Advertisement

ದುಡಿದು ತೆರೆಮರೆಗೆ ಸರಿದ “ಟೀಂ ಮೋದಿ’

06:46 AM May 25, 2019 | Team Udayavani |

ಬೆಂಗಳೂರು: ಪ್ರಧಾನಿ ಮೋದಿಯವರ ಪ್ರಚಂಡ ಬಹುಮತಕ್ಕಾಗಿ ಬಿಜೆಪಿ ನಾಯಕರು, ಕಾಯಕರ್ತರಂತೆ ಮೋದಿ ಅಭಿಮಾನಿಗಳು, ಅಭಿಮಾನಿ ಸಂಘಟನೆಗಳು ತೆರೆ ಮರೆಯಲ್ಲಿ ಮಾಡಿದ್ದ ಸೇವೆ ಈಗ ಸಾರ್ಥಕ ರೂಪ ಪಡೆದಿದೆ.

Advertisement

ಅಂತಹ ಸಂಘಟನೆಗಳಲ್ಲಿ ಕರ್ನಾಟಕದ “ಟೀಂ ಮೋದಿ’ ಕೂಡ ಒಂದಾಗಿತ್ತು. ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಡಿ.16ರಂದು ಹುಟ್ಟುಹಾಕಿದ ಈ ಸಂಘಟನೆ, ಏ.23ರಂದು ಎರಡನೇ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಸಂಘಟನೆಯನ್ನು ವಿಸರ್ಜಿಸಿ, ಸದಸ್ಯರನ್ನು ಯುವಬ್ರಿಗೇಡ್‌ನೊಂದಿಗೆ ಸೇರಿಸಿಕೊಂಡು ಸಾಮಾಜಿಕ ಕಾರ್ಯ ಮುಂದುವರಿಸಿದ್ದಾರೆ.

ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕಾದರೆ ಕರ್ನಾಟಕದಿಂದಲೂ ಬಿಜೆಪಿಯ ಹೆಚ್ಚಿನ ಸಂಸದರು ಸಂಸತ್‌ ಪ್ರವೇಶ ಮಾಡಬೇಕೆಂದು ಸತತ ನಾಲ್ಕು ತಿಂಗಳು ರಾಜ್ಯಾದ್ಯಂತ ನಿರಂತರ ಕೆಲಸ ಮಾಡಿದೆ. ಎಲ್ಲಿಯೂ ಯಾವುದೇ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಬಳಸಿಕೊಳ್ಳದೆ, ಮೋದಿ ಸರ್ಕಾರದ ಸಾಧನೆಯನ್ನು ಪ್ರಮುಖವಾಗಿಟ್ಟುಕೊಂಡು ಬಿಜೆಪಿಗೆ ಮತ ಹಾಕಿ ಎಂಬ ಬಹುದೊಡ್ಡ ಅಭಿಯಾನವನ್ನೇ ನಡೆಸಿದೆ.

ಟೀಂ ಮೋದಿ ಮೊದಲಿಗೆ ರಾಜ್ಯದ 300 ಕಡೆ ಬೈಕ್‌ ರ್ಯಾಲಿ ಮಾಡಿತು. ನಂತರ ಮೋದಿ ಸಾಧನೆಯನ್ನು ಮನೆ ಮನೆಗೆ ತಿಳಿಸಲು ಬೇಕಾದ ಕರಪತ್ರವನ್ನು ಸಿದ್ಧಪಡಿಸಿ, ಪ್ರತಿ ಮನೆಗೂ ಹಂಚಲು ಆರಂಭಿಸಿದರು. ಮೋದಿ ಸಾಧನೆಯನ್ನು ಜನ ಸಾಮಾನ್ಯರಿಗೆ ತಿಳಿಸಲು ಅನೇಕರಿಗೆ ತರಬೇತಿಯನ್ನೂ ನೀಡಲಾಯಿತು.

ಮೋದಿಗಾಗಿ ರಥಯಾತ್ರೆ: ಮೋದಿ ಗೆಲುವಿಗಾಗಿ ಟೀಂ ಮೋದಿ ರಥಯಾತ್ರೆಯನ್ನು ರಾಜ್ಯಾದ್ಯಂತ ನಡೆಸಿದೆ. ಎರಡು ರಥಗಳನ್ನು ಸಿದ್ಧಪಡಿಸಿ, ಅದರಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರ ಹಾಗೂ ಕೇಂದ್ರ ಸರ್ಕಾರದ ಸಾಧನೆಯನ್ನು ಸಾರುವ ವಿಡಿಯೋ ಪ್ರದರ್ಶಿಸಿ, ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದರು. ಒಂದೊಂದು ರಥ ದಿನಕ್ಕೆ 12ರಿಂದ 15 ಹಳ್ಳಿಗಳನ್ನು ಪ್ರವೇಶ ಮಾಡಿದೆ. ಸರಿ ಸುಮಾರು 10 ಸಾವಿರಕ್ಕೂ ಹೆಚ್ಚು ಹಳ್ಳಿಗಳನ್ನು ಪ್ರವೇಶಿಸಿದ್ದೇವೆ. ಹಬ್ಬದ ದಿನಗಳಲ್ಲಿ ಅಥವಾ ದೇವಸ್ಥಾನಗಳಲ್ಲಿ, ವಿಶೇಷ ಸಂದರ್ಭದಲ್ಲಿ ಮೋದಿ ಸಾಧನೆಯ ಕರಪತ್ರ ವಿತರಣೆ ಮಾಡಲಾಗಿದೆ ಎಂದು ಟೀಂ ಮೋದಿಯ ಪ್ರವರ್ತಕ ಚಕ್ರವರ್ತಿ ಸೂಲಿಬೆಲೆ “ಉದಯವಾಣಿ’ಗೆ ಮಾಹಿತಿ ನೀಡಿದರು.

