದು ಡಾ. ಸಿಂಗ್‌ ಅವರೇ ಪ್ರಕಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next