Advertisement

World Cup 2023; ಟೀಂ ಇಂಡಿಯಾಗೆ ಕೆಎಲ್ ರಾಹುಲ್ ಅತ್ಯಗತ್ಯ..: ಯಾಕೆ ಗೊತ್ತಾ?

05:43 PM Sep 07, 2023 | ಕೀರ್ತನ್ ಶೆಟ್ಟಿ ಬೋಳ |

2011ರ ಬಳಿಕ ಭಾರತ ತಂಡ ಏಕದಿನ ವಿಶ್ವಕಪ್ ಗೆದ್ದಿಲ್ಲ. ಪ್ರತಿ ಬಾರಿಯೂ ಫೇವರೇಟ್ ತಂಡವಾಗಿ ಕಣಕ್ಕಿಳಿಯುವ ಟೀಂ ಇಂಡಿಯಾ ಕಪ್ ಗೆಲ್ಲುವುದು ಬಿಡಿ ಫೈನಲ್ ಕೂಡಾ ತಲುಪಿಲ್ಲ. ಹೀಗಿರುವಾಗ 12 ವರ್ಷಗಳ ಬಳಿಕ ಮತ್ತೆ ತವರಿನಲ್ಲಿ ನಡೆಯಲಿರುವ ಕ್ರಿಕೆಟ್ ನ ಮೆಗಾ ಇವೆಂಟ್ ಮೇಲೆ ಟೀಂ ಇಂಡಿಯಾ ಕಣ್ಣಿರಿಸಿದೆ. ಈ ಬಾರಿ ಕಪ್ ಗೆದ್ದು ಐಸಿಸಿ ಟ್ರೋಫಿ ಬರವನ್ನು ನೀಗಿಸುವ ಪ್ರಯತ್ನದಲ್ಲಿ ರೋಹಿತ್ ಶರ್ಮಾ ನಾಯಕತ್ವದ ತಂಡ.

Advertisement

2011ರ ವಿಶ್ವಕಪ್ ವಿಜೇತ ತಂಡವನ್ನು ನೋಡಿದರೆ ಅಂದಿನ ತಂಡಕ್ಕೂ ಇಂದಿನ ತಂಡಕ್ಕೂ ಬಳಷಟ್ಟು ವ್ಯತ್ಯಾಸವಿದೆ. ಅಂದಿನ ತಂಡದಲ್ಲಿದ್ದ ಮ್ಯಾಚ್ ವಿನ್ನರ್ ಆಲ್ ರೌಂಡರ್ ಗಳು ಇಂದಿಲ್ಲ. ಮಧ್ಯ ಕ್ರಮಾಂಕವೂ ಅಂದಿನಂತೆ ಬಲಿಷ್ಠವಾಗಿಲ್ಲ. 2011ರಲ್ಲಿ ತಂಡದಲ್ಲಿದ್ದ ಯುವರಾಜ್ ಸಿಂಗ್, ಸುರೇಶ್ ರೈನಾ ಮತ್ತು ಯೂಸುಫ್ ಪಠಾಣ್ ಬ್ಯಾಟಿಂಗ್ ಜತೆಗೆ ಕೆಲವು ಓವರ್ ಬೌಲಿಂಗ್ ಕೂಡಾ ಮಾಡುತ್ತಿದ್ದರು. ಇದು ತಂಡಕ್ಕೆ ದೊಡ್ಡ ಬೋನಸ್ ಆಗಿತ್ತು. ಆದರೆ ಇದು ಈ ಪರಿಸ್ಥತಿಯಲ್ಲಿ ಕಷ್ಟಸಾಧ್ಯ.

