ಉಳ್ಳಾಲ: ಏಡ್ಸ್ ಸಂತ್ರಸ್ತ ಮಕ್ಕಳ ಆರೈಕೆ ಅತ್ಯಗತ್ಯವಾಗಿದ್ದು ಆ ನಿಟ್ಟಿನಲ್ಲಿ ಮಂಗಳೂರು ಹೃದಯಭಾಗದಲ್ಲಿ ಸರಕಾರದಿಂದ ನಿರ್ಮಿಸಲು ಉದ್ದೇಶಿಸಲಾದ ಸಂತ್ರಸ್ತ ಮಕ್ಕಳ ಆಶ್ರಯತಾಣಕ್ಕಾಗಿ ಕಣಚೂರು ಸಂಸ್ಥೆ ವತಿಯಿಂದ ಸಹಕಾರ ನೀಡಲಾಗುತ್ತಿದೆ ಎಂದು ನಾಟೆಕಲ್‌ನ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಯು. ಕಣಚೂರು ಮೋನು ಅಭಿಪ್ರಾಯಪಟ್ಟರು.
ನಾಟೆಕಲ್ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಆಶ್ರಯದಲ್ಲಿ ಆಸ್ಪತ್ರೆ ಆವರಣದಲ್ಲಿ ಶನಿವಾರ ಜರಗಿದ ವಿಶ್ವ ಏಡ್ಸ್ ದಿನ-2018 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಏಡ್ಸ್ ಜಾಗೃತಿ ಕಾರ್ಯಕ್ರಮಗಳಿಂದ ಜನರಲ್ಲಿ ಅರಿವು ಮೂಡಿಸುವುದು ವೈದ್ಯಕೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಕಣಚೂರು ಸಂಸ್ಥೆ ಹಲವು ಜಾಗೃತಿ ಕಾರ್ಯ ಕ್ರಮಗಳನ್ನು ನಡೆಸುತ್ತಾ ಬಂದಿದೆ ಎಂದರು.
ಕಣಚೂರು ಸಂಸ್ಥೆ ನಿರ್ದೇಶಕ ಅಬ್ದುಲ್ ರಹಿಮಾನ್ ಮಾತನಾಡಿ, ಕೋಟೆಕಾರು, ಮುಡಿಪು ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಟಕಗಳ ಮೂಲಕ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದ್ದಾರೆ. ವಿದ್ಯಾರ್ಥಿಗಳು ರಚಿಸಿರುವ ಎಚ್‌ಐವಿ ಕುರಿತ ಜಾಗೃತಿ ವೀಡಿಯೋ ಪರಿಣಾಮಕಾರಿಯಾಗಿದೆ. ಅದನ್ನು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
ಕಣಚೂರು ಸಮುದಾಯ ಆರೋಗ್ಯ ವಿಭಾಗದ ಕರ್ನಲ್ ಕೆ.ಜಿ. ಕಿರಣ್, ವೈದ್ಯಕೀಯ ಕಾಲೇಜು ಆಡಳಿತ ನಿರ್ದೇಶಕ ಡಾ| ರೋಹನ್ ಮೋನಿಸ್, ವೈದ್ಯಕೀಯ ಅಧೀಕ್ಷಕ ಡಾ| ದೇವಿಪ್ರಸಾದ್ ಶೆಟ್ಟಿ, ಸಹ ಡೀನ್ ಡಾ| ಶ್ರೀಶ ಖಂಡಿಗ, ಕಣಚೂರು ನರ್ಸಿಂಗ್ ಸೈನ್ಸ್‌ನ ಪ್ರಾಂಶುಪಾಲೆ ರೆನಿಲ್ಡಾ ಶಾಂತಿ ಲೋಬೋ ಹಾಗೂ ಕಣಚೂರು ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಹೇಮಲತಾ ಉಪಸ್ಥಿತರಿದ್ದರು.
ನಾಗರಾಜ್ ನಿರೂಪಿಸಿದರು. ಡಾ| ಸಬಾ ಮನ್ಸೂರ್ ಸ್ವಾಗತಿಸಿದರು. ಡಾ| ಸತೀಶ್ ಮೋರೆ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಎಚ್‌ಐವಿ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ರಚಿಸಿದ ಕಿರುಚಿತ್ರಗಳಿಗೆ ಪ್ರಶಸ್ತಿ ವಿತರಿಸಲಾಯಿತು.