ಹೊಸದಿಲ್ಲಿ: ಏಕದಿನ ಕ್ರಿಕೆಟ್ ವಿಶ್ವಕಪ್ ಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಭಾರತಕ್ಕೆ ಬಂದಿಳಿದಿದೆ. ಅವರು ಕೂಟದ ತಮ್ಮ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್ 7 ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆಡುತ್ತಾರೆ. ಭಾರತವು ಅಕ್ಟೋಬರ್ 11 ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.
ಅಫ್ಘಾನಿಸ್ತಾನದ ಮಿಸ್ಟ್ರಿ ಹುಡುಗಿ ವಾಜ್ಮಾ ಅಯೂಬಿ ಅವರು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುವ ಈ ಪಂದ್ಯಕ್ಕೆ ಆಗಮಿಸಲಿದ್ದಾರೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ದುಬೈನಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ಪಂದ್ಯದಲ್ಲಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಕೈಯಲ್ಲಿ ಅಫ್ಘಾನಿಸ್ತಾನ ಧ್ವಜದೊಂದಿಗೆ ಭಾಗವಹಿಸಿದ್ದ ವಾಜ್ಮಾ ವೈರಲ್ ಆಗಿದ್ದರು.
ಈ ವರ್ಷ ಏಷ್ಯಾ ಕಪ್ ನಲ್ಲಿ, ವಾಜ್ಮಾ ಅಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ಬೆಂಬಲಿಸಲು ಶ್ರೀಲಂಕಾ ಅಥವಾ ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ ಆದರೆ ಯುಎಇಯಿಂದಲೇ ತನ್ನ ಬೆಂಬಲವನ್ನು ಕಳುಹಿಸಿದಳು. ಅವರು ಯುಎಇನಲ್ಲಿ ವಾಸಿಸುತ್ತಿದ್ದಾರೆ. ಮಾಜಿ ಮಾಡೆಲ್ ಆಗಿರುವ ವಾಜ್ಮಾ ಇನ್ಸ್ಟಾಗ್ರಾಮ್ ನಲ್ಲಿ 687k ಅನುಯಾಯಿಗಳನ್ನು ಹೊಂದಿದ್ದಾರೆ.
ವಾಜ್ಮಾ ಅಯೂಬಿ ಫ್ಯಾಷನ್ ಡಿಸೈನರ್ ಆಗಿದ್ದು, ವಿಶ್ವಕಪ್ ಗಾಗಿ ಭಾರತಕ್ಕೆ ತೆರಳುವಾಗ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಧರಿಸಿದ್ದ ಸೂಟನ್ನು ಅವರೇ ವಿನ್ಯಾಸಗೊಳಿಸಿದ್ದಾರೆ.
ವಾಜ್ಮಾ ಅಯೂಬಿ ದೆಹಲಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಎಕ್ಸ್ (ಟ್ವಿಟ್ಟರ್) ಬಳಕೆದಾರರು ವಾಜ್ಮಾ ಅವರು ಭಾರತಕ್ಕೆ ಯಾವಾಗ ಬರುತ್ತಾರೆ ಎಂದು ಕೇಳಿದಾಗ ಉತ್ತರಿಸಿದ ವಾಜ್ಮಾ, ಅಕ್ಟೋಬರ್ 11 ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನದ ಪಂದ್ಯವನ್ನು ವೀಕ್ಷಿಸಲು ಭಾರತದಲ್ಲಿ ಇರುವುದಾಗಿ ಉತ್ತರಿಸಿದರು. ವಾಜ್ಮಾ ಅವರು ಅಫ್ಘಾನಿಸ್ತಾನ ತಂಡವನ್ನು ಬೆಂಬಲಿಸಿದರೂ ಅವರ ಎರಡನೇ ನೆಚ್ಚಿನ ತಂಡ ಭಾರತವಾಗಿದೆ.
ಏಷ್ಯಾ ಕಪ್ ನಲ್ಲಿ, ಅಫ್ಘಾನಿಸ್ತಾನವು ಮೊದಲ ಹಂತದಲ್ಲಿ ಪಂದ್ಯಾವಳಿಯಿಂದ ಹೊರಬಿದ್ದ ಬಳಿಕ, ವಾಜ್ಮಾ ಭಾರತವನ್ನು ಬೆಂಬಲಿಸಲು ಪ್ರಾರಂಭಿಸಿದರು. ವಿರಾಟ್ ಪಾಕಿಸ್ತಾನದ ವಿರುದ್ಧ ಶತಕ ಸಿಡಿಸಿದಾಗ ಮತ್ತು 13,000 ಏಕದಿನ ರನ್ ಗಳನ್ನು ಪೇರಿಸಿದ ಸಂದರ್ಭದಲ್ಲಿ ಅವರು ಎಕ್ಸ್ ನಲ್ಲಿ ವಿಶೇಷ ಪೋಸ್ಟ್ ಹಾಕಿದ್ದರು. ಏಷ್ಯಾಕಪ್ 2022 ರ ಪಂದ್ಯದ ನಂತರ ವಿರಾಟ್ ಕೊಹ್ಲಿಯೇ ವಾಜ್ಮಾ ಅವರಿಗೆ ತನ್ನ ಜರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು.