ಸಿಂದಗಿ: ಮಕ್ಕಳು ನಲಿಯುತ್ತ ಕಲಿಯಲಿ ಎಂಬ ಕಾರಣಕ್ಕೆ ಸರ್ಕಾರ ಜಾರಿಗೊಳಿಸಿರುವ ನಲಿ-ಕಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಹೇಳಿದರು.
ಮಂಗಳವಾರ ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕಿನ ನಲಿ-ಕಲಿ ಶಿಕ್ಷಕರಿಗೆ ಹಮ್ಮಿಕೊಂಡಿರುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜ್ಞಾನ ಪ್ರವೇಶಿಸುವಿಕೆಯ ಹಂತದಲ್ಲಿರುವ ನಲಿಕಲಿ ಮಕ್ಕಳಿಗೆ ಪ್ರತಿಯೊಬ್ಬರೂ ಸಂದರ್ಭಕ್ಕನುಗುಣವಾಗಿ ತಮ್ಮ ಸಹಾಯ ಹಾಗೂ ಪ್ರೇರಣೆಯ ಮೂಲಕ ಜ್ಞಾನವನ್ನು ಕಟ್ಟಿಕೊಡಬೇಕು. ಅಂದಾಗ ಮಾತ್ರ ಭವಿಷ್ಯದ ಭಾರತ ಈ ಮಕ್ಕಳಿಂದ ಉಜ್ವಲಗೊಳ್ಳುತ್ತದೆ ಎಂದು ಹೇಳಿದರು.
ಕನ್ನಡ ಮಾಧ್ಯಮದ ತರಗತಿಗಳಲ್ಲಿ ನಲಿ-ಕಲಿ ಕಲಿಕಾ ವ್ಯವಸ್ಥೆಯಡಿ ಇಂಗ್ಲಿಷ್ ಬೋಧನೆಯನ್ನು ಪರಿಣಾಮಕಾರಿಯಾಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ತಿರ್ಮಾನಿಸಿದೆ. ಆದ್ದರಿಂದ ನಲಿ-ಕಲಿಯಲ್ಲಿ ಆಟ ಚಟುವಟಿಕೆಗಳ ಮೂಲಕ ಇಂಗ್ಲಿಷ್ ಕಲಿಸಲು ಶಿಕ್ಷಕರು ಮುಂದಾಗಬೇಕು ಎಂದು ಹೇಳಿದರು. ಕನ್ನಡ ಮಾಧ್ಯಮದ 1ರಿಂದ 3ನೇ ತರಗತಿಗಳಿಗೆನಲಿ-ಕಲಿ ಇಂಗ್ಲಿಷ್ ಪಠ್ಯದ ಜತೆಗೆ ಆ್ಯಕ್ಟಿವಿಟಿ ಕಾರ್ಡ್ ಕೂಡ ನೀಡಲಾಗುವುದು. ಈ ನಿಟ್ಟಿನಲ್ಲಿ ನಲಿ-ಕಲಿ ಶಿಕ್ಷಕರಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ತಾಲೂಕಿನಲ್ಲಿ 340 ಪ್ರಾಥಮಿಕ ಶಾಲೆಗಳಲ್ಲಿನ 484 ಘಟಕಗಳಲ್ಲಿ ಮಕ್ಕಳಿಗೆ ನಲಿಕಲಿ ಚಟುವಟಿಕೆ ಮೂಲಕಇಂಗ್ಲಿಷ್ ಕಲಿಸಲಾಗುತ್ತದೆ. ಪ್ರತಿ ಘಟಕದಲ್ಲಿ 30 ವಿದ್ಯಾರ್ಥಿಗಳು ಇರುತ್ತಾರೆ ಎಂದರು.
ಆ್ಯಕ್ಟಿವಿಟಿ ಕಾರ್ಡ್‌ಗಳು ಚಟುವಟಿಕೆ ಆಧಾರಿತ ಇಂಗ್ಲಿಷ್ ಕಲಿಕೆ ವಿಧಾನವಾಗಿದೆ. 1ರಿಂದ 3ನೇ ತರಗತಿಗಳ ಮಕ್ಕಳನ್ನು ತಲಾ 30 ವಿದ್ಯಾರ್ಥಿಗಳ ಯುನಿಟ್‌ಗಳಾಗಿ ವಿಂಗಡಿಸಲಾಗುವುದು. ಪ್ರತಿಯೊಂದು ಯುನಿಟ್‌ಗೆ ಒಂದರಂತೆ ಕಲಿಕಾ ಸಾಮಗ್ರಿ ಮತ್ತು ಕಲಿಕಾ ವಿಧಾನ ಒಳಗೊಂಡ ಒಂದು ಸೆಟ್ ಆ್ಯಕ್ಟಿವಿಟಿ ಕಾರ್ಡ್ ನೀಡಲಾಗುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಜೆ.ಬಿ. ಪಾಟೀಲ, ಗೀತಾ ಪಿರಗಾ, ಬಿ.ಎಸ್. ಟಕ್ಕಳಕಿ, ರೇಖಾ ಬಿಜ್ಜರಗಿ ಮಾತನಾಡಿ, ನಲಿಕಲಿ ಬೋಧನಾ ಪದ್ಧತಿಯಲ್ಲಿ ಪೂರ್ವ ಸಿದ್ಧತ ಹಂತ, ಕಲಿಕಾ ಪೂರಕ ಹಂತ, ಕಲಿಕಾಂಶ ಹಂತ, ಅಭ್ಯಾಸ ಹಂತ, ಬಳಕೆ ಹಂತ ಮತ್ತು ಮೌಲ್ಯಮಾಪನ ಹಂತ ಎನ್ನುವ ಕಲಿಕಾ ಗೋಪುರದ ಆರು ಹಂತಗಳಿರುತ್ತವೆ. ಶಿಕ್ಷಕ ಭಾಗಶಃ ಸಹಾಯ, ಶಿಕ್ಷಕರ ಸಂಪೂರ್ಣ ಸಹಾಯ, ಗೆಳೆಯನ ಭಾಗಶಃ ಸಹಾಯ ಮತ್ತು ಸ್ವ ಕಲಿಕೆ ಎಂಬ ಐದು ತಟ್ಟೆಗಳಿರುತ್ತದೆ. ಮಗು ಮೇಲಿನ ಆರು ಹಂತಗಳನ್ನು ತಟ್ಟೆಯ ಚಲನೆಯೊಂದಿಗೆ ತನ್ನ ಮೈಲಿಗಲ್ಲನ್ನು ಪೂರೈಸುತ್ತಾನೆ ಎಂದು ತಿಳಿಸಿದರು.
