Advertisement

ಆರೋಗ್ಯ, ಪರಿಸರ ಸಮತೋಲನಕ್ಕೆ ಸಹಕಾರಿ ಸೈಕಲ್‌ ಸವಾರಿ

12:31 AM Jun 03, 2020 | Sriram |

ಸೈಕಲ್‌ ಎಂದರೆ ಯಾರಿಗೆ ಇಷ್ಟವಿಲ್ಲ! ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸೈಕಲ್‌ ಸವಾರಿ ಎಲ್ಲರಿಗೂ ಖುಷಿಯೇ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಸೈಕ್ಲಿಂಗ್‌ ಸಹಕಾರಿ. ತೂಕ ಇಳಿಕೆಯಿಂದ ಹಿಡಿದು ಮನಸ್ಸಿಗೆ ಆಹ್ಲಾದ ನೀಡುವ ವರೆಗೆ ಹಲವು ರೀತಿಯಲ್ಲಿ ಇದು ಪ್ರಯೋಜನಕಾರಿಯಾಗಿದೆ. ವಾಯುಮಾಲಿನ್ಯ ಸಮಸ್ಯೆಗೆ ಕಡಿವಾಣ ಹಾಕುವ ವಿಚಾರದಲ್ಲಿಯೂ ಪ್ರಮುಖ ಪಾತ್ರ ಹೊಂದಿದೆ. ಈ ಹಿನ್ನೆಲೆಯಲ್ಲಿಯೇ ಸೈಕಲ್‌ ಸವಾರಿಯ ಮಹತ್ವವನ್ನು ಎತ್ತಿ ಹಿಡಿಯಲು ಜೂ. 3 ಅನ್ನು ವಿಶ್ವ ಸೈಕಲ್‌ ಸವಾರಿಯ ದಿನ ಎಂದು ಆಚರಿಸಲಾಗುತ್ತಿದೆ. ಸೈಕ್ಲಿಂಗ್‌ ಸವಾರಿಯ ಪ್ರಯೋಜನಗಳ ಕುರಿತು ಈ ದಿನ ಅರಿವು ಮೂಡಿಸಲಾಗುತ್ತದೆ.

Advertisement

ಬೊಜ್ಜು ಕಡಿಮೆ
ಬೆಳಗ್ಗೆ, ಸಂಜೆ ಸಮಯ ಸಿಕ್ಕಾಗ ಒಂದು ತಾಸು ಕಾಲ ಸೈಕಲ್‌ ಪೆಡಲ್‌ ತುಳಿದರೆ ಮನಸ್ಸು ಆಹ್ಲಾದಗೊಳ್ಳುವ ಜತೆಗೆ ಮೈಯ ಬೊಜ್ಜು ಕರಗುತ್ತದೆ. ಹೃದಯ ಸಂಬಂಧಿ ಕಾಯಿಲೆಯಿಂದ ದೂರ ಉಳಿಯಲು ಸಾಧ್ಯವಾಗುತ್ತದೆ.

ನಿದ್ರಾಹೀನತೆಯಿಂದ ಮುಕ್ತಿ
ನಿದ್ದೆ ಬಾರದೆ ಇರುವವರಿಗೆ ಸೈಕ್ಲಿಂಗ್‌ ಒಳ್ಳೆಯ ಮದ್ದು. ಸಮೀಕ್ಷೆಯ ಪ್ರಕಾರ, ಪ್ರತಿನಿತ್ಯ ನಿಯಮಿತವಾಗಿ ಸೈಕ್ಲಿಂಗ್‌ ಮಾಡುವುದರಿಂದ ನಿದ್ರಾಹೀನತೆಯಿಂದ ಮುಕ್ತಿ ಪಡೆಯಬಹುದು. ಇದರಲ್ಲಿ ದೇಹ ದಂಡನೆಯಾಗುವುದರಿಂದ ಮನಸ್ಸು ಉತ್ಸಾಹ ಭರಿತವಾಗುತ್ತದೆ. ಹಾಸಿಗೆಯಲ್ಲಿ ಬಿದ್ದ ಕೂಡಲೇ ನಿದ್ದೆ ಹತ್ತಿಬಿಡುತ್ತದೆ.

