ಲಂಡನ್: ಪ್ರತಿಭಾನ್ವಿತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಗುರುವಾರ ವಿಶ್ವ ಆ್ಯತ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಅವರ ಮೇಲೆ ಭಾರತೀಯರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಭಾರತದ ನೀರಸ ನಿರ್ವಹಣೆಗೆ ಸ್ವಲ್ಪವಾದರೂ ಜೀವ ತುಂಬುವ ಕೆಲಸವನ್ನು ನೀರಜ್ ಮಾಡಲಿದ್ದಾರೆಂದು ನಂಬಲಾಗಿದೆ.
19ರ ಹರೆಯದ ನೀರಜ್ ಜೂನಿಯರ್ ಹಂತದಲ್ಲಿ ವಿಶ್ವ ದಾಖಲೆಗೈದ ಜಾವೆಲಿನ್‌ಪಟು ಆಗಿದ್ದಾರೆ. ಹಾಗಾಗಿ ಅವರು ಪದಕ ಗೆಲ್ಲಬಹುದೆಂದು ನಿರೀಕ್ಷೆ ಇಡಲಾಗಿದೆ. ಅವರು ಗುರುವಾರ ಅರ್ಹತಾ ಸುತ್ತಿನಲ್ಲಿ ಆಡುವ ಮೂಲಕ ತನ್ನ ಸ್ಪರ್ಧೆ ಆರಂಭಿಸಲಿದ್ದಾರೆ.
ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ದೇವಿಂದರ್ ಸಿಂಗ್ ಕಾಂಗ್ ಸ್ಪರ್ಧಿಸಲಿರುವ ಇನ್ನೋರ್ವ ಭಾರತೀಯ ಆ್ಯತ್ಲೀಟ್ ಆಗಿದ್ದಾರೆ. ಕಾಂಗ್ ಕಳೆದ ಜೂನ್‌ನಲ್ಲಿ ಮಾರಿಜುವಾನ ಸೇವಿಸಿದ್ದಕ್ಕೆ ಸಿಕ್ಕಿ ಬಿದ್ದಿದ್ದರು. ಆದರೆ ಈ ನಿಷೇಧಿತ ದ್ರವ್ಯ ವಿಶ್ವ ದ್ರವ್ಯ ವಿರೋಧಿ ದಳ (ವಾಡಾ)ದ ನಿರ್ದಿಷ್ಟ ಪಟ್ಟಿಯಲ್ಲಿ ಇರುವ ಕಾರಣ 25 ಸದಸ್ಯರ ಭಾರತೀಯ ತಂಡದಲ್ಲಿ ಹೆಸರಿಸಲಾಗಿತ್ತು. ನಿರ್ದಿಷ್ಟ ಪಟ್ಟಿಯಲ್ಲಿದ್ದ ಕಾರಣ ಅಮಾನತು ಮಾಡಲಾಗುವುದಿಲ್ಲ.
ಚೋಪ್ರಾ ಮಾತ್ರ ಪದಕ ಗೆಲ್ಲುವ ಭಾರತದ ಫೇವರಿಟ್ ಆ್ಯತ್ಲೀಟ್ ಆಗಿದ್ದಾರೆ. ಅವರು ಈ ಋತುವಿನಲ್ಲಿ 85.63 ಮೀ. ದೂರ ಎಸೆಯುವ ಮೂಲಕ ತನ್ನ ಶ್ರೇಷ್ಠ ನಿರ್ವಹಣೆಯನ್ನು ದಾಖಲಿಸಿದ್ದರು. ಇದರಿಂದಾಗಿ ಅವರು ಐಎಎಎಫ್ ರ್‍ಯಾಂಕಿಂಗ್‌ನಲ್ಲಿ 14ನೇ ರ್‍ಯಾಂಕ್ ಪಡೆದಿದ್ದರು. 86.48 ಮೀ. ಎಸೆದಿರುವುದು ಅವರ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯಾಗಿತ್ತು. ಕಳೆದ ವರ್ಷ ಜೂನಿಯರ್ ಮಟ್ಟದಲ್ಲಿ ವಿಶ್ವದಾಖಲೆಗೈಯುವಾಗ ಅವರು ಈ ಸಾಧನೆ ಮಾಡಿದ್ದರು. ಪದಕ ಗೆಲ್ಲಬೇಕಾದರೆ ಅವರು ಕಡಿಮೆಪಕ್ಷ ಇನ್ನೊಂದು ಮೀ. ದೂರ ಎಸೆಯಲು ಪ್ರಯತ್ನಿಸಬೇಕಾದ ಅಗತ್ಯವಿದೆ.
