ಕೋಲ್ಕತ್ತಾ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಸತತ ಏಳು ಪಂದ್ಯಗಳನ್ನು ಗೆದ್ದು ಉಪಾಂತ್ಯ ಸುತ್ತಿಗೆ ಲಗ್ಗೆ ಇಟ್ಟಿರುವ ಭಾರತ ತಂಡಕ್ಕೆ ಇಂದು ದಕ್ಷಿಣ ಆಫ್ರಿಕಾ ಸವಾಲು ಎದುರಾಗಿದೆ. ಅಬ್ಬರದ ಬ್ಯಾಟಿಂಗ್ ನಿಂದ ಈ ಬಾರಿಯ ವಿಶ್ವಕಪ್ ನಲ್ಲಿ ಸದ್ದು ಮಾಡಿ ಸೆಮೀಸ್ ಗೆ ತೇರ್ಗಡೆಯಾಗಿರುವ ಹರಿಣಗಳನ್ನು ರೋಹಿತ್ ಪಡೆ ಎದುರಿಸಲಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.
2011ರ ತವರಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಚಾಂಪಿಯನ್ ಆಗಿ ಮೂಡಿಬಂದಿತ್ತು. ಅಂದು ಧೋನಿ ಪಡೆ ಅಜೇಯ ಓಟ ಬೆಳೆಸಿರಲಿಲ್ಲ. ಕಪ್ ಎತ್ತುವ ಹಾದಿಯಲ್ಲಿ ಏಕೈಕ ಪಂದ್ಯವನ್ನು ಕಳೆದುಕೊಂಡಿತ್ತು, ಆ ಸೋಲು ದಕ್ಷಿಣ ಆಫ್ರಿಕಾ ವಿರುದ್ಧ ಬಂದಿತ್ತು!
ಜನ್ಮದಿನದ ಸಂಭ್ರಮದಲ್ಲಿ ಕೊಹ್ಲಿ: ಟಾಸ್ ಗೆದ್ದರೆ ಭಾರತವೇ ಮೊದಲು ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ದಾಖಲಿಸುವುದು ಕ್ಷೇಮ ಎನಿಸುತ್ತದೆ. ರೋಹಿತ್, ಗಿಲ್, ಕೊಹ್ಲಿ, ಐಯ್ಯರ್, ರಾಹುಲ್, ಜಡೇಜ ಕ್ರೀಸ್ ಆಕ್ರಮಿಸಿಕೊಂಡರೆ ಇದು ಕಷ್ಟವೇನಲ್ಲ. ಅಂದಹಾಗೆ ಭಾನುವಾರ ವಿರಾಟ್ ಕೊಹ್ಲಿ ಜನ್ಮದಿನ. ಅವರು ವಿಶ್ವದಾಖಲೆಯ 49ನೇ ಶತಕದ ಹೊಸ್ತಿಲಲ್ಲಿ ನಿಂತಿದ್ದಾರೆ. ಇದಕ್ಕೆ ಈಡನ್ ಬಾಗಿಲು ತೆರೆದೀತೇ ಎಂಬ ಕೌತುಕ ಎಲ್ಲರದೂ. ಆಸ್ಟ್ರೇಲಿಯ (85), ನ್ಯೂಜಿಲೆಂಡ್ (95) ಮತ್ತು ಶ್ರೀಲಂಕಾ ವಿರುದ್ಧ (88) ಅವರಿಗೆ ಸೆಂಚುರಿ ತಪ್ಪಿತ್ತು. ಇದು ರೋಹಿತ್ ಶರ್ಮ ಅವರ ನೆಚ್ಚಿನ ಕ್ರೀಡಾಂಗಣವೂ ಹೌದು.
ತಂಡಗಳು
ಭಾರತ: ಶುಭಮನ್ ಗಿಲ್, ರೋಹಿತ್ ಶರ್ಮಾ (ನಾ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ದ.ಆಫ್ರಿಕಾ: ಟೆಂಬಾ ಬವುಮಾ (ನಾ), ಕ್ವಿಂಟನ್ ಡಿ ಕಾಕ್ (ವಿ.ಕೀ), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ.