ಅಹಮದಾಬಾದ್: 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧ ರವಿವಾರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಆರು ವಿಕೆಟ್ ಅಂತರದಿಂದ ಗೆದ್ದ ರೋಹಿತ್ ಶರ್ಮಾ ಬಳಗ ಅಭಿಯಾನಕ್ಕೆ ಮುನ್ನುಡಿ ಇಟ್ಟಿದೆ. ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ ಆಡಲಿದೆ.
ಅ.15ರಂದು ಈ ವಿಶ್ವಕಪ್ ನ ಅತ್ಯಂತ ಹೈವೋಲ್ಟೇಜ್ ಪಂದ್ಯವಾದ ಭಾರತ – ಪಾಕ್ ಪಂದ್ಯ ನಡೆಯಲಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಮಹತ್ವದ ಪಂದ್ಯ ನಡೆಯಲಿದೆ.
ಒಂದು ಬದಲಾವಣೆ ಎಂಬಂತೆ ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಅಭ್ಯಾಸದ ವೇಳೆ ಭಾರತ ತಂಡದ ಆಟಗಾರರೆಲ್ಲ ನೀಲಿ ಬಣ್ಣದ ಉಡುಗೆಯನ್ನು ಬಿಟ್ಟು ಕೇಸರಿ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ. ಈ ಬದಲಾವಣೆ ಎನ್ನುವುದು ನಾನಾ ಊಹಾಪೋಹಕ್ಕೆ ಕಾರಣವಾಗಿದೆ.
ಇದನ್ನೂ ಓದಿ:Bollywood: ಮತ್ತೆ ಪಾನ್ ಮಸಾಲ ಜಾಹೀರಾತಿನಲ್ಲಿ ಶಾರುಖ್,ಅಜಯ್,ಅಕ್ಷಯ್; ಗರಂ ಆದ ಫ್ಯಾನ್ಸ್
ಅ.14ರಂದು ನಡೆಯುವ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದ ವೇಳೆಯೂ ಭಾರತದ ಆಟಗಾರರು ನೀಲಿ ಬದಲು ಕೇಸರಿ ಜೆರ್ಸಿಯನ್ನೇ ಧರಿಸಲಿದ್ದಾರೆ ಎಂದು ಸುದ್ದಿಯಾಗಿದೆ. ಆದರೆ ಇದು ಸುಳ್ಳು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಬಿಸಿಸಿಐ ಖಜಾಂಚಿ ಆಶೀಷ್ ಶೇಲರ್ ಹೇಳಿದ್ದಾರೆ. ವಿಶ್ವಕಪ್ ಗಾಗಿಯೇ ನೀಲಿ ಬಣ್ಣದ ವಿಶೇಷ ಜೆರ್ಸಿ ಇರುವಾಗ ಇದನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ರ ಸಮಯದಲ್ಲಿ ಭಾರತವು ಪರ್ಯಾಯ ಕಿಟ್ ಧರಿಸಿತ್ತು. ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ಮತ್ತು ಭಾರತ ಎರಡೂ ನೀಲಿ ಬಣ್ಣಗಳನ್ನು ಧರಿಸಿದ್ದರಿಂದ, ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಿತ್ತಳೆ ತೋಳುಗಳೊಂದಿಗೆ ನೀಲಿ ಬಣ್ಣದ ಗಾಢ ಛಾಯೆಯ ಜೆರ್ಸಿ ಧರಿಸಿತ್ತು. ಆದರೆ ಈ ಬಾರಿ ಯಾವುದೇ ಪರ್ಯಾಯ ಜೆರ್ಸಿ ಇರುವುದಿಲ್ಲ.