Advertisement

ಐತ್ತೂರು: ಗ್ರಾಮಸ್ಥರಿಂದ ಶ್ರಮದಾನ 

02:19 PM Jun 19, 2018 | |

ಕಡಬ: ಮರ್ದಾಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಲ್ಲಾಜೆ ಅಂತಿಬೆಟ್ಟು ಮಾರ್ಗವಾಗಿ ಕೋರಿಯಾರ್‌ ಮೂಲಕ ಕೋಡಿಂಬಾಳ ಸೇರಬೇಕಾದ ರಸ್ತೆಯು ಸಂಪೂರ್ಣ ನಾದುರಸ್ತಿ ಸ್ಥಿತಿಯಲ್ಲಿದ್ದು, ಪ್ರತಿವರ್ಷದಂತೆಯೇ ಗ್ರಾಮಸ್ಥರೇ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಕಾರ್ಯ ನಡೆಸಿದರು.

Advertisement

ಕಲ್ಲಾಜೆಯಿಂದ ಅಂತಿಬೆಟ್ಟು ಮಾರ್ಗವಾಗಿ ಕೋರಿಯಾರ್‌ ಮೂಲಕ ಕೋಡಿಂಬಾಳವನ್ನು ಸಂಪರ್ಕಿಸುವ ಸುಮಾರು
6 ಕಿ.ಮೀ. ಉದ್ದದ ಸದ್ರಿ ರಸ್ತೆಯು ಸಂಪೂರ್ಣ ಕೆಸರುಮಯವಾಗಿ ವಾಹನ ಸಂಚರಾಕ್ಕೆ ಹರಸಾಹಸಪಡುವಂತಾಗಿದೆ. ಸಾರ್ವ ಜನಿಕರು ನಡೆದು ಹೋಗಲೂ ಸಮಸ್ಯೆ ಎದುರಿಸುವಂತಾಗಿದೆ.

ಐತ್ತೂರು, ಮರ್ದಾಳ, ಸುಂಕದಕಟ್ಟೆ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಪಾಡಂತೂ ಹೇಳತೀರದು. ಕಲ್ಲಾಜೆ -ಅಂತಿಬೆಟ್ಟು ರಸ್ತೆಯು ಐತ್ತೂರು ಗ್ರಾ.ಪಂ. ವ್ಯಾಪ್ತಿಗೊಳಪಟ್ಟಿದ್ದು, ಗ್ರಾ.ಪಂ.ನಿಂದ ರಸ್ತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದರಿಂದ ರಸ್ತೆಯ ಪಕ್ಕದಲ್ಲಿ ಮಳೆನೀರು ಹರಿದುಹೋಗಲು ಚರಂಡಿ ಹಾಗೂ ಮೋರಿ ಇಲ್ಲದೇ ತೀವ್ರ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಗ್ರಾಮ ಸಭೆಗಳಲ್ಲಿ, ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳು – ಜನಪ್ರತಿನಿಧಿಗಳ ಗಮನಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ.

ಗ್ರಾಮಸ್ಥರ ಬೇಡಿಕೆಯಂತೆ ಸದ್ರಿ ರಸ್ತೆಯನ್ನು ಗ್ರಾಮ ಸಡಕ್‌ ಯೋಜನೆಗೆ ಸೇರ್ಪಡೆಗೊಳಿಸಲಾಗಿದ್ದು, ರಸ್ತೆಗೆ ಸಂಪೂರ್ಣವಾಗಿ ಡಾಮರು ಹಾಕಲಾಗುವುದು ಎಂದು ಶಾಸಕರು, ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮಾಹಿತಿ ನೀಡಿದ್ದರು.  ಭರವಸೆ ನೀಡಿ 4 ವರ್ಷಗಳೇ ಕಳೆದರೂ ರಸ್ತೆಯ ಅಭಿವೃದ್ಧಿಯಾಗುವುದು ಕುರಿತು ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ ಎನ್ನುವುದು ಸ್ಥಳೀಯ ಜನರ ದೂರು. ಚುನಾವಣೆಯ ವೇಳೆ ಮತದಾರರ ನೆನಪಾಗುವ ರಾಜಕಾರಣಿಗಳು ಮತ್ತೆ ಬರುವುದು ಮುಂದಿನ ಚುನಾವಣೆಯ ಸಮಯದಲ್ಲಿ.

ಆದುದರಿಂದ ಜನರ ಬೇಡಿಕೆಗಳನ್ನು ಅವರು ಮರೆತೇ ಬಿಡುತ್ತಾರೆ. ಮುಂದಿನ ಲೋಕಸಭಾ ಚುನಾವಣೆಗೆ ಮೊದಲು ರಸ್ತೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಚುನಾವಣೆ ಬಹಿಷ್ಕರಿಸಿ ಚುರುಕುಮುಟ್ಟಿಸ ಬೇಕೆನ್ನುವುದು ಇಲ್ಲಿನ ಜನರ ಅಭಿಪ್ರಾಯವಾಗಿದೆ.