2011ರ ವಿಶ್ವಕಪ್ ಸ್ಕ್ವಾಡ್ ನಲ್ಲಿದ್ದ 15 ಮಂದಿ ಸದಸ್ಯರಲ್ಲಿ 12 ಮಂದಿ ಆ ಕೂಟದಲ್ಲಿ ಬೌಲಿಂಗ್ ಮಾಡಿದ್ದರು ಎನ್ನುವುದು ಗಮನಿಸಬೇಕಾದ ಅಂಶ. ಆದರೆ ಇದೀಗ ಟೀಂ ಇಂಡಿಯಾದ ಸ್ಕ್ವಾಡ್ ನಲ್ಲಿ ಪೂರ್ಣ ಪ್ರಮಾಣದ ಬ್ಯಾಟರ್ ಗಳಲ್ಲಿ ಒಬ್ಬರೂ ಬೌಲಿಂಗ್ ಮಾಡುತ್ತಿಲ್ಲ. ಒಂದು ವೇಳೆ ಅಂತ ಪ್ರಯತ್ನ ಮಾಡಿದರೆ ಅದು ಶ್ರೇಯಸ್ ಅಯ್ಯರ್ ಮಾತ್ರ. ಅದೂ ಶಸ್ತ್ರಚಿಕಿತ್ಸೆಯ ಬಳಿಕ ಬೌಲಿಂಗ್ ಗೆ ಕೈ ಬೀಸಲು ಅಯ್ಯರ್ ಎಷ್ಟು ಶಕ್ತರಿದ್ದಾರೆ ಎನ್ನುವುದನ್ನು ಕಾಲವೇ ಉತ್ತರಿಸಬೇಕು.

ಮಧ್ಯಮ ಕ್ರಮಾಂಕಕ್ಕೆ ಬೇಕು ಗಟ್ಟಿ ಶಕ್ತ: 2011ರ ವಿಶ್ವಕಪ್ ಹೀರೋ ಯವರಾಜ್ ಸಿಂಗ್ ಅವರ ವಿದಾಯದ ಬಳಿಕ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅವರಷ್ಟು ಪರಿಣಾಮಕಾರಿಯಾಗಿ ಯಾರು ಪ್ರದರ್ಶನ ನೀಡಿಲ್ಲ. ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ಯುವಿ ಒಂದು ವೇಳೆ ತಂಡ ಆರಂಭಿಕ ಕುಸಿತ ಕಂಡರೆ ಗಟ್ಟಿಯಾಗಿ ನಿಂತು ಆಧರಿಸುತ್ತಿದ್ದರು. ಅಥವಾ ಕೊನೆಯ ಕ್ಷಣದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿ ಉತ್ತಮ ಮೊತ್ತ ಪೇರಿಸಲು ಸಹಾಯಕವಾಗುತ್ತಿದ್ದರು.

Advertisement

ಯುವಿ ಬಳಿಕ ಆ ಸ್ಥಾನಕ್ಕೆ ಹಲವರು ಆಗಿ ಹೋಗಿದ್ದಾರೆ. ಆದರೆ ಯಾರೂ ಗಟ್ಟಿಯಾಗಿ ಬೇರು ಬಿಟ್ಟಿಲ್ಲ. ಮನೀಶ್ ಪಾಂಡೆ, ಅಂಬಾಟಿ ರಾಯುಡು, ವಿಜಯ್ ಶಂಕರ್, ಸೇರಿ ಹಲವರನ್ನು ಪ್ರಯೋಗಿಸಲಾಗಿದೆ. ಆದರೆ ಅದು ಫಲ ನೀಡಿಲ್ಲ. ಕಳೆದೆರಡು ವಿಶ್ವಕಪ್ ಗಳಲ್ಲೂ ಭಾರತ ತಂಡಕ್ಕೆ ಮಧ್ಯಮ ಕ್ರಮಾಂಕವೇ ಬಿಡಿಸಲಾಗದ ಕಗ್ಗಂಟಾಗಿ ಉಳಿದಿತ್ತು.

ಸದ್ಯ ವಿಶ್ವಕಪ್ ಆರಂಭಕ್ಕೆ ಇನ್ನು ಎರಡು ತಿಂಗಳು ಕೂಡಾ ಬಾಕಿ ಉಳಿದಿಲ್ಲ. ಹೀಗಿರುವಾಗ ಮೆಗಾ ಕೂಟದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಯಾರು ಆಡುತ್ತಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಏಷ್ಯಾ ಕಪ್ ಗೆ ತಂಡ ಸೇರಿದ ಶ್ರೇಯಸ್ ಅಯ್ಯರ್ ಗೆ ಪಾಕ್ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಅವರು ಅಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದಾರೆ. ಬಹುತೇಕ ಮುಂದಿನ ಪಂದ್ಯಗಳಲ್ಲಿ ಮತ್ತು ವಿಶ್ವಕಪ್ ನಲ್ಲಿ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಗಾಯದ ಕಾರಣದಿಂದ ಹಲವು ಸಮಯದಿಂದ ಕ್ರಿಕೆಟ್ ನಿಂದ ದೂರವಿರುವ ಅಯ್ಯರ್ ವಿಶ್ವಕಪ್ ನಲ್ಲಿ ಎಷ್ಟು ಪರಿಣಾಮಕಾರಿಯಾಗಿ ಆಡುತ್ತಾರೆ ಎನ್ನುವುದನ್ನು ನೋಡಬೇಕಿದೆ.

