Advertisement

ಅಂಕ ಗಳಿಕೆ: ಎಸೆಸೆಲ್ಸಿ ಮಕ್ಕಳಿಗೆ ಕಾರ್ಯಾಗಾರ

10:55 AM Mar 24, 2022 | Team Udayavani |

ಬೆಳ್ತಂಗಡಿ: ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆ ಮೇಲೆ ಬಿದ್ದಿದ್ದ ಕೊರೊನಾ ಕರಿಛಾಯೆ ಪ್ರಸಕ್ತ ವರ್ಷ ಮಾಸುತ್ತಾ ಬಂದಿದ್ದರಿಂದ ಶಿಕ್ಷಣ ಇಲಾಖೆ ಎಸೆಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಆದರೆ ಕಠಿನ ವಿಷಯಗಳೆಡೆಗೆ ಮಕ್ಕಳ ಆಸಕ್ತಿ ಕ್ಷೀಣಿಸಬಾರದು ಎನ್ನುವ ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯಡಿ ಎಸೆಸೆಲ್ಸಿ ಮಕ್ಕಳಿಗೆ ವಿಷಯವಾರು ಪೂರ್ವಸಿದ್ಧತೆ ಕಾರ್ಯಾಗಾರ ನಡೆಸಿದೆ.

Advertisement

ಕಳೆದ ಎರಡು ವರ್ಷಗಳಿಂದ ಆನ್‌ಲೈನ್‌ ತರಗತಿಯಲ್ಲೇ ದಿನ ದೂಡಿದ್ದ ಮಕ್ಕಳಿಗೆ ಪ್ರಸಕ್ತ ವರ್ಷ ತರಗತಿಗೆ ನಂಟು ಬಿದ್ದಿದ್ದರಿಂದ ಮಕ್ಕಳಿಂದ ಹೆಚ್ಚಾಗಿ ಪೋಷಕರಿಗೆ ರಿಲೀಫ್‌ ಸಿಕ್ಕಂತಾಗಿದೆ. ಕಳೆದ ಅಕ್ಟೋಬರ್‌ ತಿಂಗಳಿಂದ ಮಕ್ಕಳು ನಿರಂತರ ತರಗತಿಗೆ ಹಾಜರಾಗಿರುವುದರಿಂದ ಈ ವರ್ಷ ಫಲಿತಾಂಶದ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ.

ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ ಹಿನ್ನೆಲೆ ಆಬೆjಕ್ಟಿವ್‌ ಮಾದರಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಈ ವರ್ಷ ರಾಜ್ಯದಲ್ಲಿ ಮಾ.28 ರಿಂದ ಎ.11 ರವರೆಗೆ ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧತೆ ಕೈಗೊಂಡಿದೆ.

ಮೂರು ತಾಸು ಪರೀಕ್ಷೆಗೆ ಹಾಜರಾಗಬೇಕಿರುವುದರಿಂದ ಮಕ್ಕಳ ಮನಃ ಸ್ಥಿತಿ ಸರಿಹೊಂದಿಸುವ ಜತೆಗೆ ಉತ್ತಮ ಅಂಕ ಫಸಲಿಗಾಗಿ ಶಿಕ್ಷಣ ಇಲಾಖೆ ನಿರಂತರ ಪುನರ್‌ ಮನನ ತರಗತಿ ಹಮ್ಮಿಕೊಳ್ಳುತ್ತಿದೆ. ವಿಷಯವಾರು ಹಿಂದುಳಿದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಈಗಾಗಲೆ ಕಾರ್ಯಾಗಾರ ನಡೆಸಲಾಗಿದೆ.