ಬುದ್ಧಿಮತ್ತೆ ಚುರುಕು
ಸಾಧ್ಯವಾದರೆ ಮಕ್ಕಳಿಗೆ ಬಾಲ್ಯದಲ್ಲಿಯೇ ಸೈಕ್ಲಿಂಗ್‌ ಅಭ್ಯಾಸ ಮಾಡಿಸಿ.ಇದರಿಂದ ಅವರ ಬುದ್ಧಿಶಕ್ತಿ ಚುರುಕಾಗುತ್ತದೆ. ಮೆದುಳಿನ ಬೆಳವಣಿಗೆಯ ಮಟ್ಟವೂ ಹೆಚ್ಚುತ್ತದೆ

ಆರೋಗ್ಯಕ್ಕೆ ಬಹಳ ಪ್ರಯೋಜಕಾರಿ ಸೈಕ್ಲಿಂಗ್‌
ದೇಹದ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಹೃದ್ರೋಗ, ಲಕ್ವಾ, ಮಧುಮೇಹ ಹಾಗೂ ಕೆಲವು ರೀತಿಯ ಕ್ಯಾನ್ಸರ್‌ ಸಹಿತ ಹಲವು ಕಾಯಿಲೆಗಳ ವಿರುದ್ಧ ರಕ್ಷಿಸಿಕೊಳ್ಳಲು ಸೈಕ್ಲಿಂಗ್‌ ಬಹಳಷ್ಟು ಸಹಾಯವನ್ನು ನಮಗೆ ಗೊತ್ತಿಲ್ಲದಂತೆ ಮಾಡುತ್ತದೆ. ವಿಶ್ವ ಸೈಕಲ್‌ ಸವಾರಿಯ ದಿನಕ್ಕೆ ಇತ್ತೀಚೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಸೈಕ್ಲಿಂಗ್‌ನ ಈ ಆರೋಗ್ಯ ಕರ ಹವ್ಯಾಸದಿಂದ ಮಧುಮೇಹ ಕಾಯಿಲೆಯನ್ನು ಸಹ ದೂರ ಮಾಡ ಬಹುದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಟೈಪ್‌ 1 ಮತ್ತು ಟೈಪ್‌ 2 ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಇದರ ಲಾಭ ಹೆಚ್ಚಿದೆ.

Advertisement

ಇಂಗ್ಲೆಂಡ್‌,ಇಟಲಿ ಕಥೆ ಕೇಳಿ
ಇದು ಇಂಗ್ಲೆಂಡ್‌ ಹಾಗೂ ಇಟಲಿಯ ಕಥೆಗಳುಕುತೂಹಲದ ಸಂಗತಿ ಎನ್ನುವಂತೆ, ಈ ಕೊರೊನಾ ಕಾಲದಲ್ಲಿ ಎರಡೂ ದೇಶಗಳಲ್ಲಿ ಹೆಚ್ಚು ಬೇಡಿಕೆಗೆ ಬಂದಿದ್ದು ಬೈಸಿಕಲ್‌ಗ‌ಳು. ಬ್ರಿಟನ್‌ನಲ್ಲಿ ಶೇ. 200ರಷ್ಟು ಬೇಡಿಕೆ ಹೆಚ್ಚಾಗಿದ್ದರೆ, ಇಟಲಿಯಲ್ಲಿ ಸರಕಾರವೇ ಬೈಸಿಕಲ್‌ ಅನ್ನು ಪ್ರೀತಿಸಲು ತಿಳಿ ಹೇಳುತ್ತಿದೆ.