ಕಲಿಕಾ ಏಣಿ, ಮೆಟ್ಟಿಲು, ಲೋಗೊ, ಪ್ರಗತಿ ನೋಟ, ಕಾರ್ಡ, ವಾಚಕ, ಅಭ್ಯಾಸ ಪುಸ್ತಕ, ಮಕ್ಕಳ ಕಪ್ಪು ಹಲಗೆ, ಕಲಿಕಾ ಚಪ್ಪರ, ಗುಂಪು ತಟ್ಟೆ, ಹವಾಮಾನ ನಕ್ಷೆ ಇವು ನಲಿಕಲಿ ಪದ್ಧತಿಯಲ್ಲಿರುವ ಪರಿಕಲ್ಪನೆಗಳಿಂದ ಮಕ್ಕಳಲ್ಲಿ ಕಲಿಕೆ ಉಂಟಾಗುತ್ತದೆ. ಇವುಗಳ ಬಳಕೆಯ ಪ್ರಮಾಣ ಅಧಿಕಗೊಂಡಷ್ಟು ಮಗುವಿನ ಕಲಿಕೆ ಹೆಚ್ಚು ದೃಢಿಕರಣಗೊಳ್ಳುವುದು ಮತ್ತು ಕಲಿಕಾ ಮಟ್ಟ ಮೇಲ್ಮುಖವಾಗಿ ಚಲನೆಗೊಳ್ಳುವುದು. ನಲಿಕಲಿ ಬೋಧನೆ ವಿಧಾನದಲ್ಲಿ ಶಿಕ್ಷಕ ಬೊಧನೆಗೆ ಹೆಚ್ಚು ಅವಕಾಶವಿರುವುದಿಲ್ಲ. ಆದರೆ ಗಮನಿಸುವಿಕೆ ಮತ್ತು ಅನುಕೂಲಿಸುವಿಕೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಪೂರ್ವಸಿದ್ಧತೆ ಚಟುವಿಕೆಯಿಂದ ಮಗು ಸ್ವಕಲಿಕೆಗೆ ಓಳಗೊಳ್ಳುವವರೆಗೂ ಮೇಲಿನವರು ಮಗುವಿನ ಕಲಿಕೆಯಲ್ಲಿ ಸಹಕಾರವಾಗಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.
ತಾಲೂಕಿನ ವಿವಿಧ ಶಾಲೆಗಳ ನಲಿಕಲಿ ಶಿಕ್ಷಕರಾದ ಎಂ.ಎಸ್. ಮಠ, ಪುಷ್ಪಾವತಿ, ವಿಜಯಲಕ್ಷ್ಮೀ ಎಚ್. ಕೆ., ಎಂ.ಆರ್. ಕಂಟಿಗೊಂಡ, ಎಸ್.ಜಿ. ಸಪಲಿ, ಬಿ.ಆರ್. ಹಿಟ್ನಳ್ಳಿ, ಬಿ.ಎಂ. ನಂದಿಕೋಲ, ಎಸ್.ಕೆ. ಕಟ್ಟಿಮನಿ, ಬಿ.ಎಸ್. ಚಿಂಚೋಳಿ, ಚಿ.ಪಿ. ಶಹಾಬಾದಿ,ಎಸ್.ಎಸ್. ವಾಲೀಕಾರ, ಡಿ.ಆರ್. ಚಾವರ, ಬಿ.ಎಸ್.ಸಿದರಡ್ಡಿ, ಜಿ.ಜಿ. ಮಾಲಾಬಗಿ, ಡಿ.ವಿ. ಅಡವಿ, ಚಂದು ನಾಯಕ, ಜಿ.ಎಸ್. ನಿಡೋಶಿ, ವಿ.ಕೆ. ನಾಯಕ, ಎಚ್.ಎಸ್. ಅವಟಿ, ಬಿ.ಆರ್. ಮಳ್ಳಿ, ಎಸ್.ಕೆ. ಮೂಡಗಿ, ಎಸ್.ಜಿ. ಆಲಮೇಲ, ಸಿ.ಪಿ. ತಳವಾರ, ಬಿ.ಟಿ. ಸಾತಿಹಾಳ, ಬಿ.ಸಿ. ಕನ್ನೊಳ್ಳಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.