Advertisement

ಅಂಗನವಾಡಿ ಅಗತ್ಯವಿದೆ
ಐತ್ತೂರು ಗ್ರಾಮದ ಕಲ್ಲಾಜೆ 72 ಕಾಲನಿಯಲ್ಲಿ ಅಂಗನವಾಡಿ ಇದ್ದು, ಕಾಲನಿ ಹಾಗೂ ಪರಿಸರದ ಪುಟಾಣಿಗಳಿಗೆ ಅನುಕೂ ಲವಾಗಿದೆ. ಹಾಗೆಯೇ ಅಂತಿಬೆಟ್ಟು ಪ್ರದೇಶಕ್ಕೆ ಅಂಗನವಾಡಿಯ ಅಗತ್ಯವಿದೆ ಎನ್ನುವ ಬೇಡಿಕೆ ಇನ್ನೂ
ಈಡೇರಿಲ್ಲ. ಹಾಗೆಯೇ ಅಂತಿಬೆಟ್ಟು ಪ್ರದೇಶದಲ್ಲಿ ಹಲವಾರು ಮನೆಗಳಿಗೆ ಇನ್ನೂ ಕೂಡ ವಿದ್ಯುತ್‌ ಸಂಪರ್ಕ ಆಗಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಸಂಬಂಧಪಟ್ಟವರು ಬಗೆಹರಿಸುಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಪ್ರಮುಖರು ಆಗ್ರಹಿಸಿದ್ದಾರೆ.

ಗೋಪಾಲ ಗೌಡ, ನವೀನ್‌ ಕಲ್ಲಾಜೆ, ಸೇಸಪ್ಪ ಗೌಡ ಅಂತಿಬೆಟ್ಟು ಅವರ ನೇತ್ವದಲ್ಲಿ ನಡೆದ ಶ್ರಮದಾನದಲ್ಲಿ ಸಿ.ಎ.ಬ್ಯಾಂಕ್‌ ನಿರ್ದೇಶಕ ಪೂವಪ್ಪ ಗೌಡ, ಬಾಲಕೃಷ್ಣ ಗೌಡ, ಶೇಖರ, ಲೋಕೇಶ, ಧರ್ಮಪಾಲ, ಪೂವಪ್ಪ, ಮಧು, ನಾರಾಯಣ, ಲಿಂಗಪ್ಪ, ಉದಯ, ಕೇಶವ, ಪುಟ್ಟಣ್ಣ, ಪೂವಣ್ಣ, ಜನಾರ್ದನ, ದುಗ್ಗಪ್ಪ, ಕುಂಞಣ್ಣ ಗೌಡ, ಚೇತನ, ಕಲ್ಲಾಜೆಯ ರುಕ್ಮಯ್ಯ, ದಿವಾಕರ, ಮಜೀದ್‌, ರಝಾಕ್‌, ಮೂರ್ತಿ, ನಿವೃತ ಮುಖ್ಯಶಿಕ್ಷಕ ಚೆರಿಯನ್‌, ಉಮೇಶ, ಲೋಕಯ್ಯ, ಕೃಷ್ಣಣ್ಣ, ಜನಾರ್ಧನ, ಕೊರಗಪ್ಪ, ಅಶೋಕ, ಚಂದ್ರಕುಮಾರ್‌, ಸಂತೋಷ್‌, ಪದ್ಮನಾಭ ಸಹಿತ 72 ಕಾಲನಿ ಅಂತಿಬೆಟ್ಟು ಹಾಗೂ ಕಲ್ಲಾಜೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಬಸ್‌ ನಿಲ್ದಾಣ ಬೇಕು
ಕಲ್ಲಾಜೆ ಅಂತಿಬೆಟ್ಟು ಭಾಗದ ಪ್ರಯಾಣಿಕರಿಗೆ ಶಾಲಾ ಮಕ್ಕಳಿಗೆ ಕಲ್ಲಾಜೆ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಸಾರ್ವಜನಿಕ ಬಸ್‌ ನಿಲ್ದಾನದ ಅತೀ ಅಗತ್ಯವಿದ್ದು , ಸರಕಾರದ ವತಿಯಿಂದ ಈ ಕುರಿತು ಕ್ರಮ ಕೈಗೊಳ್ಳಬೇಕಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಲವಾರು ವರ್ಷಗಳ ಹಿಂದೆ ಒಕ್ಕೂಟ ಹಾಗೂ ಸ್ವಸಹಾಯ ಸಂಘಗಳು ಒಟ್ಟಾಗಿ ನಿರ್ಮಿಸಿದ ಬಸ್‌ ತಂಗುದಾಣ ಇಲ್ಲಿ ಪ್ರಯಾಣಿಕರಿಗೆ ಆಶ್ರಯ ನೀಡುತ್ತಿದೆ. ರಸ್ತೆ ಅಭಿವೃದ್ಧಿಯೊಂದಿಗೆ ಕಲ್ಲಾಜೆ ಹಾಗೂ ಅಂತಿಬೆಟ್ಟುವಿನಲ್ಲಿ ಬಸ್‌ ನಿಲ್ದಾಣ ನಿರ್ಮಿಸಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next