ಹೈದಾರಾಬಾದ್: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಅಭಿಯಾನದಲ್ಲಿ ನ್ಯೂಜಿಲ್ಯಾಂಡ್ ತಂಡ ಭರ್ಜರಿ ಆಟ ಪ್ರದರ್ಶಿಸುತ್ತಿದೆ. ಮೊದಲೆರೆಡು ಪಂದ್ಯಗಳಲ್ಲಿ ಸುಲಭ ಜಯ ಸಾಧಿಸಿರುವ ಕಿವೀಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಕೂಟದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭರ್ಜರಿ ಒಂಬತ್ತು ವಿಕೆಟ್ ಅಂತರದ ಗೆಲುವು ದಾಖಲಿಸಿದ್ದ ಕಿವೀಸ್ ತನ್ನ ಎರಡನೇ ಪಂದ್ಯದಲ್ಲಿ ನೆದರ್ಲ್ಯಾಂಡ್ ವಿರುದ್ಧ ಜಯ ಸಾಧಿಸಿದೆ.
ನೆದರ್ಲ್ಯಾಂಡ್ ವಿರುದ್ಧ ಸೋಮವಾರ ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ ಪರ ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಮಿಂಚಿದರು. ಬ್ಯಾಟಿಂಗ್ ನಲ್ಲಿ ಕೇವಲ 17 ಎಸೆತಗಳಲ್ಲಿ ಅಜೇಯ 36 ರನ್ ಬಾರಿಸಿದ ಮಿಚೆಲ್ ಸ್ಯಾಂಟ್ನರ್, ಬೌಲಿಂಗ್ ನಲ್ಲಿ 59 ರನ್ ನೀಡಿ ಐದು ವಿಕೆಟ್ ಪಡೆದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಸ್ಯಾಂಟ್ನರ್ ಗೆ ಒಲಿದು ಬಂತು.
ಅದರಲ್ಲೂ ಬ್ಯಾಟಿಂಗ್ ವೇಳೆ ಸ್ಯಾಂಟ್ನರ್ ಇನ್ನಿಂಗ್ ನ ಕೊನೆಯ ಎಸೆತದಲ್ಲಿ 13 ರನ್ ಹೊಡೆದರು. ಡಿಲೀಡ್ ಎಸೆದ ಕೊನೆಯ ಓವರ್ ನ ಕೊನೆಯ ಎಸೆತವನ್ನು ಸ್ಯಾಂಟ್ನರ್ ಸಿಕ್ಸರ್ ಗೆ ಬಾರಿಸಿದರು. ಆದರೆ ಈ ಎಸೆತ ನೋ ಬಾಲ್ ಆಗಿತ್ತು. ಮುಂದಿನ ಎಸೆತ ಫ್ರೀ ಹಿಟ್. ಇದಕ್ಕೂ ಅವರು ಸಿಕ್ಸರ್ ಎಸೆದರು. ಹೀಗೆ ಒಂದು ನ್ಯಾಯಯುತ ಎಸೆತದಲ್ಲಿ 13 ರನ್ ಹರಿದುಬಂತು.
ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 322 ರನ್ ಮಾಡಿದರೆ, ನೆದರ್ಲ್ಯಾಂಡ್ ತಂಡವು 46.3 ಓವರ್ ಗಳಲ್ಲಿ 223 ರನ್ ಗಳಿಗೆ ಆಲೌಟಾಯಿತು.