ಪ್ರತೀ ವರ್ಷ ಮರು ಪರೀಕ್ಷೆ ಬರೆಯುವ ಸಂಖ್ಯೆ ಕನಿಷ್ಠ 100 ಅಂಕಿ ಮೀರುತ್ತಿತ್ತು. ಆದರೆ ಕಳೆದ ಪರೀಕ್ಷೆಗೆ ಹಾಜರಾದವರೆಲ್ಲ ತೇರ್ಗಡೆ ಹೊಂದಿದ್ದರಿಂದ ಈ ವರ್ಷ ಮರು ಪರೀಕ್ಷೆ ಬರೆಯುವವರ ಸಂಖ್ಯೆ ತಾಲೂಕಿನಲ್ಲಿ ಕೇವಲ 13 ಕ್ಕಿಳಿದಿದೆ ಎಂಬುದು ಗಮನಾರ್ಹ. ತಾಲೂಕಿನ 13 ಶಾಲೆಗಳಲ್ಲಿ ತುಳು ಪಠ್ಯ ಬೋಧನೆ ಇರುವುದರಿಂದ ತೃತೀಯ ಭಾಷೆ ತುಳು ಬರೆಯುವ ಮಕ್ಕಳ ಸಂಖ್ಯೆ ಹೆಚ್ಚಿರಲಿದೆ.

Advertisement

‌ಕಳೆದ ಬಾರಿ ಪ್ರಥಮ, ದ್ವಿತೀಯ, ತೃತೀಯ ಭಾಷೆ ಸೇರಿ ತಲಾ 40 ಅಂಕದಂತೆ 120 ಅಂಕ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಸೇರಿ 120 ಅಂಕ ಸೇರಿ ಎರಡೇ ಪರೀಕ್ಷೆ ಹಮ್ಮಿಕೊಂಡಿತ್ತು. ಆದರೆ ಈ ವರ್ಷ 6 ವಿಷಯವಾರು ಪ್ರತ್ಯೇಕ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆ, ಗಣಿತ, ಸಮಾಜ ಹಾಗೂ ವಿಜ್ಞಾನ ಪರೀಕ್ಷೆ ಬರೆಯಲು ಹೆಚ್ಚುವರಿ 15 ನಿಮಿಷದ ಸಮಯವಕಾಶ ನೀಡಲಾಗಿದೆ.

4,091 ವಿದ್ಯಾರ್ಥಿಗಳು

ಬೆಳ್ತಂಗಡಿ ತಾಲೂಕಿನ ಒಟ್ಟು 4,091 ಮಂದಿ (ಬಾಲಕರು-2126, ಬಾಲಕಿಯರು- 1965) ಎಸೆಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳ ದಾಖಲಾತಿಯಿದೆ. ಪ್ರತೀ ವರ್ಷ 13 ಕೇಂದ್ರವಿರುತ್ತಿದ್ದು, ಪ್ರಸಕ್ತ ವರ್ಷ ಬೆದ್ರಬೆಟ್ಟು ಹೆಚ್ಚುವರಿ ಪರೀಕ್ಷಾ ಕೇಂದ್ರ ಸೇರಿ 14 ಪರೀಕ್ಷಾ ಕೇಂದ್ರವನ್ನು ಮಾಡಲಾಗಿದೆ.

ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತೀ ಕೇಂದ್ರದಲ್ಲಿ ಎರಡು ಪ್ರತ್ಯೇಕ ಪರೀಕ್ಷಾ ಕೊಠಡಿ ಕಾಯ್ದಿರಿಸಲಾಗುತ್ತದೆ. ಆದರೆ ಈ ವರ್ಷ ಕೋವಿಡ್‌ ಕೇರ್‌ ಸೆಂಟರ್‌ ಇರುವುದಿಲ್ಲ. ಉಳಿದಂತೆ ಆರೋಗ್ಯ ತಪಾಸಣೆ, ಮಾಸ್ಕ್ ಎಂದಿನಂತೆ ಇರಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಸಿದ್ಧತೆ ನಡೆದಿದೆ

ಮಾ. 28 ರಿಂದ ಎ.11ರ ವರೆಗೆ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆಗೆ ಶಾಲಾಹಂತದಿಂದ ಜಿಲ್ಲಾಹಂತದವರೆಗೆ ಸಿದ್ಧತೆ ನಡೆಸಲಾಗಿದೆ. ಮಕ್ಕಳು ಧೃತಿಗೆಡದೆ ಖುಷಿಯಿಂದ ಪರೀಕ್ಷೆಗೆ ಹಾಜರಾಗಬೇಕು. -ವಿರೂಪಾಕ್ಷಪ್ಪ ಎಚ್‌.ಎಸ್‌, ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ.

Advertisement

Udayavani is now on Telegram. Click here to join our channel and stay updated with the latest news.

Next