Advertisement

116 ರ್ಯಾಲಿ: 57 ದಿನದಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ 116 ರ್ಯಾಲಿಗಳನ್ನು ಟೀಂ ಮೋದಿ ನಡೆಸಿದೆ. ಮುಖ್ಯವಾಗಿ ಕೋಲಾರ, ಚಿಕ್ಕಬಳ್ಳಾಪುರ, ಕಲಬುರಗಿ, ತುಮಕೂರು ಕ್ಷೇತ್ರದಲ್ಲಿ ವ್ಯಾಪಕವಾದ ಪ್ರಚಾರ ಹಾಗೂ ರ್ಯಾಲಿ ನಡೆಸಲಾಗಿದೆ. 116 ರ್ಯಾಲಿಯಲ್ಲಿ 3.15 ಲಕ್ಷ ಜನರು ನೇರವಾಗಿ ಭಾಗವಹಿಸಿದ್ದರು. 35 ಲಕ್ಷ ಜನರು ಫೇಸ್‌ಬುಕ್‌ ಮೂಲಕ ರ್ಯಾಲಿಯ ಲೈವ್‌ ವಾಚ್‌ ಮಾಡಿದ್ದಾರೆ. 1.50 ಲಕ್ಷ ಜನರಿಗೆ ಶೇರ್‌ ಮೂಲಕ ತಲುಪಿಸಿದ್ದೇವೆ. ಯು ಟ್ಯೂಬ್‌ನಲ್ಲಿ 30 ಲಕ್ಷ ಜನರು ವೀಕ್ಷಿಸಿದ್ದಾರೆ. ಒಟ್ಟಾರೆಯಾಗಿ ಮೋದಿ ಅವರನ್ನು ಪ್ರಧಾನಿ ಮಾಡಲು ಸಾಕಷ್ಟು ಶ್ರಮಿಸಿದ್ದೇವೆ. ಅದು ಈಗ ಸಾರ್ಥಕತೆ ಪಡೆದಿದೆ ಎಂದರು.

ಮೋದಿ ದೂತರು: ಟೀಂ ಮೋದಿಯಲ್ಲಿ ಸರಿ ಸುಮಾರು 25 ಸಾವಿರ ಜನ ಕೆಲಸ ಮಾಡಿದ್ದಾರೆ. ಅದರಲ್ಲಿ 350 ಮಂದಿ ನಿರಂತರವಾಗಿ ಡಿ.16ರಿಂದ ಏ.23ರವರೆಗೂ ಸೇವೆ ಸಲ್ಲಿಸಿದ್ದಾರೆ. ಬೂತ್‌ ಮಟ್ಟದಲ್ಲಿ ವ್ಯಾಪಕ ಸಂಘಟನೆ ಮಾಡಿ, ಮೋದಿಗೆ ಮತ ಹಾಕಲು ಬೇಕಾದ ವೇದಿಕೆ ಸಿದ್ಧಪಡಿಸಲು ಮೋದಿ ದೂತರನ್ನು ನೇಮಿಸಲಾಗಿತ್ತು. ಸುಮಾರು 3 ಸಾವಿರ ಜನರು ಮೋದಿ ದೂತರಾಗಿ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ನಾಲ್ಕರಿಂದ ಐದು ಬೂತ್‌ ಹಂಚಿಕೆ ಮಾಡಿದ್ದೆವು. ಹಾಗೆಯೇ ಮೋದಿ ಸಾಧನೆ ತಿಳಿಸಲು ಮೂರು ಕಾಲ್‌ ಸೆಂಟರ್‌ ನಂಬರ್‌ ಕೂಡ ನೀಡಿದ್ದೆವು. ದಿನಕ್ಕೆ 300ರಿಂದ 350 ಕಾಲ್‌ಗ‌ಳು ಬರುತ್ತಿದ್ದವು ಎಂದು ಚಕ್ರವರ್ತಿ ಸೂಲಿಬೆಲೆ ವಿವರ ನೀಡಿದರು.

ಚುನಾವಣೆ ಮುಗಿಯುತ್ತಿದ್ದಂತೆ ಟೀಂ ಮೋದಿ ಕೆಲಸವೂ ಮುಗಿದಿದೆ. ಸಂಘಟನೆಯನ್ನು ವಿಸರ್ಜನೆ ಮಾಡಿ, ಯುವ ಬ್ರಿಗೇಡ್‌ ಕಾರ್ಯ ಮುಂದುವರಿಸಿದ್ದೇವೆ. ಮೋದಿಯವರು ಹೇಳಿದಂತೆ ಚೌಕಿದಾರರಂತೆ ಇನ್ಮುಂದೆ ನಾವೆಲ್ಲರೂ ಸೇವೆ ಸಲ್ಲಿಸಬೇಕು. ಯುವ ಬ್ರಿಗೇಡ್‌ ಮೂಲಕ ನದಿ, ಕಲ್ಯಾಣಿ ಸ್ವಚ್ಛತೆ ಕಾರ್ಯ ಮುಂದುವರಿಯಲಿದೆ.
-ಚಕ್ರವರ್ತಿ ಸೂಲಿಬೆಲೆ, ವಾಗ್ಮಿ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next