Advertisement

Athletics: ವಿಶ್ವ ಚಾಂಪಿಯನ್‌ಶಿಪ್‌ ಲಾಂಗ್‌ಜಂಪ್‌: ಜೆಸ್ವಿನ್‌ಗೆ ಫೈನಲ್‌ ಅರ್ಹತೆ

11:04 PM Aug 23, 2023 | Team Udayavani |

ಬುಡಾಪೆಸ್ಟ್‌ (ಹಂಗೇರಿ): ರಾಷ್ಟ್ರೀಯ ದಾಖಲೆ ಹೊಂದಿರುವ ಜೆಸ್ವಿನ್‌ ಅಲ್ಡ್ರಿನ್‌ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಲಾಂಗ್‌ಜಂಪ್‌ ಸ್ಪರ್ಧೆಯ ಫೈನಲ್‌ ತಲುಪಿದ್ದಾರೆ. ಆದರೆ ಭರವಸೆಯ ಮುರಳಿ ಶ್ರೀಶಂಕರ್‌ ಸಾಮರ್ಥ್ಯಕ್ಕೂ ಕಳಪೆ ಪ್ರದರ್ಶನ ನೀಡಿದರು.

Advertisement

8.42 ಮೀಟರ್‌ಗಳ ರಾಷ್ಟ್ರೀಯ ದಾಖಲೆ ಹೊಂದಿರುವ ಜೆಸ್ವಿನ್‌ ಅಲ್ಡ್ರಿನ್‌ ಮೊದಲ ನೆಗೆತದಲ್ಲಿ 8.0 ಮೀ. ದಾಖಲಿಸಿದರು. ಮುಂದಿನೆರಡು ನೆಗೆತಗಳು ಫೌಲ್‌ ಆದವು. ಆದರೆ 12ನೇ ಹಾಗೂ ಕೊನೆಯ ಸ್ಥಾನಿಯಾಗಿ ಫೈನಲ್‌ ಪ್ರವೇಶಿಸಲು ಮೊದಲ ನೆಗೆತ ಪರ್ಯಾಪ್ತವೆನಿಸಿತು. 8.15 ಮೀ. ದೂರದ ಸಾಧನೆಗೈದವರು ಅಥವಾ ಎರಡೂ ಅರ್ಹತಾ ವಿಭಾಗಗಳ ಮೊದಲ 12 ಸ್ಪರ್ಧಿಗಳು ಫೈನಲ್‌ ಪ್ರವೇಶ ಪಡೆಯುತ್ತಾರೆ.

ಜೆಸ್ವಿನ್‌ ಅಲ್ಡ್ರಿನ್‌ ಗ್ರೂಪ್‌ “ಬಿ” ಅರ್ಹತಾ ಸುತ್ತಿನಲ್ಲಿ 6ನೇ ಸ್ಥಾನಿಯಾದರು. ಎರಡೂ ವಿಭಾಗಳನ್ನೊಳಗೊಂಡಂತೆ 12ನೇ ಸ್ಥಾನಿಯಾದರು. ಫೈನಲ್‌ ಗುರುವಾರ ನಡೆಯಲಿದೆ.
ಮುರಳಿ ಶ್ರೀಶಂಕರ್‌ “ಎ” ವಿಭಾಗದಿಂದ ಅರ್ಹತಾ ಸ್ಪರ್ಧೆಗೆ ಇಳಿದಿದ್ದರು. ಇಲ್ಲಿ ಕ್ರಮವಾಗಿ 7.74 ಮೀ., 7.66 ಮೀ. ಹಾಗೂ 6.70 ಮೀ. ದೂರದ ಕಳಪೆ ನಿರ್ವಹಣೆಯೊಂದಿಗೆ 12ನೇ ಸ್ಥಾನಕ್ಕೆ ಕುಸಿದರು. ಒಟ್ಟು 24 ಸ್ಪರ್ಧಿಗಳಲ್ಲಿ 24ನೇ ಸ್ಥಾನಿಯಾದರು.

ಮುರಳಿ ಶ್ರೀಶಂಕರ್‌ ಜೆಸ್ವಿನ್‌ಗಿಂತ ಪ್ರಭಾವಶಾಲಿ ಹಾಗೂ ಸ್ಥಿರ ಪ್ರದರ್ಶನ ಕಾಯ್ದುಕೊಂಡು ಬಂದಿದ್ದರು. ಕಳೆದ ಜೂನ್‌ನಲ್ಲಿ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ 8.41 ಮೀ. ಸಾಧನೆ ಗೈದಿದ್ದರು. ಅನಂತರ ನಡೆದ ಏಷ್ಯನ್‌ ಚಾಂಪಿಯನ್‌ ಶಿಪ್ಸ್‌ನಲ್ಲಿ 8.37 ಮೀ. ದೂರಕ್ಕೆ ನೆಗೆದು ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿ ದ್ದರು. ಆದರೆ ಇಲ್ಲಿ ಮಾತ್ರ ಯಶಸ್ಸು ಲಭಿಸಲಿಲ್ಲ.

ಜೆಸ್ವಿನ್‌ ಅಲ್ಡ್ರಿನ್‌ ಗೆ ಇದು 2ನೇ ವಿಶ್ವ ಚಾಂಪಿಯನ್‌ಶಿಪ್‌ ಆಗಿದೆ. ಅಮೆರಿಕದಲ್ಲಿ ನಡೆದ 2022ರ ಕೂಟದಲ್ಲಿ ಅವರು ಅರ್ಹತಾ ಸುತ್ತಿನಲ್ಲೇ ಹೊರಬಿದ್ದಿದ್ದರು.
ಲಾಂಗ್‌ಜಂಪ್‌ ಫೈನಲ್‌ನ 12 ಮಂದಿ ಆ್ಯತ್ಲೀಟ್‌ಗಳಲ್ಲಿ ಮೂವರು ಜಮೈಕಾದವರಾಗಿದ್ದಾರೆ. ಇವರಲ್ಲಿ ವೇನ್‌ ಪಿನ್ನಾಕ್‌ 8.54 ಮೀ. ದೂರದ ಒಂದೇ ನೆಗೆತಕ್ಕೆ ಫೈನಲ್‌ ಕಣಕ್ಕೆ ಹೋಗಿ ಬಿದ್ದರು. ಕ್ಯಾರಿ ಮೆಕ್‌ಲಿಯಾಡ್‌ (8.19 ಮೀ.) ಮತ್ತು ತಜಯ್‌ ಗೇಲ್‌ (8.12 ಮೀ.) ಉಳಿದಿಬ್ಬರು. ಇವರಲ್ಲಿ ಪಿನ್ನಾಕ್‌ ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next