ರಾಹುಲ್ ಯಾಕೆ ಬೇಕು?; ಕಳೆದ ಐಪಿಎಲ್ ವೇಳೆ ಗಾಯಗೊಂಡಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಬಳಿಕ ಯಾವುದೇ ವೃತ್ತಿಪರ ಕ್ರಿಕೆಟ್ ಆಡಿಲ್ಲ. ಕಳೆದೆರಡು ತಿಂಗಳಿನಿಂದ ಎನ್ ಸಿಎ ನಲ್ಲಿ ಶುಶ್ರೂಷೆ ಪಡೆಯುತ್ತಿದ್ದ ರಾಹುಲ್ ಏಷ್ಯಾ ಕಪ್ ಸ್ಕ್ವಾಡ್ ನಲ್ಲಿದ್ದರೂ ಸಂಪೂರ್ಣ ಫಿಟ್ ಆಗದ ಕಾರಣ ಮೊದಲೆರಡು ಆಡಿರಲಿಲ್ಲ. ಇದೀಗ ವಿಶ್ವಕಪ್ ತಂಡಕ್ಕೆ ರಾಹುಲ್ ಆಯ್ಕೆಯಾಗಿದ್ದು, ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ ಎನ್ನಲಾಗಿದೆ.

ಆದರೆ ಕೆಲ ಮಾಜಿ ಆಟಗಾರರು ರಾಹುಲ್ ಆಯ್ಕೆಗೆ ಅಸಮ್ಮತಿ ಸೂಚಿಸಿದ್ದಾರೆ. ಸಂಪೂರ್ಣ ಫಿಟ್ ಆಗದ ಆಟಗಾರನನ್ನು ಯಾಕೆ ಆಯ್ಕೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವುದು ಮಾತ್ರವಲ್ಲದೆ ವಿಕೆಟ್ ಕೀಪಿಂಗ್ ಮಾಡುವುದು ಬಹುತೇಕ ಖಚಿತ.

ತಂಡಕ್ಕೆ ರಾಹುಲ್ ಆಯ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ರಿಷಭ್ ಪಂತ್ ಅಲಭ್ಯತೆಯ ಹಿನ್ನೆಲೆಯಲ್ಲಿ ರಾಹುಲ್ ವಿಕೆಟ್ ಕೀಪಿಂಗ್ ಮಾಡಬಲ್ಲರು. ಅಲ್ಲದೆ ಹಲವು ವರ್ಷಗಳ ಅನುಭವಿ ರಾಹುಲ್ ತಂಡಕ್ಕೆ ಎಂದೂ ಒಂದು ರೀತಿಯ ಎಕ್ಸ್ಟ್ರಾ ಅಡ್ವಾಂಟೇಜ್ ನೀಡುತ್ತಾರೆ. ಆರಂಭದಲ್ಲಿ ಓಪನಿಂಗ್ ಬ್ಯಾಟರ್ ಆಗಿದ್ದ ರಾಹುಲ್ ಬಳಿಕ ಮಧ್ಯಮ ಕ್ರಮಾಂಕದಲ್ಲಿ ತನ್ನ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಆರಂಭದಲ್ಲಿ ವಿಕೆಟ್ ಬಿದ್ದರೆ ನಿಧಾನಕ್ಕೆ ಇನ್ನಿಂಗ್ಸ್ ಕಟ್ಟಿ ಮತ್ತೆ ಸಿಡಿಯುವ ರಾಹುಲ್ ತಂಡಕ್ಕೆ ನೆರವಾಗಬಲ್ಲರು. ಒಟ್ಟಿನಲ್ಲಿ ವಿಶ್ವಕಪ್ ನಲ್ಲಿ ರಾಹುಲ್ ಮಿಂಚಿದರೆ, ಯುವರಾಜ್ ಸಿಂಗ್ ಅವರ ಸ್ಥಾನ ತುಂಬುವುದು ಗ್ಯಾರಂಟಿ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next