ಇಟಲಿಯ ಮಿಲಾನೊ ಲೊಂಬಾರ್ಡಿ ಪ್ರದೇಶದ ಪ್ರಮುಖ ನಗರ. ಕೊರೊನಾ ಸಂಕಷ್ಟಕ್ಕೆ ತತ್ತರಿಸಿದ ನಗರವೂ ಹೌದು. ಅಲ್ಲೀಗ ಪರಿಸರ ಸ್ನೇಹಿ ನಗರವಾಗಿಸಲು ಪಣ ತೊಟಿದ್ದಾರೆ ಮೇಯರ್‌. ಮಾಲಿನ್ಯಯುಕ್ತ ನಗರವೀಗ ಲಾಕ್‌ಡೌನ್‌ ಕಾರಣದಿಂದ ಹೊಸದಾಗಿ ಕಂಗೊಳಿಸುತ್ತಿದೆ. ಇದೇ ಹಿನ್ನೆಲೆಯಲ್ಲಿ ಮೇಯರ್‌ ಪರಿಸರ ಸ್ನೇಹಿ ನಗರ ವಾಗಿಸಲು ಎರಡು ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಒಂದು-ಇಡೀ ನಗರದಲ್ಲಿ 35 ಕಿ.ಮೀ ಸೈಕಲ್‌ ಮಾರ್ಗವನ್ನು ನಿರ್ಮಿಸುತ್ತಿದ್ದಾರೆ. ಇನ್ನೊಂದು-2030ರ ಒಳಗೆ ಇಡೀ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಎಲೆಕ್ಟ್ರಿಕ್‌ಗೆ ವರ್ಗಾಯಿಸುತ್ತಾರೆ. ಸದಾ ಟ್ರಾಫಿಕ್‌ ಜಾಮ್‌ಗೆ ಹೆಸರಾಗುತ್ತಿದ್ದ ನಗರದಲ್ಲಿ ಕಾರುಗಳನ್ನು ಕಡಿಮೆ ಮಾಡುವ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಿಸುವ ಹಾಗೂ ಬೈಸಿಕಲ್‌ ಅನ್ನು ಪ್ರೀತಿಸುವ ಮಾತುಗಳು ಕೇಳಿಬರುತ್ತಿವೆ. ಬ್ರಿಟನ್‌ನಲ್ಲಿ ಕೆಲವು ಬೈಸಿಕಲ್‌ ಅಂಗಡಿಯವರು ಗ್ರಾಹಕರ ಬೇಡಿಕೆ ಪೂರೈಸಲು ಹೆಣಗುತ್ತಿದ್ದಾರಂತೆ. ದಿನಕ್ಕೆ 50ಕ್ಕೂ ಹೆಚ್ಚು ಬೈಸಿಕಲ್‌ಗ‌ಳನ್ನು ಮಾರಲಾಗುತ್ತಿದೆ. ಅಷ್ಟೇ ಅಲ್ಲ, ಗ್ಯಾರೇಜಿನಲ್ಲಿದ್ದ ಬೈಸಿಕಲ್‌ಗ‌ಳೆಲ್ಲ ಈಗ ರಸ್ತೆಗಿಳಿದಿವೆಯಂತೆ. ಅಲ್ಲಿನ ಬೈಸಿಕಲ್‌ ಉದ್ಯಮದವರ ಮುಖದಲ್ಲೀಗ ಮಂದಹಾಸ. ನಮ್ಮ ಉದ್ಯಮಕ್ಕೆ ಈಗ ಬೇಡಿಕೆ ಬಂದಿದೆ. ಬ್ರಿಟನ್‌ನ ಹಲವು ನಗರಗಳಲ್ಲಿ ಬೈಸಿಕಲ್‌ ಬೇಡಿಕೆ ಹೆಚ್ಚಾಗುವ ಲಕ್ಷಣಗಳಿವೆ. ಬೈಸಿಕಲ್‌ಗ‌ಳಿಗೆ ಮುಂದಕ್ಕೆ ನಮ್ಮಲ್ಲೂ ಬೇಡಿಕೆ ಅತಿಯಾಗಿ ಹೆಚ್ಚಲೂಬಹುದು.

ಆರೋಗ್ಯವಾಗಿರಿ
ಆರೋಗ್ಯ ಸಮತೋಲನವನ್ನು ಕಾಪಾಡಿಕೊಳ್ಳಲು ಸೈಕ್ಲಿಂಗ್‌ ಅತ್ಯುಪ ಯುಕ್ತ. ಅದು ಆರೋಗ್ಯಕರ ಜೀವನ ನಡೆಸಲು ಸಹಕಾರಿ, ದೈಹಿಕ ಸಾಮರ್ಥ್ಯ ಹೆಚ್ಚಿಸುತ್ತದೆ. ಹೃದ್ರೋಗ, ಸಂಧಿವಾತ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಬೊಜ್ಜು ಇತ್ಯಾದಿ ಜೀವನಶೈಲಿಯ ಕಾಯಿಲೆಗಳು ಬರದಂತೆ ತಡೆಯುವಲ್ಲಿ ಉಪಯುಕ್ತ.
– ಡಾ| ಜಿ. ಅರುಣ್‌ ಮಯ್ಯ
ಪ್ರೊಫೆಸರ್‌ ಮತ್ತು ಡೀನ್‌, ಫಿಸಿಯೋಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next