ಹೊಸದಿಲ್ಲಿ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ಸಮಯದಲ್ಲಿ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರ್ರನ್ ಅನಗತ್ಯ ವಿವಾದದ ಮಾಡಿಕೊಂಡಿದ್ದಾರೆ. ಬೌಂಡರಿ ಲೈನ್ ಬಳಿ ಕ್ಯಾಮರ ತಳ್ಳಿ ವಿವಾದಕ್ಕೆ ಸಿಲುಕಿದ್ದಾರೆ.
ಅಫ್ಘಾನಿಸ್ತಾನದ ರಹಮತುಲ್ಲಾ ಗುರ್ಬಾಜ್ ಅವರು ಆರಂಭದಲ್ಲಿ ಹೊಡಿಬಡಿ ಹೊಡೆತಗಳ ಮೂಲಕ ಇಂಗ್ಲೆಂಡ್ ಬೌಲರ್ ಗಳನ್ನು ಕಾಡಿದರು. ದುಬಾರಿ ಓವರ್ ಎಸೆದು ಬಂದ ಕರ್ರನ್ ತನ್ನ ಕೋಪವನ್ನು ಕ್ಯಾಮರಾ ಮೇಲೆ ತೋರಿದರು.
ಕಾಮೆಂಟರಿಯಲ್ಲಿ ಕರ್ರನ್ ಅವರ ಈ ನಡೆಯ ಬಗ್ಗೆ ಉಲ್ಲೇಖಿಸದಿದ್ದರೂ ಅಭಿಮಾನಿಗಳು ಈ ಘಟನೆಯ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ಆಲ್ ರೌಂಡರ್ ನ ನಡೆ ಸರಿಯಲ್ಲ ಎನ್ನುವ ಚರ್ಚೆಗಳು ನಡೆಯುತ್ತಿದೆ.
ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 49.5 ಓವರ್ ಗಳಲ್ಲಿ 284 ರನ್ ಗಳಿಸಿದೆ. ಆರಂಭಿಕ ಬ್ಯಾಟರ್ ರೆಹಮತುಲ್ಲಾ ಗುರ್ಬಾಜ್ ಕೇವಲ 57 ಎಸೆತಗಳಲ್ಲಿ 80 ರನ್ ಗಳಿಸಿದರೆ, ಇಕ್ರಾಮ್ ಅಲಿಖಿಲ್ 58 ರನ್, ಮುಜೀಬ್ ಉರ್ ರೆಹಮನ್ 28 ರನ್ ಮತ್ತು ರಶೀದ್ ಖಾನ್ 23 ರನ್ ಮಾಡಿದರು.
ಇಂಗ್ಲೆಂಡ್ ಪರ ಆದಿಲ್ ರಶೀದ್ ಮೂರು ವಿಕೆಟ್ ಕಿತ್ತರೆ, ಮಾರ್ಕ್ ವುಡ್ ಎರಡು ವಿಕೆಟ್ ಪಡೆದರು. ನಾಲ್ಕು ಓವರ್ ನಲ್ಲಿ 46 ರನ್ ನೀಡಿದ ಸ್ಯಾಮ್ ಕರ್ರನ್ ದುಬಾರಿಯಾದರು.