Advertisement

ಚೆಕ್‌ಪೋಸ್ಟ್‌ನಲ್ಲಿ ಕಾರ್ಯ ನಿರ್ವಹಣೆ ಕಡ್ಡಾಯ: ರಾಜಶೇಖರ್‌

11:00 AM Mar 12, 2019 | |

ಚಳ್ಳಕೆರೆ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಏ. 18 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಸ್‌. ರಾಜಶೇಖರ್‌ ಸೋಮವಾರ ನಗರದ ತಾಲೂಕು ಪಂಚಾಯತ್‌ ಕಾರ್ಯಾಲಯದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಳ್ಳಕೆರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 7 ತಪಾಸಣಾ ಕೇಂದ್ರಗಳನ್ನು ಗುರುತಿಸಲಾಗಿದೆ. 

ತಪಾಸಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ದಿನದ 24 ಗಂಟೆಗಳ ಕಾಲ ನಿಯೋಜನೆಗೊಂಡ ಅಧಿಕಾರಿಗಳು ತಪಾಸಣಾ ಕೇಂದ್ರದಲ್ಲಿ ಕಡ್ಡಾಯವಾಗಿ ಕಾರ್ಯ ನಿರ್ವಹಿಸಲೇಬೇಕು. ತಪಾಸಣೆ ಕೇಂದ್ರಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಗೆ ಒಟ್ಟು 8 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.

ನಿಯೋಜನೆಗೊಂಡ ತಂಡ ಕಾರ್ಯನಿರ್ವಹಿಸಿದ ನಂತರ ಮತ್ತೂಂದು ತಂಡ ಬರುವ ತನಕ ಸ್ಥಳದಲ್ಲೇ ಇರಬೇಕು. ತಪಾಸಣಾ ವೇಳೆಯಲ್ಲಿ ಪ್ರತಿಯೊಂದು ವಾಹನವನ್ನು ಪರಿಶೀಲನೆ ನಡೆಸಬೇಕು. ಯಾವುದೇ ಕಾರಣಕ್ಕೂ ಯಾವ ಅಧಿಕಾರಿಯೂ ನಿರ್ಲಕ್ಷ್ಯ ತೋರುವಂತಿಲ್ಲ ಎಂದು ತಾಕೀತು ಮಾಡಿದರು.

ತಪಾಸಣಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವವರು ಯಾವುದೇ ಸೌಲಭ್ಯದ ಅಗತ್ಯವಿದ್ದರೆ ಅಥವಾ ಸಮಸ್ಯೆಗಳಿದ್ದರೆ ತಕ್ಷಣವೇ ತಮ್ಮನ್ನಾಗಲೀ ಅಥವಾ ತಹಶೀಲ್ದಾರನ್ನಾಗಲೀ ಸಂಪರ್ಕಿಸಬೇಕು. ಸಂಬಂಧಪಟ್ಟ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು ತಮ್ಮ ವ್ಯಾಪ್ತಿಯ ತಪಾಸಣಾ ಕೇಂದ್ರಗಳಿಗೆ ಮೂಲ ಸೌಲಭ್ಯ ಒದಗಿಸಬೇಕು. ತಪಾಸಣಾ ಕಾರ್ಯಕ್ಕೆ ನಿಯೋಜನೆಗೊಂಡ ಮೊಬೈಲ್‌ನಲ್ಲಿ ವಾಟ್ಸ್‌ಆ್ಯಫ್‌, ಮೆಸೇಜ್‌, ಫೇಸ್‌ಬುಕ್‌ ನೋಡುತ್ತಾ ಕೂರದೆ ವಾಹನಗಳ ಚಲನವಲನದ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸೂಚಿಸಿದರು.

Advertisement

ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಕಾರಿ ಬಿ.ಎಲ್‌. ಈಶ್ವರಪ್ರಸಾದ್‌ ಮಾತನಾಡಿ, ಗ್ರಾಮೀಣ ಭಾಗಗಳ ಮತಗಟ್ಟೆಗೆ ಅವಶ್ಯವಿರುವ ಶೌಚಾಲಯ ಹಾಗೂ ಇನ್ನಿತತರ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಸಂಬಂಧಪಟ್ಟ ಗ್ರಾಪಂ ಪಿಡಿಒಗಳಿಗೆ ಸೂಚಿಸಲಾಗಿದೆ. ಕ್ಷೇತ್ರದ ಎಲ್ಲಾ ಮತಗಟ್ಟೆ ಕೇಂದ್ರಗಳಿಗೆ ಅಧಿಕಾರಿಗಳು ಹಾಗೂ ವೀಕ್ಷಕರು ಭೇಟಿ ನೀಡುತ್ತಾರೆ. ಅದ್ದರಿಂದಅಧಿಕಾರಿಗಳು ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಕರ್ತವ್ಯ ನಿರ್ವಹಿಸುವಂತೆ ಮನವಿನ ಮಾಡಿದರು.

ಸಭೆಯಲ್ಲಿ ವೃತ್ತ ನಿರೀಕ್ಷಕ ಎನ್‌. ತಿಮ್ಮಣ್ಣ, ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಪಿಎಸ್‌ಐ ಕೆ. ಸತೀಶ್‌ ನಾಯ್ಕ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತಿಯೊಂದು ಹಂತದಲ್ಲೂ ಚುನಾವಣಾ ಕಾರ್ಯದಲ್ಲಿ ಹೆಚ್ಚು ಜಾಗ್ರತೆ ವಹಿಸುವುದು ಉತ್ತಮ. ಏಕೆಂದರೆ ಸಣ್ಣ ಲೋಪವಾದರೂ ಅದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸುತ್ತದೆ. ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ಚಟುವಟಿಕೆಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ತಿಳಿಸಬೇಕು. ಅಧಿಕಾರಿಗಳು ಚುನಾವಣೆಯ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಎಚ್ಚರಿಕೆ ವಹಿಸಬೇಕು.
 ತುಷಾರ್‌ ಬಿ. ಹೊಸೂರು, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next