ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧದ ಏಕದಿನ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ ಆಡುವುದು ಅನುಮಾನವಾಗಿದ್ದು ವಿಶ್ವಕಪ್ ಗೆ ಭರ್ಜರಿ ತಯಾರಿ ನಡೆಸಿರುತ್ತಿರುವ ಭಾರತಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ ಡೆಂಗ್ಯೂನಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು ಪರಿಣಾಮ ಅಕ್ಟೋಬರ್ 8 ರ ಭಾನುವಾರದಂದು ಆಸ್ಟ್ರೇಲಿಯ ವಿರುದ್ಧ ನಡೆಯುವ ಭಾರತದ ಮೊದಲ ವಿಶ್ವಕಪ್ ಪಂದ್ಯದಲ್ಲಿ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.
ಸದ್ಯ ಏಕದಿನ ಕ್ರಿಕೆಟ್ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಶುಭಮನ್, ಭಾರತದ ಭರವಸೆಯ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ ವಿಶ್ವಕಪ್ ಸಮಯದಲ್ಲಿ ಜ್ವರ ಕಾಣಿಸಿಕೊಂಡಿರುವುದು ಭಾರತಕ್ಕೆ ಹೊಡೆತ ಬಿದ್ದಂತಾಗಿದೆ.
“ಚೆನ್ನೈಗೆ ಬಂದಿಳಿದ ನಂತರ ಶುಭ್‌ಮನ್‌ಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಈ ನಿಟ್ಟಿನಲ್ಲಿ ವೈದ್ಯರು ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ. ಶುಕ್ರವಾರ ಅವರಿಗೆ ಹೆಚ್ಚುವರಿ ಪರೀಕ್ಷೆಗಳು ನಡೆಯಲಿದ್ದು ಈ ವೇಳೆ ಆರಂಭಿಕ ಪಂದ್ಯದಲ್ಲಿ ಭಾಗವಹಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಬಿಸಿಸಿಐ ಗೌಪ್ಯ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.
ಒಂದು ವೇಳೆ ಗಿಲ್ ಅನಾರೋಗ್ಯದಿಂದ ಪಂದ್ಯ ಆಡಲು ವಿಫಲರಾದರೆ, ಅವರ ಬದಲಿಗೆ ಇನ್ನೋರ್ವ ಯುವ ಆಟಗಾರ ಇಶಾನ್ ಕಿಶನ್ ಓಪನರ್ ಆಗಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Sikkim Flash Flood: ಮೃತರ ಸಂಖ್ಯೆ 19ಕ್ಕೆ ಏರಿಕೆ, 103 ಮಂದಿಯ ಪತ್ತೆಗೆ ಶೋಧ ಕಾರ್ಯಾಚರಣೆ