ಕಣದಲ್ಲಿರುವ ಇಬ್ಬರು ಜಾವೆಲಿನ್ ಎಸೆತಗಾರರಾದ ಜೋಹಾನೆಸ್ ವೆಟರ್ ಮತ್ತು ಹಾಲಿ ಒಲಿಂಪಿಕ್, ವಿಶ್ವ ಚಾಂಪಿಯನ್ ಥಾಮಸ್ ರೋಹÉರ್ ಈ ವರ್ಷ ಈಗಾಗಲೇ 90 ಮೀ. ದೂರ ಎಸೆದ ಸಾಧನೆ ಮಾಡಿದ್ದಾರೆ. ಎಂಟು ಆ್ಯತ್ಲೀಟ್‌ಗಳು 87.64 ಮೀ.ಗಿಂತ ಹೆಚ್ಚಿನ ದೂರ ಎಸೆದಿದ್ದಾರೆ. 2015ರ ಬೀಜಿಂಗ್‌ನಲ್ಲಿ ನಡೆದ ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಕಂಚು ಗೆದ್ದವರು 87.64 ಮೀ. ದೂರ ಎಸೆದಿದ್ದರು.
ಚೋಪ್ರಾ ಈ ಋತುವಿನಲ್ಲಿ ಮೂರು ಬಾರಿ 85 ಮೀ.ಗಿಂತ ಹೆಚ್ಚಿನ ದೂರ ಎಸೆದಿದ್ದಾರೆ. ಇದರಲ್ಲಿ ಎರಡು ಬಾರಿ ಪ್ಯಾರಿಸ್ ಮತ್ತು ಮೊನಾಕೊದಲ್ಲಿ ನಡೆದ ಡೈಮಂಡ್ ಲೀಗ್ ಕೂಟದಲ್ಲಿ ಎಸೆದಿದ್ದಾರೆ. ಈ ಎರಡು ಕೂಟಗಳಲ್ಲಿ ಅವರು ಅನುಕ್ರಮವಾಗಿ 5 ಮತ್ತು 7ನೇ ಸ್ಥಾನ ಪಡೆದಿದ್ದರು.
ಕಳೆದ 10 ದಿನಗಳಿಂದ ಇಲ್ಲಿ ಕಠಿನ ಅಭ್ಯಾಸ ನಡೆಸುತ್ತಿದ್ದೇನೆ. ಆರಂಭದ ಕೆಲವು ದಿನ ಸ್ವಲ್ಪ ಕಷ್ಟವಾಗಿತ್ತು. ಆದರೆ ಇದೀಗ ಇಲ್ಲಿನ ಹವಾಮಾನಕ್ಕೆ ಹೊಂದಿಕೊಂಡಿದ್ದೇನೆ ಎಂದು ಚೋಪ್ರಾ ಹೇಳಿದ್ದಾರೆ. ಚೋಪ್ರಾ ಅವರು ಕೋಚ್ ಇಲ್ಲದೇ ಇಲ್ಲಿಗೆ ಆಗಮಿಸಿದ್ದಾರೆ. ಭಾರತೀಯ ಆ್ಯತ್ಲೆಟಿಕ್ ಫೆಡರೇಶನ್ ನನಗೆ ಕೋಚ್ ಒಬ್ಬರನ್ನು (ಜರ್ಮನಿಯ ಜಾವೆಲಿನ್ ಗ್ರೇಟ್ ಯುವೆ ಹಾನ್) ನೇಮಕ ಮಾಡಿದೆ. ಆದರೆ ಅವರೀಗ ಆಸ್ಟ್ರೇಲಿಯ ತಂಡದ ಜತೆ ಒಪ್ಪಂದದಲ್ಲಿದ್ದಾರೆ. ಹಾಗಾಗಿ ಈ ಕೂಟದ ವೇಳೆ ನನಗೆ ತರಬೇತಿ ನೀಡಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದವರು ತಿಳಿಸಿದರು.
ಟ್ರ್ಯಾಕ್ ಸ್ಪರ್ಧೆಗಳಲ್ಲಿ ದ್ಯುತಿ ಚಂದ್ (ವನಿತೆಯರ 100 ಮೀ.) ಮುಹಮ್ಮದ್ ಅನಾಸ್ ಯಾಹಿಯ (ಪುರುಷರ 400 ಮೀ.) ಮತ್ತು ಸಿದ್ಧಾಂತ್ ತಿಂಗಳಾಯ (ಪುರುಷರ 110 ಮೀ. ಹರ್ಡಲ್ಸ್) ಮೊದಲ ಸುತ್ತಿನ ಹೀಟ್‌ನಲ್ಲಿಯೇ ಸೋತು ಹೊರಬಿದ್ದಿದ್ದಾರೆ. ನಿರ್ಮಲಾ ಶೆರಾನ್ ವನಿತೆಯರ 400 ಮೀ.ನಲ್ಲಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ.