ಎಜ್ ಬಾಸ್ಟನ್: ಲೆಜೆಂಡ್ಸ್ ವಿಶ್ವ ಚಾಂಪಿಯನ್ ಶಿಪ್ 2024ರ ಕೂಟದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದ ಭಾರತ ತಂಡವು ಚಾಂಪಿಯನ್ ಆಗಿ ಮೂಡಿ ಬಂದಿದೆ. ಅನುರೀತ್, ರಾಯುಡು, ಯೂಸುಫ್ ಪಠಾಣ್ ಸಹಾಯದಿಂದ ಭಾರತ ತಂಡವು 5 ವಿಕೆಟ್ ಅಂತರದ ಗೆಲುವು ಸಾಧಿಸಿ ಚೊಚ್ಚಲ ಚಾಂಪಿಯನ್ ಆಗಿ ಮೂಡಿ ಬಂದಿದೆ.
ಎಜ್ ಬಾಸ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 156 ರನ್ ಗಳಿಸಿದರೆ, ಭಾರತವು 19.1 ಓವರ್ ಗಳಲ್ಲಿ ಗುರಿ ತಲುಪಿ ವಿಕ್ರಮ ಸಾಧಿಸಿತು.
ಲೀಗ್ ಹಂತದಲ್ಲಿ ಭಾರತದ ವಿರುದ್ದ ಭರ್ಜರಿ ಜಯ ಸಾಧಿಸಿದ್ದ ಪಾಕ್ ಅದೇ ಉತ್ಸಾಹದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿತು. ಆದರೆ ಶೋಯೆಬ್ ಮಲಿಕ್ ಬಿಟ್ಟರೆ ಬೇರ್ಯಾರು ಉತ್ತಮ ಬ್ಯಾಟಿಂಗ್ ಮಾಡಲು ವಿಫಲರಾದರು. ಮಲಿಕ್ 41 ರನ್ ಗಳಿಸಿದರು. ಉಳಿದಂತೆ ಕಮ್ರಾನ್ ಅಕ್ಮಲ್ 24 ರನ್, ಮಕ್ಸೂದ್ 21 ರನ್ ಮತ್ತು ಕೊನೆಯಲ್ಲಿ ತನ್ವೀರ್ 19 ರನ್ ಗಳಿಸಿದರು.
ಭಾರತದ ಪರ ಅನುರೀತ್ ಸಿಂಗ್ ಮೂರು ವಿಕೆಟ್ ಕಿತ್ತರೆ, ಇರ್ಫಾನ್ ಪಠಾಣ್, ಪವನ್ ನೇಗಿ ಮತ್ತು ವಿನಯ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು
ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲಿ ರಾಯುಡು ಆಸರೆಯಾದರು. 30 ಎಸೆತ ಎದುರಿಸಿದ ಅಂಬಾಟಿ ರಾಯುಡು 50 ರನ್ ಗಳಿಸಿದರು. ಬಳಿಕ ಗುರುಕೀರತ್ ಮಾಣ್ 34 ರನ್, ಯೂಸುಫ್ ಪಠಾಣ್ 30 ರನ್ ಮಾಡಿದರು. ನಾಯಕ ಯುವರಾಜ್ ಅಜೇಯ 15 ರನ್ ಗಳಿಸಿದರು.
ಅಂಬಾಟಿ ರಾಯುಡು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರೆ, ಯೂಸುಫ್ ಪಠಾಣ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.