ಹೊಸದಿಲ್ಲಿ: ಈ ಬಾರಿಯ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿದೆ. ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿರುವ ಟೀಂ ಇಂಡಿಯಾ, ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ಥಾನ ಸವಾಲನ್ನು ಎದುರು ನೋಡುತ್ತಿದೆ.
ಟೀಂ ಇಂಡಿಯಾ ಬುಧವಾರ ಹೊಸದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಫ್ಗಾನಿಸ್ಥಾನ ವಿರುದ್ದ ವಿಶ್ವಕಪ್ ನ ಎರಡನೇ ಪಂದ್ಯವಾಡುತ್ತಿದೆ. ಆದರೆ ಈ ಪಂದ್ಯಕ್ಕೆ ಟೀಂ ಇಂಡಿಯಾದ ಯುವ ಆಟಗಾರ ಶುಭಮನ್ ಗಿಲ್ ಅವರು ಅಲಭ್ಯರಾಗಿದ್ದಾರೆ.
ವಿಶ್ವಕಪ್ ಆರಂಭದಲ್ಲೇ ಶುಭಮನ್ ಗಿಲ್ ಅವರು ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದರು. ಇನ್ನೂ ಸಂಪೂರ್ಣವಾಗಿ ಚೇರಿಸಿಕೊಳ್ಳದ ಕಾರಣ ಅವರು ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಎರಡನೇ ಪಂದ್ಯದಲ್ಲಿ ಅವರು ಆಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಸ್ವತಃ ಬಿಸಿಸಿಐ ಎರಡನೇ ಪಂದ್ಯಕ್ಕೆ ಗಿಲ್ ಅಲಭ್ಯತೆಯನ್ನು ಖಚಿತ ಪಡಿಸಿದೆ.
ಇದನ್ನೂ ಓದಿ:BJP ಅಭ್ಯರ್ಥಿಗಳ ಪಟ್ಟಿ ಬಿಡುಗಡೆ;ರಾಜಸ್ಥಾನದಲ್ಲಿ ರಾಜ್ಯವರ್ಧನ್ ಸೇರಿ 7 ಸಂಸದರು ಕಣಕ್ಕೆ
“ಟೀಂ ಇಂಡಿಯಾ ಬ್ಯಾಟರ್ ಶುಭಮನ್ ಗಿಲ್ ಅವರು ಅಕ್ಟೋಬರ್ 9, 2023 ರಂದು ತಂಡದೊಂದಿಗೆ ದೆಹಲಿಗೆ ಪ್ರಯಾಣಿಸುವುದಿಲ್ಲ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ತಂಡದ ಮೊದಲ ಪಂದ್ಯವನ್ನು ತಪ್ಪಿಸಿಕೊಂಡ ಆರಂಭಿಕ ಬ್ಯಾಟರ್ ತಂಡದ ಮುಂದಿನ ಪಂದ್ಯವನ್ನೂ ಕಳೆದುಕೊಳ್ಳಲಿದ್ದಾರೆ.” ಎಂದಿದೆ.
ಅವರು ಚೆನ್ನೈನಲ್ಲಿಯೇ ಇರುತ್ತಾರೆ ಮತ್ತು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಬಿಸಿಸಿಐ ಹೇಳಿದೆ.
ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಅವರು ಆರಂಭಿಕರಾಗಿ ಕಣಕ್ಕಿಳಿದಿದ್ದರು. ಎರಡನೇ ಪಂದ್ಯದಲ್ಲೂ ಅವರೇ ಮುಂದುವರಿಯಲಿದ್ದಾರೆ.