ಬೆಂಗಳೂರು: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ನ ಆರಂಭಿಕ ಸತತ ಎಂಟು ಪಂದ್ಯಗಳನ್ನು ಗೆದ್ದು ಕೊಂಡಿರುವ ಭಾರತ ತಂಡವು ಲೀಗ್ ಹಂತದ ಕೊನೆಯ ಪಂದ್ಯಕ್ಕೆ ಸಜ್ಜಾಗಿದೆ. ನೆದರ್ಲ್ಯಾಂಡ್ ವಿರುದ್ಧ ಇಂದು ಟೀಂ ಇಂಡಿಯಾ ಎದುರಿಸುತ್ತಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದಾರೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಗೆಲುವಿಗೂ ಮಿಗಿಲಾದ ಕುತೂಹಲ
ಇಲ್ಲಿ ಗೆಲುವಿಗೂ ಮಿಗಿಲಾದ ನಿರೀಕ್ಷೆ ಹಾಗೂ ಕುತೂಹಲವೆಂದರೆ, ವಿರಾಟ್ ಕೊಹ್ಲಿ ವಿಶ್ವದಾಖಲೆಯ 50ನೇ ಶತಕವನ್ನು ಬಾರಿಸುವರೇ ಎಂಬುದು. ಹೇಳಿ ಕೇಳಿ ಬೆಂಗಳೂರು ಅವರ ಎರಡನೇ ತವರು. ಆರ್‌ಸಿಬಿ ಕಿಂಗ್ ಎನಿಸಿರುವ ಕೊಹ್ಲಿಗೆ 50ನೇ ಶತಕದ ಶಿಖರ ತಲುಪಲು ಇದಕ್ಕಿಂತ ಮಿಗಿಲಾದ ಅಂಗಳ ಬೇರೊಂದಿಲ್ಲ. ಭಾರತ ಮೊದಲು ಬ್ಯಾಟಿಂಗ್ ನಡೆಸಿದರೆ ರವಿವಾರವೇ ಇತಿಹಾಸ ನಿರ್ಮಾಣವಾದೀತು!
ಪ್ರಚಂಡ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಈಗಾಗಲೇ 543 ರನ್ ಬಾರಿಸಿದ್ದಾರೆ. ಭಾರತದ ರನ್ ಸಾಧಕರ ಯಾದಿಯಲ್ಲಿ ಇವರಿಗೆ ಅಗ್ರಸ್ಥಾನದ ಗೌರವ. ಏಕದಿನ ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ ಕೊಹ್ಲಿ 500 ರನ್ ಗಡಿ ದಾಟಿದ ಮೊದಲ ನಿದರ್ಶನ ಇದಾಗಿದೆ. 2011ರಿಂದ ವಿಶ್ವಕಪ್ ಆಡಲಾರಂಭಿಸಿದ ಕೊಹ್ಲಿ ಕ್ರಮವಾಗಿ 282, 305, 443 ರನ್ ಬಾರಿಸಿದ್ದಾರೆ. ಈ ಮೂರು ಕೂಟಗಳಲ್ಲಿ ತೆಂಡುಲ್ಕರ್, ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಭಾರತದ ಟಾಪ್ ಸ್ಕೋರರ್ ಆಗಿದ್ದರು.
ತಂಡಗಳು:
ಭಾರತ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ನೆದರ್ಲ್ಯಾಂಡ್: ವೆಸ್ಲಿ ಬ್ಯಾರೆಸಿ, ಮ್ಯಾಕ್ಸ್ ಒ’ಡೌಡ್, ಕಾಲಿನ್ ಅಕರ್‌ಮನ್, ಸೈಬ್ರಾಂಡ್ ಎಂಗಲ್ ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್ (ನಾ & ವಿ.ಕೀ), ಬಾಸ್ ಡಿ ಲೀಡೆ, ತೇಜಾ ನಿಡಮನೂರು, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.