ಕೋಲಾರ: ಅಪ್ರಾಪ್ತರ ಬಾಲ್ಯ ವಿವಾಹ ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಕಲೆಕ್ಟಿವ್ ಆ್ಯಕ್ಷನ್ ನೆಟ್‌ವರ್ಕ್, ಚೈಲ್ಡ್ ರೈಟ್ಸ್ ಟ್ರಸ್ಟ್, ಅರ್ಪಣಂ ಸಂಸ್ಥೆ ಬಾಗೇಪಲ್ಲಿ ಇವರ ಸಹ ಯೋಗದಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಷೇಧ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ: ಸಾಮೂಹಿಕ ವಿವಾಹಗಳ ಸಂದರ್ಭದಲ್ಲಿ, ಆರ್ಥಿಕ ತೊಂದರೆ, ಹೀಗೆ ವಿವಿಧ ರೀತಿಯ ತೊಂದರೆ ಗಳಿಂದ ಬಾಲ್ಯ ವಿವಾಹಗಳು ಆಗುತ್ತಿವೆ. ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ರಕ್ಷಣೆಗೆ ವಿವಿಧ ಕಾನೂನುಗಳನ್ನು ರೂಪಿಸಲಾಗಿದೆ. ಶಿಕ್ಷಣವು ಮೂಲಭೂತ ಹಕ್ಕಾಗಿದೆ. ಆದರೆ ಆಸ್ತಿಯ ಹಕ್ಕನ್ನು ಸಾಂವಿಧಾನಿಕ ಹಕ್ಕಾಗಿ ಗುರುತಿಸಲ್ಪಟ್ಟಿದೆ. ಶಿಕ್ಷಣವನ್ನೇ ಆಸ್ತಿಯನ್ನಾಗಿ ಮಾಡಿ ಅಂದರೆ ಮಕ್ಕಳಿಗಾಗಿ ಆಸ್ತಿ ಮಾಡ ಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದರು.
ಬಾಲ್ಯವಿವಾಹ ತಡೆಗಟ್ಟಿ: 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ವಿವಾಹ ನೆರವೇರಿಸಿದ್ದಲ್ಲಿ ಕಾನೂನು ಚೌಕಟ್ಟಿನಲ್ಲಿ ಇದು ಅಪರಾಧ ವಾಗಿದ್ದು,ಕಾನೂನಿನ ಮಾನ್ಯತೆ ಇರುವುದಿಲ್ಲ. ಬಾಲ್ಯವಿವಾಹ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಇದ್ದಲ್ಲಿ ತಕ್ಷಣ ಅಂತಹ ಬಾಲ್ಯ ವಿವಾಹವನ್ನುತಡೆಯಬೇಕು.ಮಹಿಳೆಯರಿಗೆ ಎಲ್ಲಾ ರಂಗಗಳಲ್ಲೂ ಶೇ.33 ರಷ್ಟು ಮೀಸಲಾತಿ ಸೌಲಭ್ಯಕಲ್ಪಿಸಲಾಗಿದೆ ಎಂದರು.
ಸಮನ್ವಯತೆ ಸಾಧಿಸಿ ತಡೆಯಬೇಕಿದೆ: ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಸಂದರ್ಭದಲ್ಲಿ ಹಲವಾರು ಬಾಲ್ಯ ವಿವಾಹಗಳು ಆಗಿರುವುದು ಮಾಹಿತಿ ಇದ್ದು, ಇನ್ನು ಮುಂದೆ ಆಗುವ ಬಾಲ್ಯವಿವಾಹಗಳನ್ನು ವಿವಿಧ ಇಲಾಖೆಗಳು ಸಮನ್ವಯತೆ ಸಾಧಿಸಿ ತಡೆಯಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟುವಕುರಿತುಕೈಪಿಡಿ ಬಿಡುಗಡೆ ಮಾಡಲಾಯಿತು. ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಎಂ.ಜಿ.ಪಾಲಿ, ಚೈಲ್ಡ್ ರೈಟ್ಸ್ ಟ್ರಸ್ಟ್ ನ ಕಾರ್ಯಾಕಾರಿ ನಿರ್ದೇಶಕ ದೇವ ಶರ್ಮಾ, ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಚೌಡಪ್ಪ, ಜಿಲ್ಲಾ ವಕೀಲರ ಸಂಘದ ಕಾರ್ಯ ದರ್ಶಿ ರಘುಪತಿ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ರಮೇಶ್, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಕೆ.ಎಸ್.ಗಣೇಶ್, ಗಮನ ಮಹಿಳಾ ಸಮೂಹದ ಶಾಂತಮ್ಮ, ಕ್ಯಾನ್ ನೆಟ್‌ವರ್ಕ್‌ನ ನಾರಾಯಣಸ್ವಾಮಿ, ಚೈಲ್ಡ್ ಲೈನ್‌ನ ಶಂಕರ್ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಪಂ ಪಿಡಿಒಗಳು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು ಉಪಸ್ಥಿತರಿದ್ದರು.